ಬಹುರೂಪಿ ಚಿಂತನೆ ಕೇಂದ್ರಿತ ಕೃತಿ: ಪ್ರೊ.ಸಬಿಹಾ ಭೂಮಿ ಗೌಡ

| Published : Jan 21 2025, 12:30 AM IST

ಬಹುರೂಪಿ ಚಿಂತನೆ ಕೇಂದ್ರಿತ ಕೃತಿ: ಪ್ರೊ.ಸಬಿಹಾ ಭೂಮಿ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಬಹು ಓದು ಬಳಗ ಹಾಗೂ ಆಕೃತಿ ಆಶಯ ಪಬ್ಲಿಕೇಶನ್ ನ ಸಹಯೋಗದಲ್ಲಿ ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ರಾಬರ್ಟ್ ಸಿಕ್ವೇರಾ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊಫೆಸರ್ ಸಬಿಹಾ ಭೂಮಿಗೌಡ ಕೃತಿ ಲೋಕಾರ್ಪಣೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಅವಿಭಜಿತ ದಕ್ಷಿಣ ಕನ್ನಡದ ಬಹುರೂಪಿ ಚಿಂತನೆಗಳನ್ನು ಒಂದೆಡೆ ಕಟ್ಟಿಕೊಡುವ ಕೃತಿಯೇ ‘ಅವಿಭಜಿತ ದಕ್ಷಿಣ ಕನ್ನಡದ ಮಹಿಳಾ ಚಿಂತನೆ’ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊಫೆಸರ್ ಸಬಿಹಾ ಭೂಮಿಗೌಡ ಹೇಳಿದರು.

ಬಹು ಓದು ಬಳಗ ಹಾಗೂ ಆಕೃತಿ ಆಶಯ ಪಬ್ಲಿಕೇಶನ್ ನ ಸಹಯೋಗದಲ್ಲಿ ಇಲ್ಲಿನ ಸಂತ ಅಲೋಶಿಯಸ್ ಕಾಲೇಜಿನ ರಾಬರ್ಟ್ ಸಿಕ್ವೇರಾ ಸಭಾಂಗಣದಲ್ಲಿ ಭಾನುವಾರ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು 1995 ರಿಂದ 2023ರವರೆಗಿನ ಮೂರು ದಶಕಗಳ ಕಾಲದ ಈ ಭಾಗದ ಲೇಖಕ ಲೇಖಕಿಯರು ಸಾಹಿತಿ, ಸಾಹಿತ್ಯ, ಸಂಸ್ಕೃತಿ ಮತ್ತು ಸ್ತ್ರೀ ವಾದಿ ತಾತ್ವಿಕತೆಯ ಬಗ್ಗೆ ಏನನ್ನು ಯೋಚನೆ ಮಾಡಿದ್ದಾರೆ, ಕಾಲ ಕಾಲಕ್ಕೆ ಅನುಗುಣವಾಗಿ ಅದನ್ನು ಹೇಗೆ ಅಭಿವ್ಯಕ್ತಿಗೊಳಿಸಿದ್ದಾರೆ ಎಂಬುದು ಈ ಪುಸ್ತಕದ ಓದಿನಿಂದ ತಿಳಿದುಕೊಳ್ಳಬಹುದು ಎಂದು ಅವರು ಹೇಳಿದರು. ಕೃತಿ ವಿಮರ್ಶೆ ಮಾಡಿದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ರಾಜಲಕ್ಷ್ಮಿ ಎನ್. ಕೆ. ಮಾತನಾಡಿ, ಈ ಕೃತಿಯನ್ನು ಮಾತು-ಮಂಥನ -ಚಿಂತನ ಈ ಮೂರು ಕ್ರಮದಲ್ಲಿ ವಿಮರ್ಶೆಗೆ ಒಳಪಡಿಸಬಹುದು. ಓದಿಸಿಕೊಂಡು ಹೋಗುವ ಲೇಖನಗಳು ಮಾತು, ಮನನ ಮಾಡಿಕೊಳ್ಳುವ ಲೇಖನಗಳು ಮಂಥನ ಹಾಗೂ ಚಿಂತನೆಗೆ ಹಚ್ಚುವ ಲೇಖನಗಳು ಇವೆ ಎಂದರು.

ಸುರತ್ಕಲ್‌ ಗೋವಿಂದದಾಸ ಕಾಲೇಜು ಪ್ರಾಂಶುಪಾಲ ಪ್ರೊಫೆಸರ್ ಕೃಷ್ಣಮೂರ್ತಿ ಅವರು ಬಹು ಓದು ಬಳಗ ಹಾಗೂ ಆಕೃತಿ ಆಶಯ ಪ್ರಕಾಶನದ ಕಾರ್ಯವನ್ನು ಶ್ಲಾಘಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊಫೆಸರ್ ಸೋಮಣ್ಣ ಹೊಂಗಳ್ಳಿ ಅಧ್ಯಕ್ಷತೆ ವಹಿಸಿದ್ದರು. ಸಂಪಾದಕ ಡಾ. ಸತೀಶ್ ಚಿತ್ರಾಪು ಪ್ರಾಸ್ತಾವಿಕ ಮಾತನಾಡಿದರು. ಆಕೃತಿ ಆಶಯ ಪ್ರಕಾಶನದ ಕಲ್ಲೂರು ನಾಗೇಶ್ ಸ್ವಾಗತಿಸಿದರು. ಇನ್ನೋರ್ವ ಸಂಪಾದಕ ಸೋಮಶೇಖರ್ ಹಾಸನಡ್ಕ ವಂದಿಸಿದರು. ಡಾ. ಆಶಾಲತಾ ಚೇವಾರು ನಿರೂಪಿಸಿದರು.