ಸಾರಾಂಶ
ದಕ್ಷಿಣ ಕೊಡಗಿನ ವಿವಿಧ ಕಡೆಗಳಲ್ಲಿ ಕಾಡಾನೆ, ಹುಲಿ, ಚಿರತೆ ಸೇರಿದಂತೆ ಕಾಡು ಪ್ರಾಣಿಗಳು ನಾಡಿಗೆ ಬರುವ ಪ್ರಮಾಣ ಜಾಸ್ತಿಯಾಗಿದ್ದು, ಜನರು ಆತಂಕಗೊಂಡಿದ್ದಾರೆ. ಪೊನ್ನಂಪೇಟೆ ತಾಲೂಕಿನ ಕೋಣನಕಟ್ಟೆಯಲ್ಲಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ ನಿವಾಸಕ್ಕೆ ಬುಧವಾರ ಬೆಳಗ್ಗೆ ಕಾಡಾನೆ ಭೇಟಿ ನೀಡಿದೆ
ಕನ್ನಡಪ್ರಭ ವಾರ್ತೆ ಮಡಿಕೇರಿ
ದಕ್ಷಿಣ ಕೊಡಗಿನ ವಿವಿಧ ಕಡೆಗಳಲ್ಲಿ ಕಾಡಾನೆ, ಹುಲಿ, ಚಿರತೆ ಸೇರಿದಂತೆ ಕಾಡು ಪ್ರಾಣಿಗಳು ನಾಡಿಗೆ ಬರುವ ಪ್ರಮಾಣ ಜಾಸ್ತಿಯಾಗಿದ್ದು, ಜನರು ಆತಂಕಗೊಂಡಿದ್ದಾರೆ. ಪೊನ್ನಂಪೇಟೆ ತಾಲೂಕಿನ ಕೋಣನಕಟ್ಟೆಯಲ್ಲಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ ನಿವಾಸಕ್ಕೆ ಬುಧವಾರ ಬೆಳಗ್ಗೆ ಕಾಡಾನೆ ಭೇಟಿ ನೀಡಿದೆ. ಮನೆಯ ಮುಂಭಾಗದಿಂದ ಪ್ರವೇಶಿಸಿ ಹಿಂಭಾಗಕ್ಕೆ ತೆರಳಿ ಮನೆಗೆ ಸುತ್ತು ಹಾಕಿ ತೆರಳಿರುವ ಘಟನೆ ನಡೆದಿದೆ.ಬೆಳಗ್ಗಿನ ಜಾವ ಮೂರು ಗಂಟೆಯ ಅಂದಾಜಿಗೆ ಆನೆ ಮನೆಯ ಮುಂಭಾಗದಿಂದ ಬಂದು ಕೆಲವು ಹೂ ಕುಂಡಗಳನ್ನು ಧ್ವಂಸ ಮಾಡಿದೆ. ಬಳಿಕ, ಹಿಂಭಾಗದಲ್ಲಿ ಸ್ಟೋರ್ ರೂಮ್ ನಲ್ಲಿ ಇರಿಸಿದ್ದ ಹಲಸಿನಕಾಯಿ ತಿನ್ನಲು ಕಿಟಕಿಯ ಮೂಲಕ ಪ್ರಯತ್ನಿಸಿ ವಾಪಸು ತೆರಳಿರುವ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಈ ಭಾಗದಲ್ಲಿ ಕಾಡಾನೆಗಳು ತೋಟದಲ್ಲಿ ಬೀಡು ಬಿಟ್ಟಿದ್ದು ಇದೀಗ ಆಹಾರ ಅರಸಿ ಮನೆಯ ಅಂಗಳಕ್ಕೂ ಕೂಡ ಪ್ರವೇಶ ಮಾಡುವಲ್ಲಿಗೆ ತಲುಪಿದೆ. ಆನೆಗಳನ್ನು ಅರಣ್ಯ ಇಲಾಖೆ ಕಾಡಿಗೆ ಅಟ್ಟುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.ರಸ್ತೆಯ ಅಡ್ಡ ಬಂದ ಆನೆ: ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನ ತಿತಿಮತಿ ಗ್ರಾಮದಲ್ಲಿ ಬುಧವಾರ ಹೆದ್ದಾರಿಗೆ ನುಗ್ಗಿ ಕಾಡಾನೆಯೊಂದು ವಾಹನಗಳ ಅಟ್ಟಾಡಿಸಿದೆ. ಮೈಸೂರು ವಿರಾಜಪೇಟೆ ನಡುವೆ ಸಂಪರ್ಕ ಕಲ್ಪಿಸುವ ತಿತಿಮತಿ ಕಾಡಾನೆ ದಾಳಿಯಾಗುತ್ತಿದ್ದಂತೆ ವಾಹನ ಸವಾರರು ಚಲ್ಲಾಪಿಲ್ಲಿಯಾಗಿ ಓಡಿದ್ದಾರೆ.
ಗ್ರಾಮದಂಚಿಗೆ ಬಂದಿದ್ದ ಕಾಡಾನೆ ಓಡಿಸುವ ಸಂದರ್ಭ ಒಂಟಿ ಸಲಗ ಹೆದ್ದಾರಿಗೆ ನುಗ್ಗಿದೆ. ಕಾಡಾನೆ ಹೆದ್ದಾರಿಗೆ ನುಗ್ಗುತ್ತಿದ್ದಂತೆ ವಾಹನ ಸವಾರರು ಚೀರಾಡಿದ್ದಾರೆ. ಬಳಿಕ ಹೆದ್ದಾರಿಯಿಂದ ತೋಟದೊಳಕ್ಕೆ ಕಾಡಾನೆ ತೆರಳಿದೆ. ಇದರಿಂದ ತಿತಿಮತಿ ಭಾಗದ ಜನರು ಆತಂಕದಲ್ಲಿದ್ದಾರೆ.ಚಿರತೆ ಪ್ರತ್ಯಕ್ಷ :
ಪೊನ್ನಂಪೇಟೆಯ ಬಾಳೆಲೆ ರಸ್ತೆಯ ಕಿರುಗೂರಿನಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದ ಚಿರತೆ ಮಂಗಳವಾರ ರಾತ್ರಿ 8.3ಕ್ಕೆ ಪುನಃ ಸಾಯಿ ಶಂಕರ್ ವಿದ್ಯಾ ಸಂಸ್ಥೆಯ ಆವರಣದಲ್ಲಿ ಕಾಣಿಸಿಕೊಂಡಿದೆ.ನಂತರ ಚಿರತೆ ಸಿ. ಕಾಳಪ್ಪ ಎಂಬವರ ತೋಟಕ್ಕೆ ತೆರಳಿದ್ದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಕಳೆದೆರಡು ದಿನಗಳಿಂದ ಚಿರತೆ ಈ ಭಾಗದಲ್ಲಿ ಓಡಾಡುತ್ತಿರುವುದರಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.
ಮತ್ತೊಂದು ಕಡೆ ಪೊನ್ನಂಪೇಟೆ ತಾಲೂಕು ಸುಳುಗೋಡು- ದೇವನೂರು ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಎರಡು ಗಬ್ಬದ ಹಸುಗಳ ಮೇಲೆ ಹುಲಿ ದಾಳಿ ನಡೆಸಿ ಬಲಿ ಪಡೆದ ಬೆನ್ನಲ್ಲೇ ಇದೀಗ ಗ್ರಾಮದಲ್ಲಿ ಸಾಕಾನೆಗಳ ಸಹಾಯದಿಂದ ಹುಲಿಯನ್ನು ಅರಣ್ಯಕ್ಕೆ ಅಟ್ಟುವ ಅಥವಾ ಅಗತ್ಯಬಿದ್ದರೆ ಅರವಳಿಕೆ ಮೂಲಕ ಹುಲಿ ಸೆರೆಗೆ ಕಾರ್ಯಾಚರಣೆ ಮುಂದುವರಿದಿದೆ.