ಗಣಿ ಜಿಲ್ಲೆಯಲ್ಲಿ ಹಲವು ರಾಜಕೀಯ ಪಲ್ಲಟಗಳಿಗೆ ಸಾಕ್ಷಿಯಾದ ವರ್ಷ

| Published : Dec 29 2024, 01:20 AM IST

ಸಾರಾಂಶ

ಬರೋಬ್ಬರಿ 14 ವರ್ಷಗಳ ಬಳಿಕ ರೆಡ್ಡಿ ಪುನರ್ ಆಗಮನ, ಸಹಜವಾಗಿ ಬೆಂಬಲಿಗರ ವಲಯದಲ್ಲಿ ಭಾರೀ ಉತ್ಸಾಹ ತಂದಿತು.

ಮಂಜುನಾಥ ಕೆ.ಎಂ.

ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ಬರಲು ಕೋರ್ಟ್ ಅನುಮತಿ, ಬಳ್ಳಾರಿ ಲೋಕಸಭಾ ಚುನಾವಣೆ ಹಾಗೂ ಸಂಡೂರು ಉಪ ಚುನಾವಣೆಯಲ್ಲಿ ಕೈ ಅಭ್ಯರ್ಥಿಗಳ ಭರ್ಜರಿ ಗೆಲುವು, ರಾಜ್ಯದಲ್ಲಿ ಸದ್ದು ಮಾಡಿದ ವಾಲ್ಮೀಕಿ ನಿಗಮ ಹಗರಣ, ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ...

2024ರಲ್ಲಿ ಬಳ್ಳಾರಿ ಜಿಲ್ಲೆಯಲ್ಲಾದ ಪ್ರಮುಖ ರಾಜಕೀಯ ಬೆಳವಣಿಗೆಗಳಿವು. ಅಕ್ರಮ ಗಣಿಗಾರಿಕೆಯ ಆರೋಪ ಹೊತ್ತು ಸುಪ್ರೀಂಕೋರ್ಟ್ ಸೂಚನೆಯಂತೆ ಬಳ್ಳಾರಿಯಿಂದ ದೂರವೇ ಉಳಿದಿದ್ದ ಜನಾರ್ದನ ರೆಡ್ಡಿ, ಮತ್ತದೇ ಕೋರ್ಟ್ ನೀಡಿದ ನಿರ್ಬಂಧದ ತೆರವಿನ ಆದೇಶದಿಂದಾಗಿ 2024ರ ಅಕ್ಟೋಬರ್ 3 ರಂದು 14 ವರ್ಷದ ಬಳಿಕ ಬಳ್ಳಾರಿಗೆ ರೀ ಎಂಟ್ರಿ ಪಡೆದರು.

ಬರೋಬ್ಬರಿ 14 ವರ್ಷಗಳ ಬಳಿಕ ರೆಡ್ಡಿ ಪುನರ್ ಆಗಮನ, ಸಹಜವಾಗಿ ಬೆಂಬಲಿಗರ ವಲಯದಲ್ಲಿ ಭಾರೀ ಉತ್ಸಾಹ ತಂದಿತು. ಗಣಿ ಉದ್ಯಮದ ಉತ್ತುಂಗ, ಅಬ್ಬರದ ಜೀವನ ಶೈಲಿ ಹಾಗೂ ರಾಜಕೀಯ ಬಿಗಿಪಟ್ಟುಗಳಿಂದ ಹೆಸರಾಗಿದ್ದ ಜನಾರ್ದನ ರೆಡ್ಡಿ ಬಳ್ಳಾರಿಗೆ ಮರಳಿದ್ದು ರಾಜಕೀಯ ವಲಯದಲ್ಲಿ ದೊಡ್ಡ ಸದ್ದು ಮಾಡಿತು. ಬಳ್ಳಾರಿಗೆ ಜನಾರ್ದನ ರೆಡ್ಡಿ ಮರು ಪ್ರವೇಶ ಪಡೆದ ಕೆಲ ದಿನಗಳಲ್ಲಿಯೇ ಸಂಡೂರು ಉಪ ಚುನಾವಣೆ ಘೋಷಣೆಯಾಯಿತು. ಉಪ ಚುನಾವಣೆಯ ಉಸ್ತುವಾರಿ ಹೊತ್ತು ಸಂಡೂರಿಗೆ ತೆರಳಿದ ಜನಾರ್ದನ ರೆಡ್ಡಿ, ಪಕ್ಷದ ಅಭ್ಯರ್ಥಿ ಗೆಲುವಿಗೆ ಶತಾಯಗತಾಯ ಪ್ರಯತ್ನಿಸಿದರು. ಆದರೆ, ಸಂಡೂರಿನ ಜನತೆ ಕಾಂಗ್ರೆಸ್ ಅಭ್ಯರ್ಥಿಯ ಕೈ ಹಿಡಿದರು. ಇದರಿಂದ ರೆಡ್ಡಿಗೆ ಮುಖಭಂಗವಾಯಿತು.

ಪತಿ-ಪತ್ನಿ ಗೆಲುವು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಂಡೂರು ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ ಈ.ತುಕಾರಾಂ ಅವರ ಗೆಲುವಿನಿಂದಾಗಿ ಸಂಡೂರು ಕ್ಷೇತ್ರಕ್ಕೆ ಕಳೆದ ನವೆಂಬರ್ 13ರಂದು ಉಪ ಚುನಾವಣೆ ಜರುಗಿತು. ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಟಿಕೆಟ್‌ಗೆ ಪೈಪೋಟಿಯಿತ್ತು. ಕೊನೆ ಗಳಿಗೆಯಲ್ಲಿ ಹಾಲಿ ಸಂಸದ ಈ.ತುಕಾರಾಂ ಪತ್ನಿ ಅನ್ನಪೂರ್ಣ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಿಸಲಾಯಿತು. ಇತ್ತ ಬಿಜೆಪಿಯಿಂದ ಉದ್ಯಮಿ ಬಂಗಾರು ಹನುಮಂತು ಅಖಾಡಕ್ಕಿಳಿದರು. ತೀವ್ರ ಜಿದ್ದಾಜಿದ್ದಿನ ಕಣದಲ್ಲಿ ಸಂಡೂರು ಕ್ಷೇತ್ರದ ಪರಂಪರೆಯಂತೆ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ 9230 ಮತಗಳ ಅಂತರದ ಗೆಲುವು ದಾಖಲಿಸಿದರು. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ತೀವ್ರ ಸೆಣಸಾಟ ನಡೆಸಿದ

ಕಮಲ ನಾಯಕರಿಗೆ ಮುಖಭಂಗವಾಯಿತು. ಉಪ ಚುನಾವಣೆಯ ಗೆಲುವು ಸಂಡೂರು ಕಾಂಗ್ರೆಸ್ ಭದ್ರಕೋಟೆ ಎಂಬುದನ್ನು ಮತ್ತೊಂದು ಬಾರಿ ರುಜುವಾತುಪಡಿಸಿದಂತಾಯಿತು.

ವಾಲ್ಮೀಕಿ ಹಗರಣದ ಸದ್ದು: ರಾಜ್ಯವನ್ನು ಬೆಚ್ಚಿ ಬೀಳಿಸಿದ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಹಾಗೂ ಬಳ್ಳಾರಿ ಜಿಲ್ಲಾ ಸಚಿವ ಸ್ಥಾನವನ್ನು ಕಳೆದುಕೊಳ್ಳುವಂತಾಯಿತು.

ಈ ಪ್ರಕರಣದಿಂದಾಗಿ ಶಾಸಕ ಬಿ.ನಾಗೇಂದ್ರ ಜೈಲು ಸೇರಬೇಕಾಯಿತು. ಈ ಬೆಳವಣಿಗೆ ನಾಗೇಂದ್ರ ರಾಜಕೀಯ ಭವಿಷ್ಯದ ಮೇಲೆ ಬಹುದೊಡ್ಡ ಪೆಟ್ಟು ಬಿತ್ತು. ಗ್ರಾಮೀಣ ಕ್ಷೇತ್ರ ಚುನಾವಣೆಯಲ್ಲಿ ಶ್ರೀರಾಮುಲು ಅವರನ್ನು ಸೋಲಿಸಿದ ಬಳಿಕ ರಾಜಕೀಯ ಇಮೇಜ್ ಹೆಚ್ಚಿಸಿಕೊಂಡಿದ್ದ ನಾಗೇಂದ್ರ ಬಳ್ಳಾರಿಯ ಕಾಂಗ್ರೆಸ್‌ನ ಮುಂಚೂಣಿ ನಾಯಕರಾಗಿ ಬಿಂಬಿತವಾಗಿದ್ದರು. ಆದರೆ, ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ ಸುತ್ತಿಕೊಳ್ಳುತ್ತಿದ್ದಂತೆಯೇ ನಾಗೇಂದ್ರ ರಾಜಕೀಯ ಭವಿಷ್ಯ ಪಲ್ಲಟಗೊಂಡಿತು. ಹಗರಣದ ಸುಳಿಯಿಂದ ಪಾರಾಗಲು ಶಾಸಕ ನಾಗೇಂದ್ರ ಇನ್ನು ಪರದಾಡುತ್ತಲೇ ಇದ್ದು 2024ರ ವರ್ಷ ಶಾಸಕ ನಾಗೇಂದ್ರ ಪಾಲಿಗೆ ಕಹಿ ಅನುಭವ ನೀಡಿತು.