ಸಾರಾಂಶ
ಕಾವಿ ಆರ್ಟ್ ಫೌಂಡೇಶನ್ ಹಾಗೂ ಭಾವನಾ ಪ್ರತಿಷ್ಠಾನವು ಗುಡ್ ಫಾರ್ ಗುಡ್ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಬಿಕರ್ನಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಅಳಿವಿನಂಚಿನಲ್ಲಿರುವ ದೇಸಿ ಕಲಾಪ್ರಕಾರವಾದ ಕರಾವಳಿಯ ಕಾವಿ ಕಲೆಯನ್ನು ಕಲಿಸಿ ಕೊಡುವ ಒಂದು ದಿನದ ಕಾರ್ಯಾಗಾರ ನಡೆಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಕಾವಿ ಆರ್ಟ್ ಫೌಂಡೇಶನ್ ಹಾಗೂ ಭಾವನಾ ಪ್ರತಿಷ್ಠಾನವು ಗುಡ್ ಫಾರ್ ಗುಡ್ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಬಿಕರ್ನಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಅಳಿವಿನಂಚಿನಲ್ಲಿರುವ ದೇಸಿ ಕಲಾಪ್ರಕಾರವಾದ ಕರಾವಳಿಯ ಕಾವಿ ಕಲೆಯನ್ನು ಕಲಿಸಿ ಕೊಡುವ ಒಂದು ದಿನದ ಕಾರ್ಯಾಗಾರ ನಡೆಯಿತು.ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದ ಶಾಲೆಯ ಮುಖ್ಯ ಶಿಕ್ಷಕಿ ರಾಜೀವಿ ಮಾತನಾಡಿ, ದೇಸಿ ಕಲಾ ಪ್ರಕಾರಗಳು ನಮ್ಮ ಭಾಗದಲ್ಲಿನ ಬಹು ಮುಖ್ಯ ಆಸ್ತಿ. ಈ ಕಾವಿ ಕಲೆಯ ಕಾರ್ಯಾಗಾರ ಮಂಗಳೂರಿನಲ್ಲಿ ಮೊದಲ ಬಾರಿಗೆ ಬಿಕರ್ನಕಟ್ಟೆ ಶಾಲೆಯಲ್ಲಿ ಆರಂಭವಾಗುತ್ತಿರುವುದು ಸಂತಸದ ವಿಚಾರ ಎಂದು ಹೇಳಿದರು.ಕಾರ್ಯಾಗಾರ ನಡೆಸಿಕೊಟ್ಟ ಕಲಾವಿದ ಜನಾರ್ದನ ಹಾವಂಜೆ ಮಾತನಾಡಿ, ಕಾವಿ ಕಲೆಯು ಕರಾವಳಿಯ ಅಳಿವಿನಂಚಿನ ಕಲೆಯಾಗಿದ್ದು, ಈ ಕಲೆಯ ಬಗೆಗೆ ಜಾಗೃತಿ, ಅರಿವು ಇನ್ನಷ್ಟು ಮೂಡಿಸಬೇಕಿದೆ. ಕನ್ನಡ ಶಾಲೆಯಲ್ಲಿ ಕಾವಿ ಕಲೆಯ ಕಿಶೋರ ಕಾರ್ಯಾಗಾರವು ಆರಂಭವಾಗಿದ್ದು, ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆಗಳಲ್ಲಿ ಈ ಕಾರ್ಯಕ್ರಮವನ್ನು ವಿಸ್ತರಿಸಲು ಯೋಜಿಸಲಾಗುತ್ತಿದೆ ಎಂದರು.
ಕಾರ್ಯಾಗಾರದಲ್ಲಿ ಸುಮಾರು ನೂರರಷ್ಟು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಕ್ರಮ್ ಸುವರ್ಣ, ಕೀರ್ತಿಕುಮಾರ್ ಹಾಗೂ ದೀಪಾ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಗುಡ್ ಫಾರ್ ಗುಡ್ ಟ್ರಸ್ಟ್ ಅಧ್ಯಕ್ಷ ಅಕ್ಷಯ್ ಸುವರ್ಣ, ಉಪಾಧ್ಯಕ್ಷ ಸತ್ಯರಾಜ್, ಸದಸ್ಯರಾದ ಸಚಿತ್, ಪ್ರಜ್ಞೇಶ್, ಇಶಾನ್, ಗುರುಮೂರ್ತಿ, ಪವನ್, ರತನ್, ರೋಶನ್, ಅನಂತ್ ಹಾಗೂ ಸಹ ಶಿಕ್ಷಕರು ಇದ್ದರು.