ಸಾರಾಂಶ
ಅನೈತಿಕ ಸಂಬಂಧವೇ ಈ ರೀತಿ ಪತಿಯನ್ನು ಹತ್ಯೆ ಮಾಡಲು ಕಾರಣ ಎನ್ನಲಾಗಿದೆ.
ಮುಂಡಗೋಡ: ಮರ್ಮಾಂಗ ಹಿಸುಕಿ ಕೊಲೆ ಮಾಡಿ ಆಕಸ್ಮಿಕ ಸಾವು ಎಂದು ಬಿಂಬಿಸಿ ಅಂತ್ಯಕ್ರಿಯೆ ಮಾಡಿದ್ದ ಪ್ರಕರಣಕ್ಕೆ 15 ದಿನಗಳ ನಂತರ ತಿರುವು ಸಿಕ್ಕಿದ್ದು, ಪತ್ನಿಯೇ ಪತಿಯನ್ನು ಕೊಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿ ಪತ್ನಿ ಶಾಂತವ್ವ ಟೊಪಣ್ಣ ಲಮಾಣಿಯನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ.
ಪಟ್ಟಣದ ಲಂಬಾಣಿ ತಾಂಡಾದ ಟೋಪಣ್ಣ ಜಗನಪ್ಪ ಲಮಾಣಿ (೪೪) ಎಂಬವನೇ ಕೊಲೆಯಾದ ವ್ಯಕ್ತಿ. ತೀವ್ರ ಕುಡಿತದ ಚಟಕ್ಕೆ ದಾಸನಾಗಿದ್ದ ಟೋಪಣ್ಣ ಕಳೆದ ೧೫ ದಿನಗಳ ಹಿಂದೆ ಮದ್ಯ ಸೇವಿಸಿ ಮನೆಗೆ ಬಂದಿದ್ದ. ಆ ಸಂದರ್ಭದಲ್ಲಿ ಆತನನ್ನು ಕೊಲೆ ಮಾಡಿದ ಪತ್ನಿ ಶಾಂತವ್ವ, ಕುಡಿದ ಅಮಲಿನಲ್ಲಿ ನಿಯಂತ್ರಣ ತಪ್ಪಿ ಬಿದ್ದು ಸಾವಿಗೀಡಾಗಿದ್ದಾನೆ ಎಂದು ಸುದ್ದಿ ಹಬ್ಬಿಸಿದ್ದಳು. ಅದನ್ನೆ ನಿಜವೆಂದು ನಂಬಿ ಹಿರಿಯರು ಟೋಪಣ್ಣನ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದರು.ಆದರೆ ಶಾಂತವ್ವ ಇತ್ತೀಚೆಗೆ ಮೊಬೈಲ್‌ನಲ್ಲಿ ವ್ಯಕ್ತಿಯೊಬ್ಬರ ಜತೆ ಮಾತನಾಡುವಾಗ ಗಂಡನ ಮರ್ಮಾಂಗವನ್ನು ಹಿಚುಕಿ ಕೊಲೆ ಮಾಡಿದ್ದೇನೆ ಎಂದು ಹೇಳುವುದನ್ನು ಕೇಳಿಸಿಕೊಂಡ ಅಕ್ಕಪಕ್ಕದ ಮನೆಯವರು ಸಮಾಜದ ಹಿರಿಯರಿಗೆ ವಿಷಯ ತಿಳಿಸಿದ್ದಾರೆ. ಹಿರಿಯರು ಈ ಬಗ್ಗೆ ಸಭೆ ಸೇರಿ ಶಾಂತವ್ವನ ಮೊಬೈಲ್ ಫೋನ್ ಪರಿಶೀಲಿಸಿ ವಿಚಾರಣೆ ನಡೆಸಿದಾಗ ಗಂಡನ ಮರ್ಮಾಂಗವನ್ನು ಹಿಚುಕಿ ಕೊಲೆ ಮಾಡಿದ್ದೇನೆ ಎಂದು ಒಪ್ಪಿದ್ದಾಳೆ ಎನ್ನಲಾಗಿದ್ದು, ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅನೈತಿಕ ಸಂಬಂಧವೇ ಈ ರೀತಿ ಪತಿಯನ್ನು ಹತ್ಯೆ ಮಾಡಲುಕಾರಣ ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಶಾಂತವ್ವನನ್ನು ಬಂಧಿಸಿದ್ದಾರೆ.