ಸಾರಾಂಶ
ಕುಷ್ಟಗಿ : ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಇಂಧನ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಮಂಡಲದ ವತಿಯಿಂದ ಪ್ರತಿಭಟನೆ ನಡೆಯಿತು.
ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್, ಸ್ಟ್ಯಾಂಪ್ ಡ್ಯೂಟಿ ಹಾಗೂ ಅಗತ್ಯ ವಸ್ತುಗಳ ದರವನ್ನು ಏಕಾಏಕಿ ಹೆಚ್ಚಿಸಿ ಬಡ ಮತ್ತು ಮಧ್ಯಮ ವರ್ಗದವರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಹೇಳಿದರು.
ಈ ಹಿಂದೆ ಸಿದ್ದರಾಮಯ್ಯನವರು ಬಿಜೆಪಿ ಸರ್ಕಾರದ ಸಮಯದಲ್ಲಿ ಬೆಲೆ ಏರಿಕೆ ವಿರೋಧಿಸಿ ಹೋರಾಟ ಮಾಡಿದ್ದರು. ಆದರೆ ಇಂದು ಅವರ ಸರ್ಕಾರದಲ್ಲಿ ಬೆಲೆ ಹೆಚ್ಚು ಮಾಡಿ ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡಿದ್ದು, ಅಧಿಕಾರದಾಸೆಗಾಗಿ ಬೆಲೆ ಏರಿಕೆ ಮಾಡಿದ್ದನ್ನು ಬಿಜೆಪಿ ಖಂಡಿಸುತ್ತದೆ. ಕೂಡಲೇ ಬೆಲೆ ಇಳಿಸಬೇಕು ಎಂದರು.
ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಕೊಟ್ಟ ಮಾತಿನಂತೆ ತಲುಪಿಸಲು ಹೆಣಗಾಡುತ್ತಿದೆ. ಹಣಕಾಸು ಇಲಾಖೆ ಖಾಲಿ ಖಜಾನೆಯಾಗಿದ್ದು, ಹಾಗಾಗಿ ಸರ್ಕಾರ ಜನರಿಂದಲೆ ಮತ್ತೆ ಸುಲಿಗೆಗೆ ಇಳಿದಿದೆ. ಲೋಕಸಭಾ ಚುನಾವಣೆಯಲ್ಲಿ ಗ್ಯಾರಂಟಿ ನೀಡಿದರೂ ಹೆಚ್ಚು ಸ್ಥಾನ ಗೆಲ್ಲೋಕೆ ಆಗಿಲ್ಲ ಅಂತ ಈಗ ಬೆಲೆ ಏರಿಕೆ ಮಾಡಿ ಸಾರ್ವಜನಿಕರಿಗೆ ಹೊರೆ ಹೇರಲಾಗಿದೆ ಎಂದು ಆರೋಪಿಸಿದರು.
ಇದೇ ವೇಳೆ ಬಿಜೆಪಿ ಮಂಡಲದ ಅಧ್ಯಕ್ಷ ಮಹಾಂತೇಶ ಬದಾಮಿ, ಮಾಜಿ ಜಿಪಂ ಸದಸ್ಯ ಕೆ. ಮಹೇಶ, ಯುವಮೋರ್ಚಾ ಅಧ್ಯಕ್ಷ ಉಮೇಶ ಯಾಧವ ಮಾತನಾಡಿದರು.
ಸಂಚಾರ ದಟ್ಟಣೆ:ಪ್ರತಿಭಟನಾ ಸಮಯದಲ್ಲಿ ಸುಮಾರು 20 ನಿಮಿಷಗಳ ಕಾಲ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು, ಸಾರ್ವಜನಿಕ ಬಸ್ ಪ್ರಯಾಣಿಕರು ಪರದಾಡಿದರು.
ಬೆಲೆ ಏರಿಕೆ ಹಿಂಪಡೆಯಬೇಕು ಎಂದು ಒತ್ತಾಯಿಸಿ ಕುಷ್ಟಗಿಯ ತಹಸೀಲ್ದಾರ ಶೃತಿ ಮಳ್ಳಪ್ಪಗೌಡರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿ.ಕೆ. ಹಿರೇಮಠ, ಅಮೀನುದ್ದೀನ ಮುಲ್ಲಾ, ಅಶೋಕ ಬಳೂಟಗಿ, ಕಲ್ಲೇಶ ತಾಳದ, ರಾಜು ಗಂಗನಾಳ ವಕೀಲ, ಸಂಗಪ್ಪ ಮೆಣಸಗೇರಿ, ಪರಶುರಾಮ ನಾಗರಾಳ, ಶೈಲಜಾ ಬಾಗಲಿ, ಉಮೇಶ ಯಾದವ, ಆಲಂಪಾಶಾ ಮೋದಿ ಸೇರಿದಂತೆ ಮತ್ತಿತರರು ಇದ್ದರು.