ಸಾರಾಂಶ
ಮಹಿಳೆಯರು ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ಅವರನ್ನು ಅಡುಗೆ ಮನೆಗೆ ಸೀಮಿತಗೊಳಿಸುವ ಪರಂಪರೆ, ಚಿಂತನೆ ಇನ್ನೂ ಮುಂದುವರೆದಿದೆ. ಆದರೆ, ಮಹಿಳೆಯರು ಜಗತ್ತನ್ನೇ ತಲುಪಬಲ್ಲ ಶಕ್ತಿ ಹೊಂದಿದ್ದಾರೆ ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಆರ್.ಮಲ್ಲಾಡದ ಹೇಳಿದರು.
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಮಹಿಳೆಯರು ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ಅವರನ್ನು ಅಡುಗೆ ಮನೆಗೆ ಸೀಮಿತಗೊಳಿಸುವ ಪರಂಪರೆ, ಚಿಂತನೆ ಇನ್ನೂ ಮುಂದುವರೆದಿದೆ. ಆದರೆ, ಮಹಿಳೆಯರು ಜಗತ್ತನ್ನೇ ತಲುಪಬಲ್ಲ ಶಕ್ತಿ ಹೊಂದಿದ್ದಾರೆ ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಆರ್.ಮಲ್ಲಾಡದ ಹೇಳಿದರು.ಇಲ್ಲಿನ ತಾಪಂ ಸಭಾಭವನದಲ್ಲಿ ಶನಿವಾರ ಆಯೋಜಿಸಿದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ಕಾನೂನಿನ ಅರಿವು ಮತ್ತು ಹಕ್ಕುಗಳ ಪ್ರಜ್ಞೆ ಇರಬೇಕು. ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಮಹಿಳೆಯರ ಸಕ್ರಿಯ ಪಾಲ್ಗೊಳ್ಳುವಿಕೆ ಅತಿ ಅವಶ್ಯಕವಾಗಿದೆ. ಮಹಿಳೆಯರ ಸಬಲತೆ ಮತ್ತು ಸ್ವಾಯತ್ತತೆಯೇ ನಿಜವಾದ ಪ್ರಗತಿಯ ದಾರಿ ಎಂದರು.ನರೇಗಾ ಕೂಲಿಕಾರ್ಮಿಕ ಮಹಿಳೆ ಚಂದ್ರವ್ವ ಬೂಗಡಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನೆ ಸಹಾಯಕ ನಿರ್ದೇಶಕಿ ಸವಿತಾ ಹಲಕಿ, ತಾಪಂ ವ್ಯವಸ್ಥಾಪಕ ಅವಿನಾಶ ಹೊಳೆಪ್ಪಗೋಳ, ನರೇಗಾ ಸಹಾಯಕ ನಿರ್ದೇಶಕ ಪಿ.ಲಕ್ಷ್ಮೀನಾರಾಯಣ, ಪಂಚಾಯತ್‌ರಾಜ್ ಸಹಾಯಕ ನಿರ್ದೇಶಕ ರಾಜು ಢಾಂಗೆ, ಎನ್‌ಆರ್‌ಎಲ್‌ಎಂ ಟಿಪಿಎಂ ರಘುಚಂದ್ರ ಕಾಂಬಳೆ, ಪಿಡಿಒಗಳಾದ ಶೀಲಾ ತಳವಾರ, ಕವಿತಾ ವಾಘೆ, ಶೋಭಾ ಮಗದುಮ್ಮ ಮತ್ತಿತರರು ಉಪಸ್ಥಿತರಿದ್ದರು. ಅಶ್ವಿನಿ ಬೇವಿನಕಟ್ಟಿ ನಿರೂಪಿಸಿದರು. ಪಿಡಿಒ ಸಾವಿತ್ರಿ ಬ್ಯಾಕೂಡ ಸ್ವಾಗತಿಸಿದರು. ರಘುಚಂದ್ರ ಕಾಂಬಳೆ ವಂದಿಸಿದರು.ಕೂಲಿಕಾರ್ಮಿಕ ಮಹಿಳೆಗೆ ಅಧ್ಯಕ್ಷತೆಹುಕ್ಕೇರಿ ತಾಪಂ ಸಭಾಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಲವು ವೈಶಿಷ್ಟ್ಯತೆಗಳಿಗೆ ಸಾಕ್ಷಿಯಾಯಿತು. ಸಂಪ್ರದಾಯದಂತೆ ಅಧ್ಯಕ್ಷತೆ ವಹಿಸಬೇಕಿದ್ದ ತಾಪಂ ಇಒ ಮಲ್ಲಾಡದ ಅವರು ಕಾರ್ಯಕ್ರಮದಲ್ಲಿದ್ದ ನರೇಗಾ ಕೂಲಿಕಾರ್ಮಿಕ ಹಿರಿಯ ಮಹಿಳೆಯನ್ನು ವೇದಿಕೆಗೆ ಕರೆತಂದು ಅಧ್ಯಕ್ಷತೆ ವಹಿಸುವಂತೆ ಕೋರಿಕೊಂಡರು. ಈ ಮೂಲಕ ಇಒ ಮಲ್ಲಾಡದ ಅವರು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಈ ಮಹಿಳೆ ನರೇಗಾ ಯೋಜನೆಯಡಿ 100 ಮಾನವ ದಿನಗಳನ್ನು ಪೂರೈಸಿದ್ದಾಳೆ. ಇನ್ನು ತಾಲೂಕಿನ ವಿವಿಧ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿದ 22 ಮಹಿಳೆಯರನ್ನು ಇದೇ ವೇಳೆ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. ಇದರೊಂದಿಗೆ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಸಮಾನತೆ, ಸ್ವಾತಂತ್ರ್ಯ ಮತ್ತು ಗೌರವ ಪ್ರತಿಯೊಬ್ಬ ಮಹಿಳೆಯ ಹಕ್ಕುಗಳು ಆಗಬೇಕಾಗಿದೆ. ಅದಕ್ಕಾಗಿ ನಿರಂತರ ಹೋರಾಟ ಮತ್ತು ಶಿಕ್ಷಣ ಅವಶ್ಯಕ. ದೌರ್ಜನ್ಯ, ಶೋಷಣೆ, ಅಸಮಾನತೆ, ಆರ್ಥಿಕ-ಶೈಕ್ಷಣಿಕ ಅಡೆತಡೆಗಳು ಮಹಿಳೆಯರ ಮುನ್ನಡೆಗೆ ಬಾಧಕವಾಗುತ್ತಿವೆ. ಆದರೂ ಸವಾಲುಗಳನ್ನು ಧೈರ್ಯ, ಮನೋಬಲ ಮತ್ತು ಆತ್ಮವಿಶ್ವಾಸದಿಂದ ಎದುರಿಸುವ ಶಕ್ತಿ ಮಹಿಳೆಯರಲ್ಲಿದೆ.-ಟಿ.ಆರ್.ಮಲ್ಲಾಡದ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ.