ನೋಡುಗರ ಮೈನವಿರೇಳಿಸಿದ ಕುಸ್ತಿ ಪಂದ್ಯಾವಳಿ

| Published : Mar 02 2025, 01:16 AM IST

ಸಾರಾಂಶ

ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಬೆಳವಡಿ ಮಲ್ಲಮ್ಮ ಉತ್ಸವ-2025ರ ಅಂಗವಾಗಿ ನಡೆದ ರಾಷ್ಟಮಟ್ಟದ ಪುರುಷ ಹಾಗೂ ಮಹಿಳೆಯರ ಕುಸ್ತಿ ಪಂದ್ಯಾವಳಿ ನೋಡುಗರ ಮೈ ನವಿರೇಳಿಸುವಂತೆ ಮಾಡಿತು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಬೆಳವಡಿ ಮಲ್ಲಮ್ಮ ಉತ್ಸವ-2025ರ ಅಂಗವಾಗಿ ನಡೆದ ರಾಷ್ಟಮಟ್ಟದ ಪುರುಷ ಹಾಗೂ ಮಹಿಳೆಯರ ಕುಸ್ತಿ ಪಂದ್ಯಾವಳಿ ನೋಡುಗರ ಮೈ ನವಿರೇಳಿಸುವಂತೆ ಮಾಡಿತು.

ಕುಸ್ತಿ ಪ್ರೇಮಿಗಳ ಹುರುಪಿನಿಂದ ಸಿಳ್ಳೆ ಚಪ್ಪಾಳೆ ಮೂಲಕ ಪೈಲ್ವಾನರನ್ನು ಪ್ರೇರೆಪಿಸಿದರು. ಹಲಗೆ ವಾದಕರು ತಮ್ಮ ವಿಶಿಷ್ಟ ರೀತಿಯ ವಾದ್ಯಗಳಿಂದ ಗಮನ ಸೆಳೆದರು. ಕುಸ್ತಿ ಕಣದಲ್ಲಿ ಜಟ್ಟಿಗಳು ತಮ್ಮ ಶಕ್ತಿ ಪ್ರದರ್ಶಿಸಿ, ಕುಸ್ತಿ ಪ್ರೇಮಿಗಳನ್ನು ರಂಜಿಸಿದರು. ಜಟ್ಟಿಗಳ ಮೈಮಾಟ, ತೋಳಬಲ, ಡಾವ್ ಪೇಚಗಳನ್ನು ಕಂಡು ಕುಸ್ತಿ ಪ್ರೇಮಿಗಳು ಮನಸೋತರು. ಕುಸ್ತಿಗಳನ್ನು ನಿಖಾಲಿ ಮಾಡಿಯೇ ತೀರಬೇಕೆಂದು ಕೂಗೂ ಕೇಳಿಬರುತ್ತಿತ್ತು. ಶಕ್ತಿಮೀರಿ ಹೋರಾಟ ಮಾಡಿದ ಪೈಲ್ವಾನರುಗಳು ವಿವಿಧ ಬಂಗಿಯ ಡಾವ್ ಪೇಚಗಳಿಂದ ನೊಡುಗರ ಮನ ಗೆದ್ದರು.ಪುರುಷರ ವಿಭಾಗದ ರಾಷ್ಟ್ರಮಟ್ಟದ ಕುಸ್ತಿ ಪಟು ಮಹಾರಾಷ್ಟ್ರದ ವಿಕ್ರಂ ಘೋರ್ಪಡೆ ಪೈಲ್ವಾನ್ ದೆಹಲಿಯ ಪ್ರವೀಣ ಜೋಗಿ ಪೈಲ್ವಾನನ್ನು

ಚಿತ್ತ ಮಾಡಿ ಜಯದ ಕೇಕೆ ಹಾಕಿದರು. ಕರ್ನಾಟಕ ಕೇಸರಿ ರಾಣೆಬೆನ್ನೂರಿನ ಕಾರ್ತಿಕ ಕಾಟೆ ಪೈಲ್ವಾನ್ ಹರಿಯಾಣದ ಹರೀಶ ಕುಮಾರನನ್ನು ಸೋಲಿಸಿದರು.

ಧಾರವಾಡ ನಾಗರಾಜ ಬಸಿಡೋಣಿ ಪೈಲ್ವಾನ್ ಉತ್ತರ ಪ್ರದೇಶದ ಉದಯಕುಮಾರನನ್ನು ಸೋಲಿಸಿದರು. ಕಂಗ್ರಾಳಿಯ ಕಾಮೇಶ ಪಾಟೀಲ ದೆಹಲಿಯ ಜಗಜೀತಸಿಂಗನನ್ನು ಸೋಲಿಸಿದರು. ಕೋಲ್ಹಾಪೂರ ಅತುಲ ತಾವರೆ ಧಾರವಾಡ ರುದ್ರಪ್ಪನನ್ನು ಸೋಲಿಸಿದರು. ಪುರುಷರ ವಿಭಾಗದಲ್ಲಿ ಒಟ್ಟು ೨೯ ಜೋಡಿಗಳ ಕುಸ್ತಿಗಳು ನಡೆದವು. ಮಹಿಳಾ ವಿಭಾಗದ ಕುಸ್ತಿಯಲ್ಲಿ ಕೊಲ್ಹಾಪುರ ಅಂಕಿತಾ ಜಾಧವ ಇವಳು ಬೆಳಗಾವಿಯ ರಾಧಿಕಾ ತೊಂಡಿಹಾಲ್ ಇವಳನ್ನು ಸೋಲಿಸಿ ಜಯದ ನಗೆ ಬೀರಿದರು. ಖಾನಾಪುರ ರುತುಜಾ ಗುರವ, ಬೆಳಗಾವಿಯ ಭಕ್ತಿ ಪಾಟೀಲಳನ್ನು ಸೋಲಿಸಿ ವಿಜಯಶಾಲಿಯಾದರು.ಮುಧೋಳ ಪ್ರಭಾವತಿ ಇವಳು ರುತುಜಾ ರಾವಳ ಇವಳನ್ನು ಸೋಲಿಸಿದಳು. ಮಹಿಳೆಯರ ಏಳು ಜೋಡಿ ಕುಸ್ತಿಗಳು ನೋಡುಗರನ್ನು ರಂಜಿಸಿದವು.

ಬಿಜಾಪೂರ ಅಶೋಕ ವಾಲಿಕಾರ, ಸಂಗಡಿಗರ ಹಲಗೆ ವಾದನ ಜನತೆಯನ್ನು ರಂಜಿಸಿತು. ಶಾಸಕ ಮಹಾಂತೇಶ ಕೌಜಲಗಿ ಕುಸ್ತಿ ಪಂದ್ಯಾವಳಿಗಳಿಗೆ ಚಾಲನೆ ನೀಡಿದರು. ಗ್ರಾಪಂ ಅಧ್ಯಕ್ಷ ಚಂದ್ರಶೇಖರ ಕಾರಿಮನಿ, ಮಾಜಿ ಪೈಲ್ವಾನಾ ನಿಂಗಪ್ಪ ಕರಿಕಟ್ಟಿ, ಕುಸ್ತಿ ತರಬೇತಿದಾರರಾದ ನಾಗರಾಜ ಎ.ಆರ್.ಕೆ, ಮಂಜುನಾಥ ಮಾದರ, ಮಹಾರುದ್ರ ಗುಗ್ಗರಿ, ಮಹಾಂತೇಶ ತುರಮರಿ, ರುದ್ರಯ್ಯ ರೊಟ್ಟಯ್ಯನವರಮಠ, ಪ್ರಕಾಶ ಬಳಿಗಾರ, ಬಿ.ಜಿ.ದೆಗಾಂವಿ, ವಿಠ್ಠಲ ಪಿಸೆ, ಈರಪ್ಪ ತುರಾಯಿ, ಆನಂದ ಮುಪ್ಪಯ್ಯನವರ, ಶಶಿಧರ ಪತ್ತಾರ ಮುಂತಾದವರು ಇದ್ದರು.