ಚಿನ್ನಸ್ವಾಮಿ ಸ್ಟೇಡಿಯಂ ಕ್ಯಾಂಟೀನಲ್ಲಿ ಆಹಾರ ಸೇವಿಸಿ ಯುವಕ ಅಸ್ವಸ್ಥ

| Published : May 17 2024, 12:37 AM IST / Updated: May 17 2024, 07:24 AM IST

ಚಿನ್ನಸ್ವಾಮಿ ಸ್ಟೇಡಿಯಂ ಕ್ಯಾಂಟೀನಲ್ಲಿ ಆಹಾರ ಸೇವಿಸಿ ಯುವಕ ಅಸ್ವಸ್ಥ
Share this Article
  • FB
  • TW
  • Linkdin
  • Email

ಸಾರಾಂಶ

ಆರ್‌ಸಿಬಿ-ಡೆಲ್ಲಿ ಐಪಿಎಲ್‌ ವೀಕ್ಷಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಕ್ಯಾಂಟೀನಲ್ಲಿ ಆಹಾರ ಸೇವನೆ ಮಾಡಿದ್ದ ಯುವಕನೋರ್ವ ಅಸ್ವಸ್ಥನಾಗಿದ್ದು, ಆಡಳಿತ ಮಂಡಳಿಯ ವಿರುದ್ಧ ದೂರು ದಾಖಲಾಗಿದೆ.

 ಬೆಂಗಳೂರು :  ಎಂ.ಚಿನ್ನಸ್ವಾಮಿ ಕ್ರಿಕೆಟ್‌ ಮೈದಾನದ ಕ್ಯಾಂಟೀನ್‌ ಆಹಾರ ಸೇವಿಸಿ ಅಸ್ವಸ್ಥನಾಗಿದ್ದ ಯುವಕ, ಕ್ಯಾಂಟೀನ್‌ ಮತ್ತು ಕ್ರಿಕೆಟ್‌ ಮೈದಾನದ ಆಡಳಿತ ಮಂಡಳಿ ವಿರುದ್ಧ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ವಿದ್ಯಾರಣ್ಯಪುರ ಬಿಇಎಲ್‌ ಲೇಔಟ್‌ ನಿವಾಸಿ  ಎಸ್‌.ಕೆ.ಚೈತನ್ಯ(23) ನೀಡಿದ ದೂರಿನ ಮೇರೆಗೆ ಎಂ.ಚಿನ್ನಸ್ವಾಮಿ ಕ್ರಿಕೆಟ್‌ ಮೈದಾನದ ಕ್ಯಾಂಟೀನ್‌ನ ಸಂಘಟಕರು ಮತ್ತು ಕ್ರಿಕೆಟ್‌ ಸ್ಟೇಡಿಯಂನ ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:

ಖಾಸಗಿ ಕಂಪನಿ ಉದ್ಯೋಗಿ ಚೈತನ್ಯ ತಮ್ಮ ಮಾವನ ಮಗ ಗೌತಮ್‌ ಜತೆಗೆ ಮೇ 12ರಂದು ನಗರದ ಎಂ.ಚಿನ್ನಸ್ವಾಮಿ ಕ್ರಿಕೆಟ್‌ ಮೈದಾನದಲ್ಲಿ ನಡೆದ ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿಯ ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳ ನಡುವಿನ ಪಂದ್ಯ ವೀಕ್ಷಣೆಗೆ ತೆರಳಿದ್ದರು. ಸ್ಟೇಡಿಯಂನ ಕತಾರ್‌ ಏರ್‌ವೇಸ್‌ ಫ್ಯಾನ್ಸ್‌ ಟೆರೆಸ್‌ ಸ್ಟ್ಯಾಂಡ್‌ನಲ್ಲಿ ಪಂದ್ಯ ವೀಕ್ಷಿಸುವಾಗ, ರಾತ್ರಿ ಸುಮಾರು 9 ಗಂಟೆಗೆ ಆ ಸ್ಟ್ಯಾಂಡ್‌ನ ಕ್ಯಾಂಟೀನ್‌ನಲ್ಲಿ ಡ್ರೈ ಜಾಮೂನು, ಗೀ ರೈಸ್‌, ಇಡ್ಲಿ, ಚನ್ನಮಸಾಲ, ಕಟ್ಲೇಟ್‌ ಮತ್ತು ರಾಯತ ಸೇವಿಸಿದ್ದಾರೆ.

ಅಸ್ವಸ್ಥಗೊಂಡು ಕುಸಿದ ಯುವಕ

ಆಹಾರ ಸೇವಿಸಿದ ಎರಡು-ಮೂರು ನಿಮಿಷಗಳ ಬಳಿಕ ಚೈತನ್ಯ ಅವರ ಹೊಟ್ಟೆ ತೊಳಿಸಿದಂತಾಗಿದೆ ಎಂದಿದ್ದಾರೆ. ಆದರೂ ಪಂದ್ಯ ವೀಕ್ಷಣೆ ಮುಂದುವರೆಸಿದ್ದು, ಐದಾರು ನಿಮಿಷಗಳ ಬಳಿಕ ಚೈತನ್ಯ ಅಸ್ವಸ್ಥರಾಗಿ ಸೀಟಿನಿಂದ ಕುಸಿದು ಕೆಳಗೆ ಬಿದ್ದಿದ್ದಾರೆ. ಈ ವೇಳೆ ಜತೆಯಲ್ಲೇ ಇದ್ದ ಗೌತಮ್‌ ಮತ್ತು ಸ್ಟೇಡಿಯಂನ ಸಿಬ್ಬಂದಿ ಕೂಡಲೇ ಚೈತನ್ಯ ಅವರನ್ನು ಹೊರಗೆ ಕರೆತಂದು ಆ್ಯಂಬುಲೆನ್ಸ್‌ನಲ್ಲಿ ಡ್ರಿಪ್ಸ್‌ ಹಾಕಿಸಿದ್ದಾರೆ. 15 ನಿಮಿಷಗಳ ಪ್ರಾಥಮಿಕ ಚಿಕಿತ್ಸೆ ಬಳಿಕ ಚೈತನ್ಯ ಅವರನ್ನು ಮಣಿಪಾಲ್‌ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಆಹಾರ ವ್ಯತ್ಯಾಸದಿಂದ ಅಸ್ವಸ್ಥತೆ: ವೈದ್ಯರು

ಚೈತನ್ಯ ಅವರನ್ನು ಪರೀಕ್ಷಿಸಿದ ವೈದ್ಯರು ಆಹಾರದಲ್ಲಿ ವ್ಯತ್ಯಾಸವಾಗಿದೆ ಎಂದು ಹೇಳಿದ್ದಾರೆ. ಹಾಗಾಗಿ ಚೈತನ್ಯ ತನ್ನ ಅಸ್ವಸ್ಥತೆಗೆ ಕಾರಣವಾಗಿರುವ ಸ್ಟೇಡಿಯಂನ ಕ್ಯಾಂಟಿನ್‌ ಸಂಘಟಕರು ಹಾಗೂ ಸ್ಟೇಡಿಯಂನ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.