ಓದುಗರನ್ನು ಕಾಡುವ ಚಾಂಡಾಳನೊಬ್ಬನ ಆತ್ಮವಿಮರ್ಶೆ ಕೃತಿ

| Published : Dec 31 2023, 01:30 AM IST

ಓದುಗರನ್ನು ಕಾಡುವ ಚಾಂಡಾಳನೊಬ್ಬನ ಆತ್ಮವಿಮರ್ಶೆ ಕೃತಿ
Share this Article
  • FB
  • TW
  • Linkdin
  • Email

ಸಾರಾಂಶ

ಕೇವಲ ಭಾವನಾತ್ಮಕ ಪ್ರತಿಕ್ರಿಯೆಗೆ ತಳ್ಳದೇ ಓದುಗರನ್ನು ಸಂಶೋಧಕ ಪ್ರವೃತ್ತಿಗೆ ಹಚ್ಚುವ ಗುಣ ಹೊಂದಿರುವ ಚಾಂಡಾಳನೊಬ್ಬನ ಆತ್ಮವಿಮರ್ಶೆ ಕೃತಿ ವಿಶೇಷವಾಗಿದೆ ಎಂದು ಶಿವಮೊಗ್ಗ ಕಮಲಾ ನೆಹರೂ ಕಾಲೇಜಿನ ಕಾರ್ಯಕ್ರಮದಲ್ಲಿ ಪ್ರೊ. ಆರಡಿ ಮಲ್ಲಯ್ಯ ಹೇಳಿದ್ದಾರೆ.

ಕೇವಲ ಭಾವನಾತ್ಮಕ ಪ್ರತಿಕ್ರಿಯೆಗೆ ತಳ್ಳದೇ ಓದುಗರನ್ನು ಸಂಶೋಧಕ ಪ್ರವೃತ್ತಿಗೆ ಹಚ್ಚುವ ಗುಣ ಹೊಂದಿರುವ ಚಾಂಡಾಳನೊಬ್ಬನ ಆತ್ಮವಿಮರ್ಶೆ ಕೃತಿ ವಿಶೇಷವಾಗಿದೆ ಎಂದು ಶಿವಮೊಗ್ಗ ಕಮಲಾ ನೆಹರೂ ಕಾಲೇಜಿನ ಕಾರ್ಯಕ್ರಮದಲ್ಲಿ ಪ್ರೊ. ಆರಡಿ ಮಲ್ಲಯ್ಯ ಹೇಳಿದ್ದಾರೆ.

ಪಟ್ಟಣದ ಪರಸ್ಪರ ಸಾಹಿತ್ಯ ವೇದಿಕೆ ಆಯೋಜಿಸಿದ್ದ ಹೊಸ ಓದು ಮಾಲಿಕೆಯಲ್ಲಿ ಮನೋರಂಜನ್ ಬ್ಯಾಪಾರಿ ರಚಿಸಿದ ಚಾಂಡಾಳನೊಬ್ಬನ ಆತ್ಮವಿಮರ್ಶೆ (ಮೂಲ: ಬಂಗಾಲಿ, ಅನುವಾದ: ಎಚ್.ಎಸ್. ನಾಗಭೂಷಣ್) ಕೃತಿ ಕುರಿತು ಮಾತನಾಡಿದ ಅವರು, ಪ್ರಭುತ್ವ ತಾನೇ ನಿರ್ವಹಿಸಿದ ನರಮೇಧವನ್ನು ಭಾರತದ ಸಾಮಾಜಿಕ, ರಾಜಕೀಯವಾಗಿ ಯಾವ ರೀತಿ ಮುಚ್ಚಲ್ಪಡಲಾಗಿದೆ ಎಂಬುದರ ಚಿತ್ರಣವನ್ನು ಈ ಕೃತಿ ಸಮರ್ಥವಾಗಿ ಕಟ್ಟಿಕೊಡುತ್ತಿದೆ. ಇದೊಂದು ಮುಚ್ಚಲ್ಪಟ್ಟ ಚರಿತ್ರೆಯ ಅನಾವರಣ ಪ್ರಕ್ರಿಯೆ ಎಂದು ಅಭಿಪ್ರಾಯಪಟ್ಟರು.

ಹಸಿವಿನ ಭಾರತವನ್ನು ವಿಭಿನ್ನ ಆಯಾಮಗಳ ಮೂಲಕ ಚಿತ್ರಿಸುವ ಬ್ಯಾಪಾರಿಯವರ ಆತ್ಮಚರಿತ್ರೆಯ ಕೃತಿ ಹಸಿದವರ ಹೋರಾಟದ ಸಂಕಥನ ಸಹ ಆಗಿದೆ. ತಳ ಸಮುದಾಯದವರ ಹಸಿವು, ಅಸಹಾಯಕತೆ, ಕೋಪ ಈ ಕೃತಿಯ ಪ್ರತಿಯೊಂದು ಪುಟದಲ್ಲೂ ದಟ್ಟವಾಗಿ ವ್ಯಕ್ತಗೊಂಡಿದೆ. ಯಾವುದೇ ರಾಜಕೀಯ ನಿಲುವಿಗೆ ಸೀಮಿತವಾಗದ ಕಾರಣಕ್ಕೆ ಈ ಕೃತಿ ಓದುಗರನ್ನು ತೀವ್ರವಾಗಿ ಕಾಡುತ್ತದೆ ಎಂದು ಹೇಳಿದರು.

ಕೃತಿಯ ಅನುವಾದಕ ಎಚ್.ಎಸ್. ನಾಗಭೂಷಣ, ಮೂಲ ಲೇಖಕರ ಆಶಯಕ್ಕೆ ಧಕ್ಕೆ ಬಾರದಂತೆ ಮತ್ತೊಂದು ಭಾಷೆ, ನಾಡು, ನೆಲದ ಅನುಭವಗಳನ್ನು ಕನ್ನಡದ ಅನುಭವಗಳನ್ನಾಗಿ ನಿರೂಪಿಸಿರುವುದು ಸವಾಲಿನ ಕೆಲಸ. ಬ್ಯಾಪಾರಿ ಅವರ ಆತ್ಮಚರಿತ್ರೆಯನ್ನು ಓದಿದ ನಂತರ ಹುಟ್ಟಿಸಿದ ತಳಮಳ ಅನುವಾದಕ್ಕೆ ದಾರಿ ಮಾಡಿಕೊಟ್ಟಿತು ಎಂದರು.

ಲೇಖಕ ಡಾ. ಜಿ.ಎಸ್. ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಹಾಲುಸ್ವಾಮಿ, ಎಂ.ಎಸ್. ಸರೋಜ, ರೂಪೇಶ್, ಹರೀಶ್ ಮಾತನಾಡಿದರು. ದತ್ತಾತ್ರೇಯ ಬೊಂಗಾಳೆ ಸ್ವಾಗತಿಸಿದರು. ಡಾ.ಸರ್ಫ್ರಾಜ್ ಚಂದ್ರಗುತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಂ.ಗಣಪತಿ ನಿರೂಪಿಸಿದರು.

- - - -30ಕೆ.ಎಸ್.ಎ.ಜಿ.2:

ಹೊಸ ಓದು ಮಾಲಿಕೆ ಕಾರ್ಯಕ್ರಮದಲ್ಲಿ ಕಮಲಾ ನೆಹರೂ ಕಾಲೇಜಿನ ಪ್ರೊ. ಆರಡಿ ಮಲ್ಲಯ್ಯ ಮಾತನಾಡಿದರು.