ಮಹಿಳೆಗೆ ಗರ್ಭಕೋಶದ ಸುತ್ತ 4.5 ಕೆ.ಜಿ ತೂಕದ ಗಡ್ಡೆ

| Published : Feb 07 2024, 01:52 AM IST

ಸಾರಾಂಶ

ಅಪರೂಪದ ಪ್ರಕರಣದ ಶಸ್ತ್ರಚಿಕಿತ್ಸೆಯಲ್ಲಿ ಪ್ರಸೂತಿ ಸ್ತ್ರಿರೋಗ ತಜ್ಞೆ ಅರ್ಚನಾ ಕೆ.ಎಲ್ ಜೊತೆಗೆ ವೈದ್ಯರಾದ ಡಾ.ಗಿರೀಶ್, ಡಾ.ಪ್ರೇಮಲತಾ, ನರ್ಸ್ ಗಾಯತ್ರಿ, ನಂದಿನಿ, ಭವ್ಯ, ರಾಜು ತಂಡ ಕೈಜೋಡಿಸಿತ್ತು.

ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಶಸ್ತ್ರ ಚಿಕಿತ್ಸೆ

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಮಹಿಳೆಯೊಬ್ಬರ ಗರ್ಭಕೋಶದ ಸುತ್ತ ಬೆಳೆದಿದ್ದ ಬೃಹತ್ ಗಾತ್ರದ ಗಡ್ಡೆಯನ್ನು ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ ಹೊರ ತೆಗೆಯುವಲ್ಲಿ ದೊಡ್ಡಬಳ್ಳಾಪುರದ ಸರ್ಕಾರಿ ತಾಯಿ-ಮಗು ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.

ಗರ್ಭಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಶಿಲ್ಪಾ (35) ಎಂಬವರು ಮಂಗಳವಾರ ನಗರದ ಸರ್ಕಾರಿ ಆಸ್ಪತ್ರೆಗೆ ಹೊಟ್ಟೆನೋವು, ಸುಸ್ತು ಎಂದು ದಾಖಲಾಗಿದ್ದರು. ವೈದ್ಯರು ಮಹಿಳೆಯನ್ನು ಪರೀಕ್ಷಿಸಿದಾಗ ಹೊಟ್ಟಿಯಲ್ಲಿ 4 ರಿಂದ 5 ಕೆ.ಜಿಯಷ್ಟು ದೊಡ್ಡ ಗಾತ್ರದ ಗಡ್ಡೆ ಇರುವುದು ಪತ್ತೆಯಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪ್ರಸೂತಿ ತಜ್ಞೆ ಡಾ.ಅರ್ಚನಾ ಕೆ.ಎಲ್ ನೇತೃತ್ವದ ವೈದ್ಯರ ತಂಡ, ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಬಳಿಕ ವೈದ್ಯೆ ಡಾ.ಅರ್ಚನಾ ಕೆ.ಎಲ್ ಮಾತನಾಡಿ, ಸಾಮಾನ್ಯವಾಗಿ ಮಹಿಳೆಯರ ಗರ್ಭಕೋಶ, ಅಂಡಾಶಯಗಳಲ್ಲಿ ಗಡ್ಡೆಯು 100ಕ್ಕೆ 10 ಜನರಲ್ಲಿ ಸಣ್ಣದಾಗಿ ಕಂಡುಬರುತ್ತದೆ. ಆದರೆ, ಅಚ್ಚರಿ ಎಂಬಂತೆ ಈ ಮಹಿಳೆಯ ಹೊಟ್ಟೆಯಲ್ಲಿ 4 ರಿಂದ 5 ಕೆಜಿ ತೂಕದ ಗಡ್ಡೆ ಪತ್ತೆಯಾಗಿದೆ. ಮಹಿಳೆ ಒಂದೆರಡು ದಿನ ತಡವಾಗಿ ಆಸ್ಪತ್ರೆಗೆ ಬಂದಿದ್ದರೆ ಅಪಾಯದ ಸಾಧ್ಯತೆಯಿತ್ತು. ಸದ್ಯ ಗರ್ಭಕೋಶದ ಸುತ್ತ ಬೆಳೆದಿದ್ದ ದೊಡ್ಡ ಗಾತ್ರದ ಗಡ್ಡೆಯನ್ನು ಹೊರತೆಗೆಯಲಾಗಿದ್ದು, ಮಹಿಳೆ ಆರೋಗ್ಯವಾಗಿದ್ದಾರೆ. ಇದೊಂದು ಕ್ಲಿಷ್ಟಕರವಾದ ಶಸ್ತ್ರ ಚಿಕಿತ್ಸೆ ಎಂದು ಪರಿಗಣಿಸಲಾಗಿದ್ದು, ಮಹಿಳೆ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದರು.

ಶಸ್ತ್ರಚಿಕತ್ಸೆಯ ತಂಡದ ಭಾಗವಾಗಿದ್ದ ಡಾ.ಪ್ರೇಮಲತಾ ಮಾತನಾಡಿ, ಇದೊಂದು ಗಂಭೀರ ಪ್ರಕರಣವಾಗಿತ್ತು. ಅರವಳಿಕೆ ನೀಡುವ ಮುನ್ನಾ ರಕ್ತದೊತ್ತಡ, ಉಸಿರಾಟದ ಸಮಸ್ಯೆಗಳನ್ನು ನಿಯಂತ್ರಣಕ್ಕೆ ತಂದು ಬಳಿಕ ಶಸ್ತ್ರಚಿಕಿತ್ಸೆ ನಡೆಸಲಾಯಿತು. ರಕ್ತದ ಅಗತ್ಯತೆ ಹೆಚ್ಚಾಗಿದ್ದರಿಂದ ಮುಂಚಿತವಾಗಿಯೇ ಯೂನಿಟ್‌ಗಳಷ್ಟು ರಕ್ತವನ್ನು ಮೀಸಲಿಡಲಾಗಿತ್ತು. ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದರು.

ಅಪರೂಪದ ಪ್ರಕರಣದ ಶಸ್ತ್ರಚಿಕಿತ್ಸೆಯಲ್ಲಿ ಪ್ರಸೂತಿ ಸ್ತ್ರಿರೋಗ ತಜ್ಞೆ ಅರ್ಚನಾ ಕೆ.ಎಲ್ ಜೊತೆಗೆ ವೈದ್ಯರಾದ ಡಾ.ಗಿರೀಶ್, ಡಾ.ಪ್ರೇಮಲತಾ, ನರ್ಸ್ ಗಾಯತ್ರಿ, ನಂದಿನಿ, ಭವ್ಯ, ರಾಜು ತಂಡ ಕೈಜೋಡಿಸಿತ್ತು.

---------

ದೊಡ್ಡಬಳ್ಳಾಪುರದ ತಾಯಿ-ಮಗು ಆಸ್ಪತ್ರೆಯ ಡಾ.ಅರ್ಚನಾ ನೇತೃತ್ವದ ವೈದ್ಯರ ತಂಡ ಮಹಿಳೆಯೊಬ್ಬರ ಗರ್ಭಕೋಶದಲ್ಲಿದ್ದ 4.5 ಕೆ.ಜಿ ತೂಕದ ಗಡ್ಡೆಯನ್ನು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿರುವುದು.