ಪೊಲೀಸ್‌ ಬಟ್ಟೆ ಧರಿಸಿ ವಂಚಿಸುತ್ತಿದ್ದ ಮಹಿಳೆ ಹಾಸನದಲ್ಲಿ ಬಂಧನ

| Published : Mar 25 2024, 12:56 AM IST

ಪೊಲೀಸ್‌ ಬಟ್ಟೆ ಧರಿಸಿ ವಂಚಿಸುತ್ತಿದ್ದ ಮಹಿಳೆ ಹಾಸನದಲ್ಲಿ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಪೊಲೀಸ್ ಅಧಿಕಾರಿ ಎಂದು ಸಮವಸ್ತ್ರ ಧರಿಸಿ ಅಮಾಯಕರಿಂದ ಹಣ, ಒಡವೆ ವಸೂಲಿ ಮಾಡಿದ್ದ ನಯವಂಚಕಿಯನ್ನು ಪೊಲೀಸರು ಬಂಧಿಸಿರುವ ಘಟನೆ ಹಾಸನದ ವಿಜಯನಗರ ಬಡಾವಣೆ ಎರಡನೇ ಹಂತದಲ್ಲಿ ನಡೆದಿದೆ.‌

ವಿಯನಗರ ಬಡಾವಣೆಯಲ್ಲಿ ಘಟನೆ । ಗಾರ್ಮೆಂಟ್ಸ್‌ನಲ್ಲಿ ಕೆಲಸ

ಕನ್ನಡಪ್ರಭ ವಾರ್ತೆ ಹಾಸನ

ಪೊಲೀಸ್ ಅಧಿಕಾರಿ ಎಂದು ಸಮವಸ್ತ್ರ ಧರಿಸಿ ಅಮಾಯಕರಿಂದ ಹಣ, ಒಡವೆ ವಸೂಲಿ ಮಾಡಿದ್ದ ನಯವಂಚಕಿಯನ್ನು ಪೊಲೀಸರು ಬಂಧಿಸಿರುವ ಘಟನೆ ಹಾಸನದ ವಿಜಯನಗರ ಬಡಾವಣೆ ಎರಡನೇ ಹಂತದಲ್ಲಿ ನಡೆದಿದೆ.‌

ರಾಮನಗರ ಜಿಲ್ಲೆ, ಮಾಗಡಿ ತಾಲೂಕಿನ, ಲಕ್ಕನಹಳ್ಳಿ ಗ್ರಾಮದ ನಿವೇದಿತಾ ಎಂ. ಬಂಧಿತ ಮಹಿಳೆ. ರಾಮನಗರದಿಂದ ಬಂದು ಹಾಸನದ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ನಿವೇದಿತಾ ಪೊಲೀಸ್ ಅಧಿಕಾರಿ ವೇಷ ಧರಿಸಿ ಎಲ್ಲರಿಗೂ ಮಂಕುಬೂದಿ ಎರಚಿದ್ದಳು.

ಸುನೀಲ್‌ ಎಂಬುವವರ ಪತ್ನಿ ಕವನ ಅವರ ದೂರು ಆಧರಿಸಿ ನಿವೇದಿತಾಳನ್ನು ಬಂಧಿಸಿ ತನಿಖೆ ನಡೆಸಿದ ವೇಳೆ ಸ್ಪೋಟಕ‌‌ ಮಾಹಿತಿ ಬಯಲಾಗಿದೆ. ‘ನಾನು ಪೊಲೀಸ್ ಅಧಿಕಾರಿ’ ಎಂದು ನಿವೇದಿತಾ ಅನೇಕರಿಗೆ ವಂಚಿಸಿದ್ದು ಹಾಸನ ನಗರದ ಹಲವು ಪ್ರತಿಷ್ಠಿತ ಖಾಸಗಿ ಶಾಲೆಗಳ‌ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪೊಲೀಸ್ ಸಮವಸ್ತ್ರದಲ್ಲೆ ಭಾಗವಹಿಸಿ ಭಾಷಣ ಮಾಡಿದ್ದಾಳೆ.‌ ಇದೀಗ ವಂಚಕಿಯ ಬಣ್ಣ ಬಯಲಾಗಿದ್ದು ಎಲ್ಲರೂ ಹುಬ್ಬೇರಿಸುವಂತಾಗಿದೆ.‌ ಪ್ರಕರಣ ದಾಖಲಿಸಿಕೊಂಡಿರುವ ಪೆನ್‌ಷನ್ ಮೊಹಲ್ಲಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಏನಿದು ಘಟನೆ?

ನಾಲ್ಕು ತಿಂಗಳ ಹಿಂದೆ ಅಗಲಹಳ್ಳಿ ಗ್ರಾಮದ ಸುನೀಲ್ ಎಂಬುವವರೊಂದಿಗೆ ವಿಜಯನಗರ ನಿವಾಸಿ ಕವನ ವಿವಾಹವಾಗಿದ್ದು, ಸಂಸಾರದಲ್ಲಿ ಹೊಂದಾಣಿಕೆ ಆಗದ ಕಾರಣ ತವರು ಮನೆ ಸೇರಿದ್ದರು. ಕವನ ಪತಿ ಸುನೀಲ್‌ಗೆ ನಿವೇದಿತಾ ಪರಿಚಯವಿದ್ದು, ‘ನಾನು ಪೊಲೀಸ್ ಅಧಿಕಾರಿ’ ಎಂದು ಹೇಳಿಕೊಂಡಿದ್ದಳು. ಇದನ್ನು ನಂಬಿದ್ದ ಸುನೀಲ್ ನಿವೇದಿತಾ ಬಳಿ ತನ್ನ ಸಂಸಾರದ ಸಮಸ್ಯೆ ಹೇಳಿಕೊಂಡಿದ್ದರು, ‘ನಾನು ನಿನ್ನ ಕುಟುಂಬದ ಸಮಸ್ಯೆ ಬಗೆಹರಿಸುತ್ತೇನೆ’ ಎಂದು ಪೊಲೀಸ್ ಅಧಿಕಾರಿ ಸಮವಸ್ತ್ರದಲ್ಲಿ ಕವನ ಮನೆಗೆ ಬಂದು, ‘ನಾನು ಎಸ್‌ಪಿ ವಿಚಾರಣೆಗಾಗಿ ಬಂದಿದ್ದೇನೆ. ನಿನ್ನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುತ್ತೇನೆ’ ಹೇಳಿ ಕವನ ಮೊಬೈಲ್ ಪೋನ್ ಕಸಿದುಕೊಂಡು ಬೆದರಿಕೆ ಒಡ್ಡಿದ್ದಳು. ಅಲ್ಲದೇ ಸುನೀಲ್‌ ಅವರನ್ನು ಕವನ ಮನೆಗೆ ಕರೆಸಿ ‘ನಿಮ್ಮ ಮಗಳಿಗೆ ಬುದ್ಧಿ ಹೇಳಿ, ನಿಮ್ಮ ಮಗಳದ್ದೇ ತಪ್ಪಿದೆ ಕೂಡಲೇ ಡಿವೋರ್ಸ್ ಕೊಡಿಸಿ’ ಎಂದು ಹೇಳಿದ್ದಳು.‌

‘ನಿನ್ನ ಮದುವೆಯಾಗಿ ಸುನೀಲ್‌ಗೆ ಸಾಕಷ್ಟು ನಷ್ಟವಾಗಿದೆ’ ಎಂದು ಕವನಗೆ ಧಮ್ಕಿ ಹಾಕಿ 20 ಗ್ರಾಂ ಚಿನ್ನದ ಸರ, 10 ಗ್ರಾಂ ಚಿನ್ನದ ಉಂಗುರ, 2000 ಸಾವಿರ ರು. ನಗದು ಪಡೆದುಕೊಂಡು ಹೋಗಿದ್ದಳು. ನಿವೇದಿತಾ ಮೇಲೆ ಅನುಮಾನಗೊಂಡ ಕವನ ಪೆನ್‌ಷನ್ ಮೊಹಲ್ಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.‌