ಸಾರಾಂಶ
ತುಮಕೂರು : ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಮಹಿಳೆಯರು ಇದ್ದಾರೆ. ಸಹೋದರಿಯಾಗಿ, ತಾಯಿಯಾಗಿ, ಗೆಳತಿಯಾಗಿ ಪ್ರತಿ ಗಂಡಸಿನ ಯಶಸ್ಸನ್ನು ಬಯಸುವವಳಲು ಹೆಣ್ಣು. ಮಹಿಳೆಯರಿಲ್ಲದ ಪ್ರಪಂಚವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನಗರಪಾಲಿಕೆ ಮಾಜಿ ಉಪಮೇಯರ್ ರೂಪಾ ಶೆಟ್ಟಾಳಯ್ಯ ಅಭಿಪ್ರಾಯಪಟ್ಟಿದ್ದಾರೆ.
ನಗರದ ಮಹಾತ್ಮಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆಯ ಕ್ರೀಡಾ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದರು. ಒಂದು ಹೆಣ್ಣು ಮತ್ತೊಂದು ಜೀವಕ್ಕೆ ಉಸಿರು ನೀಡುತ್ತಾಳೆ. ಆದ್ದರಿಂದಲೇ ಹೆಣ್ಣಿಗೆ ಪವಿತ್ರ ಸ್ಥಾನ ನೀಡಲಾಗಿದೆ ಎಂದರು.
ಮಹಿಳೆ ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನ ಸಾಧನೆಯ ಛಾಪು ಮೂಡಿಸುತಿದ್ದಾಳೆ. ಆಕೆ ಕಾಲಿಡದ ಕ್ಷೇತ್ರವಿಲ್ಲ. ಏಕಾಂಗಿಯಾಗಿ ಯುದ್ದ ವಿಮಾನ ನಡೆಸುವಂತಹ ಅತಿ ಕೌಶಲ್ಯಯುಕ್ತ ಕೆಲಸದಲ್ಲಿಯೂ ಸೈ ಎನಿಸಿಕೊಂಡಿರುವ ಮಹಿಳೆಯನ್ನು ಅಬಲೆ ಎನ್ನುವ ಮಾತು ಒಪ್ಪುವಂತಹದ್ದಲ್ಲ. ಅಂತಾರಾಷ್ಟ್ರೀಯ ಮಹಿಳಾ ದಿನವೆಂಬುದು ನಮ್ಮ ಸಾಧನೆಯ ಹಿನ್ನೋಟವನ್ನು ನೆನಪಿಸುವ ಕಾರ್ಯಕ್ರಮವಲ್ಲದೆ, ಮುಂದಿನ ಸಾಧನೆಗೆ ಸ್ಪೂರ್ತಿ ನೀಡುವ ಕಾರ್ಯಕ್ರಮವಾಗಿದೆ. ಇದನ್ನು ಪ್ರತಿಯೊಬ್ಬ ಮಹಿಳೆಯರು ಅರ್ಥ ಮಾಡಿಕೊಂಡು ಮುನ್ನೆಡೆಯಬೇಕೆಂದು ತಿಳಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಉಪನಿರ್ದೇಶಕರಾದ ರೋಹಿತ್ ಗಂಗಾಧರ್ ಮಾತನಾಡಿ, ಓರ್ವ ಅಂತಾರಾಷ್ಟ್ರೀಯ ಕ್ರೀಡಾಪಟುವಾಗಿ, ಅಧಿಕಾರಿಯಾಗಿ ನನ್ನ ನೆಚ್ಚಿನ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಿದ್ದರೆ, ಅದಕ್ಕೆ ಬೆನ್ನೆಲುಬಾಗಿ ನಿಂತವರು ನನ್ನ ತಾಯಿ ಮತ್ತು ಪತ್ನಿ. ಇತಿಹಾಸವನ್ನು ಗಮನಿಸಿದಾಗ ,ರಾಷ್ಟ್ರಪಿತ ಮಹಾತ್ಮಗಾಂಧಿ ಹಿಂದೆ ಕಸ್ತೂರಬಾ,ಡಾ.ಬಿ.ಆರ್.ಅಂಬೇಡ್ಕರ್ ಹಿಂದೆ ರಮಾಬಾಯಿ ಇರುವಂತೆ, ಹಲವು ಗಣ್ಯರ ಯಶಸ್ಸಿನ ಹಿಂದೆ ಆ ಮನೆಯ ಗೃಹಿಣಿಯರು ಇದ್ದಾರೆ.
ಇವರು ನಿಜವಾಗಿಯೂ ಪ್ರಾತಸ್ಮರಣಿಯರು. ಇಂದಿನ ಕ್ರೀಡಾ ಸ್ಪರ್ಧೆಗಳಲ್ಲಿ ಎಲ್ಲರೂ ಉತ್ಸಾಹದಿಂದ ಭಾಗವಹಿಸಿ, ನಿಮ್ಮೆಲ್ಲಾ ಒತ್ತಡದ ಬದುಕನ್ನು ಕೆಲ ಗಂಟೆಗಳ ಕಾಲ ಮರೆತು ಸಂತೋಷದಿಂದ ಇರುವಂತೆ ಮನವಿ ಮಾಡಿದರು.
ಸಿಡಿಪಿಒ ಸರೋಜಮ್ಮ, ಬಿಸಿಎಂ ಅಧಿಕಾರಿ ಎಸ್.ಜಿ.ನಿರ್ಮಲಾ, ಯುವಸಬಲೀಕರಣ ಇಲಾಖೆಯ ಕಚೇರಿ ಅಧೀಕ್ಷಕರಾದ ಚಂದ್ರಕಲಾ ಎಸ್.ಅವರುಗಳು ಅಂತಾರಾಷ್ಟ್ರೀಯ ಮಹಿಳಾ ದಿನದ ಕುರಿತು ಮಾತನಾಡಿದವರು. ವೇದಿಕೆಯಲ್ಲಿ ಅಂತರರಾಷ್ಟ್ರೀಯ ಕಬ್ಬಡಿ ತರಬೇತುದಾರ ಮಹಮದ್ ಇಸ್ಮಾಯಿಲ್, ಮಂಜುನಾಥ್, ಪ್ರದೀಪಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು. ಜಿಲ್ಲಾಡಳಿತದಿಂದ ಆಯೋಜಿಸಿದ್ದ ಅಂತಾರಾಷ್ಟ್ರಿಯ ಮಹಿಳಾ ದಿನದ ಕ್ರೀಡಾ ಸ್ಪರ್ಧೆಗಳಲ್ಲಿ ಸುಮಾರು 500 ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದು, ಮ್ಯೂಸಿಕಲ್ ಚೇರ್, ಲೆಮನ್ ಅಂಡ್ ಸ್ಪೂನ್, ಹಗ್ಗ ಜಗ್ಗಾಟ, ಸೂಜಿ, ದಾರ, ಬಾಲ್ ಇನ್ ದ ಬಕೇಟ್, ರಂಗೋಲಿ ಸ್ಪರ್ಧೆ, ಬಾಂಬ್ ಇನ್ ಸಿಟಿ ಹಾಗೂ ಅಂತ್ಯಾಕ್ಷರಿ ಕ್ರೀಡೆಗಳಲ್ಲಿ ಪಾಲ್ಗೊಂಡಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))