ಮಹಿಳೆಯ ಜೀವನ ಬಾಕ್ಸಿಂಗ್‌‌ನಂತೆ: ನ್ಯಾ.ಸುಮಲತಾ

| Published : Mar 17 2025, 01:31 AM IST

ಸಾರಾಂಶ

ಉಡುಪಿ ವಕೀಲರ ಸಂಘದ ವತಿಯಿಂದ ನ್ಯಾಯಾಲಯದ ಆವರಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಮಹಿಳೆಯ ಜೀವನ ಬಾಕ್ಸಿಂಗ್‌ನಂತೆ, ಹಲವಾರು ಬಾರಿ ಆಕೆ ಕೆಳಗೆ ಬಿದ್ದರೂ ಅಷ್ಟೇ ವೇಗದಲ್ಲಿ ಮೇಲಕ್ಕೇಳುವಂತಹ ಸಾಮರ್ಥ್ಯ ಹೊಂದಿದ್ದಾಳೆ. ಯಶಸ್ಸು ಎಂಬುವುದು ಸುಲಭದಲ್ಲಿ ಗಿಟ್ಟಿಸಿಕೊಳ್ಳುವುದಿಲ್ಲ. ಈ ಕಾರಣವನ್ನಿಟ್ಟುಕೊಂಡು ಮಹಿಳೆ ಹಿಂದೆ ಸರಿಯುವುದು ಕೂಡ ಸರಿಯಲ್ಲ. ಕಠಿಣ ಪರಿಶ್ರಮ, ಶ್ರದ್ಧೆಯಿಂದ ಸಾಧನೆ ಮಾಡಲು ಸಾಧ್ಯವಿದೆ. ಇದಕ್ಕಾಗಿ ರಾತ್ರಿ-ಹಗಲು ಶ್ರಮ ಪಡಬೇಕು ಎಂದು ಹೈಕೋರ್ಟ್ ನ್ಯಾ.ಡಾ. ಚಿಲ್ಲಾಕೂರ್ ಸುಮಲತಾ ಹೇಳಿದರು.ಅವರು ಶನಿವಾರ ಉಡುಪಿ ವಕೀಲರ ಸಂಘದ ವತಿಯಿಂದ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಲಾದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಮಹಿಳೆ ಏನನ್ನೂ ಬೇಕಿದ್ದರೂ ಸಾಧಿಸಬಲ್ಲಳು ಎಂಬುವುದಕ್ಕೆ ಹಲವಾರು ಉದಾಹರಣೆಗಳಿವೆ. ವಿವಿಧ ವೃತ್ತಿ ಕ್ಷೇತ್ರಗಳಲ್ಲಿಯೂ ಆಕೆಯ ಪಾತ್ರ ಹಿರಿದಾಗಿದೆ. ಮಹಿಳೆಯರು ತುಂಬಾ ಪರಿಶ್ರಮ ಪಡುತ್ತಾರೆ. ಹಲವಾರು ಸವಾಲುಗಳನ್ನು ಎದುರಿಸಿಕೊಂಡು ಮುನ್ನಡೆಯುತ್ತಾರೆ ಮತ್ತು ಯಶಸ್ಸು ಸಾಧಿಸಿದ್ದಾರೆ ಎಂದರು.ಕಾನೂನು ಕ್ಷೇತ್ರದಲ್ಲಿಯೂ ಮಹಿಳೆಯರಿಗೆ ಹಲವಾರು ರೀತಿಯ ಅವಕಾಶಗಳಿದ್ದು, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಹಾಗೆಂದು ಪುರುಷರ ಬಗ್ಗೆ ತಾರತಮ್ಯ ಧೋರಣೆ ಇರಕೂಡದು ಎಂದು ಹೇಳಿದರು.ಪ್ರಧಾನ ಜಿಲ್ಲಾ ಮತ್ತು ನ್ಯಾಯಾಲಯದ ನ್ಯಾಯಧೀಶ ಕಿರಣ್ ಎಸ್. ಗಂಗಣ್ಣನವರ್ ಅಧ್ಯಕ್ಷತೆ ವಹಿಸಿದ್ದರು. ಹೈಕೋರ್ಟಿನ ಹಿರಿಯ ನ್ಯಾಯವಾದಿ ಎಸ್.ಬಸವರಾಜ್ ಮುಖ್ಯ ಅತಿಥಿಯಾಗಿದ್ದರು. ವಕೀಲರ ಸಂಘದ ಪ್ರ.ಕಾರ್ಯದರ್ಶಿ ರಾಜೇಶ್ ಎ.ಆರ್. ಉಪಸ್ಥಿತರಿದ್ದರು. ವಕೀಲರ ಸಂಘದ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕಿ ಲವೀನಾ ಫರ್ನಾಂಡಿಸ್ ವಂದಿಸಿದರು. ನ್ಯಾಯವಾದಿ ಸಹನಾ ಕುಂದರ್ ನಿರೂಪಿಸಿದರು.ಇದೇ ವೇದಿಕೆಯಲ್ಲಿ ಉಡುಪಿ ವಕೀಲರ ಸಂಘದ ಸದಸ್ಯರಾಗಿದ್ದು, ಇತ್ತೀಚೆಗೆ ಮೃತಪಟ್ಟ ಸುಲತಾ ಅವರ ಪುತ್ರನಿಗೆ ಮಹಿಳಾ ವಕೀಲರಿಂದ ಸಹಾಯಧನ ಹಸ್ತಾಂತರಿಸಲಾಯಿತು.