ವಿದ್ಯಾರ್ಥಿಗಳು ಇಂತಹ ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೃತಿಯ ಬಗ್ಗೆ ಚರ್ಚೆ ಮತ್ತು ವಿಮರ್ಶೆಗೆ ಒಳಪಡಬೇಕಿದೆ

ಹೂವಿನಹಡಗಲಿ: ಚಾಕ್ಲೆಟ್‌ ಮಳೆ ಇದೊಂದು ಮಕ್ಕಳ ಸಾಹಿತ್ಯದ ಕಥೆ ಒಳಗೊಂಡಿರುವ ಈ ಪುಸಕ್ತದಲ್ಲಿ ಸೃಜಲಶೀಲ ಸೂಕ್ಷ್ಮ ಸಂವೇದನೆಯ ಬರವಣಿಗೆ ಹೊಂದಿದೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ, ಮಕ್ಕಳ ಸಾಹಿತಿ ನಿಂಗು ಸೊಲಗಿ ಹೇಳಿದರು.

ಇಲ್ಲಿನ ರುದ್ರಾಂಬ ಎಂ.ಪಿ.ಪ್ರಕಾಶ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಗರಿಬೊಮ್ಮನಹಳ್ಳಿ ರಾಮನಗರದ ಅಮ್ಮ ಪ್ರಕಾಶನ ಹೊರ ತಂದಿರುವ ಸಾಹಿತಿ, ಶಿಕ್ಷಕ ಆರ್‌.ಬಿ. ಗುರುಬಸವರಾಜ ಅವರ ಚಾಕ್ಲೆಟ್‌ ಮಳೆ ಪುಸಕ್ತ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪುಸಕ್ತ ಬಿಡುಗಡೆ ಕಾರ್ಯಕ್ರಮಗಳು ಕಾಲೇಜು ಆವರಣದಲ್ಲಿ ನಡೆಯುತ್ತಿದ್ದು, ವಿದ್ಯಾರ್ಥಿಗಳು ಇಂತಹ ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೃತಿಯ ಬಗ್ಗೆ ಚರ್ಚೆ ಮತ್ತು ವಿಮರ್ಶೆಗೆ ಒಳಪಡಬೇಕಿದೆ. ಯುವಕರು ಸಾಹಿತ್ಯ ವಲಯದ ಆಸಕ್ತರಾಗಬೇಕಿದೆ. ಎಲ್ಲರಲ್ಲಿಯೂ ವೈಜ್ಞಾನಿಕ ಮನೋಭಾವನೆ ಬೆಳೆಯುವ ಅಗತ್ಯವಿದೆ ಎಂದರು.

ಮಕ್ಕಳಲ್ಲಿ ನೀತಿ ಕಥೆಯ ಮೌಲ್ಯ ಬಿತ್ತಬೇಕಿದೆ. ಎಲ್ಲ ಕಡೆಗೂ ಪ್ರಾಥಮಿಕ ಹಂತದ ಮಕ್ಕಳ ಸಾಹಿತ್ಯದ ಕೃತಿ ಹೊರ ಬರುತ್ತಿದೆ, ಆದರೆ ಟೀನೆಜ್‌ ಮಕ್ಕಳಿಗೆ ಸಹಕಾರಿಯಾಗುವ ಸಾಹಿತ್ಯ ಬರವಣಿಗೆ ಕಡಿಮೆಯಾಗುತ್ತಿದೆ. ಸಾಹಿತಿ ಆರ್‌.ಬಿ. ಗುರುಬಸವರಾಜ ಕೃತಿ ಮೌಲ್ಯಯುಕ್ತವಾಗಿದೆ. 20ಕ್ಕೂ ಹೆಚ್ಚು ಕೃತಿ ಬರೆದಿರುವ ಇವರು, ಈ ನಾಡಿನ ಹೆಮ್ಮೆಯ ಸಾಹಿತಿಗಳಾಗಿದ್ದಾರೆಂದು ಹೇಳಿದರು.

ಚಾಕ್ಲೆಟ್‌ ಮಳೆ ಪುಸಕ್ತ ಲೋಕಾರ್ಪಣೆ ಮಾಡಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ಶಾಂತಮೂರ್ತಿ ಬಿ.ಕುಲಕರ್ಣಿ, ಅಕಾಡೆಮಿಕ್‌ ಹಿನ್ನೆಲೆಯಿಂದ ಬಂದವರಿಗೆ ಶಿಶುಗೀತೆ ಸಾಹಿತ್ಯ ಬರವಣಿಗೆ ಕಷ್ಟದಾಯವಾಗುತ್ತದೆ. ಆರ್‌.ಬಿ. ಗುರುಬಸವರಾಜ ಕೃತಿಯಲ್ಲಿ ನೀತಿ ತುಂಬಿರುವ ಕಥೆಗಳ ಹಂದರವಾಗಿದೆ. ಆದರಿಂದ ವಿದ್ಯಾರ್ಥಿಗಳು ಕೂಡಾ ಉತ್ತಮ ಕೃತಿ ಅಭ್ಯಾಸ ಮಾಡಬೇಕಿದೆ. ನಿರಂತರ ಬರಹ ಮತ್ತು ಓದು ಒಬ್ಬ ವ್ಯಕ್ತಿಯನ್ನು ಜೀವಂತವಾಗಿ ಇಡುತ್ತದೆ ಎಂದರು.

ಅಮ್ಮ ಪ್ರಕಾಶನದ ಸಂಚಾಲಕ ಎಂ.ಪಿ.ಎಂ. ಮಂಜುನಾಥ ಮಾತನಾಡಿ, ಕವಿಗೋಷ್ಠಿ, ಸಾಹಿತ್ಯ ಕಾರ್ಯಕ್ರಮಗಳಿಗೆ ಕಿವಿಗೊಡುವವರ ಸಂಖ್ಯೆ ವಿರಳವಾಗುತ್ತಿದೆ. ಅದಕ್ಕಾಗಿ ಇಂದು ಶಾಲಾ-ಕಾಲೇಜುಗಳಲ್ಲಿ ಸಾಹಿತ್ಯ ಕಾರ್ಯಕ್ರಮ ಮಾಡುವ ಪರಿಸ್ಥಿತಿ ಬಂದಿದೆ. ಪುಸಕ್ತಗಳನ್ನು ಹೊರ ತರುವುದೇ ಒಂದು ದೊಡ್ಡ ಹೊಣೆಗಾರಿಕೆ, ಸಾಕಷ್ಟು ಸಾಹಿತಿಗಳ ಕೃತಿ ಹೊರ ಬರುತ್ತಿವೆ, ಆದರೆ ಪುಸಕ್ತ ಓದುವ ಸಂಸ್ಕೃತಿ ಕಡಿಮೆಯಾಗುತ್ತಿರುವುದು ಖೇದಕರ ಎಂದರು.

ಡಾ. ಮಂಜುನಾಥ ಹಾಲಸ್ವಾಮಿ ಸಾನ್ನಿಧ್ಯ ವಹಿಸಿದ್ದರು, ಸಾಹಿತಿ, ಶಿಕ್ಷಕ ಆರ್‌.ಬಿ.ಗುರುಬಸವರಾಜ ಸೇರಿದಂತೆ ಇತರರು ಮಾತನಾಡಿದರು.

ಪ್ರಾಚಾರ್ಯ ಎಂ. ವಿಜಯಕುಮಾರ, ಸಾಹಿತಿ ಡಾ. ಪರಮೇಶ್ವರಯ್ಯ ಸೊಪ್ಪಿಮಠ, ಪ್ರಾಧ್ಯಾಪಕ ಡಾ. ಸತೀಶ ಪಾಟೀಲ್‌, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಎ. ಕೊಟ್ರಗೌಡ, ರಂಗಭೂಮಿ ಕಲಾವಿದೆ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತೆ ಡಾ. ಕೆ.ಎಸ್‌.ನಾಗರತ್ನಮ್ಮ, ಎಸ್‌. ದ್ವಾರಕೀಶ ರಡ್ಡಿ, ಪ್ರಭು ಸೊಪ್ಪಿನ, ಕಸಾಪ ತಾಲೂಕಾಧ್ಯಕ್ಷ ಟಿ.ಪಿ. ವೀರೇಂದ್ರ ಪಾಟೀಲ್‌, ಎಲ್‌.ಖಾದರ ಬಾಷ, ಬಿ.ಕೊಟ್ರೇಶ, ಎಂ.ದಯಾನಂದ ಸೇರಿದಂತೆ ಇತರರಿದ್ದರು. ಶಿಕ್ಷಕ ಹಡಗಲಿ ಬಸವರಾಜ ನಿರೂಪಿಸಿದರು.