ವಿವಾಹಿತ ಮಹಿಳೆಯೊಂದಿಗೆ ಪರಾರಿಯಾದ ಅನ್ಯ ಕೋಮಿನ ಯುವಕ

| Published : Aug 15 2025, 01:00 AM IST

ಸಾರಾಂಶ

ಕೊಟ್ಟಿಗೆಹಾರ, ಸುಮಾರು ಏಳು ವರ್ಷ ಪ್ರೀತಿಸಿ, ಎರಡು ವರ್ಷದ ಹಿಂದೆ ಮದುವೆಯಾಗಿದ್ದ ಮಹಿಳೆ ಅನ್ಯ ಕೋಮಿನ ಯುವಕನೊಂದಿಗೆ ಪರಾರಿಯಾಗಿರುವ ಘಟನೆ ಬಣಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಗುರುವಾರ ಹಿಂದೂಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ, ಕೊಟ್ಟಿಗೆಹಾರ

ಸುಮಾರು ಏಳು ವರ್ಷ ಪ್ರೀತಿಸಿ, ಎರಡು ವರ್ಷದ ಹಿಂದೆ ಮದುವೆಯಾಗಿದ್ದ ಮಹಿಳೆ ಅನ್ಯ ಕೋಮಿನ ಯುವಕನೊಂದಿಗೆ ಪರಾರಿಯಾಗಿರುವ ಘಟನೆ ಬಣಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಗುರುವಾರ ಹಿಂದೂಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಈ ಮಹಿಳೆ ಮೂರು ತಿಂಗಳ ಹಿಂದೆ ಮೂಡಿಗೆರೆ ಹ್ಯಾಂಡ್ ಪೋಸ್ಟ್‌ನ ಕಾಫಿ ಲಿಂಕ್ಸ್ ಅಂಗಡಿಯೊಂದಕ್ಕೆ ಕೆಲಸಕ್ಕೆಂದು ಸೇರಿದ್ದರು. ಆ ಅಂಗಡಿಯಲ್ಲಿ ಪರಿಚಯವಾದ ಕೇರಳ ಮೂಲದ ಅನ್ಯ ಕೋಮಿನ ಯುವಕನೊಂದಿಗೆ ಕೆಲ ದಿನಗಳ ಹಿಂದೆ ಆ ಯುವಕ ಮಹಿಳೆಯೊಂದಿಗೆ ಪರಾರಿಯಾಗಿದ್ದಾನೆ. ಈ ಸಂಬಂಧ ಮಹಿಳೆ ಪತಿ ಬಣಕಲ್‌ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಈ ಮಹಿಳೆ ಅನ್ಯ ಕೋಮಿನ ಯುವಕನೊಂದಿಗೆ ಕೇರಳದಲ್ಲಿ ಇರುವುದನ್ನು ಖಾತ್ರಿ ಪಡಿಸಿದ ಪೊಲೀಸರು ಅವರನ್ನು ಗುರುವಾರ ಬಣಕಲ್‌ ಪೊಲೀಸ್‌ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.

ವಿಷಯ ತಿಳಿಯುತ್ತಿದ್ದಂತೇ ಬಣಕಲ್ ಪೊಲೀಸ್ ಠಾಣೆ ಬಳಿ ಜಮಾಯಿಸಿದ ಹಿಂದೂಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಅನ್ಯ ಕೋಮಿನ ಯುವಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್ ಠಾಣೆ ಬಳಿ ಬರುತ್ತಿದ್ದಂತೇ ಠಾಣೆ ಗೇಟ್ ಹಾಕಿದ್ದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಆಕ್ರೋಶಗೊಂಡು ಕೆಲ ಕಾಲ ಬಣಕಲ್ ಮುಖ್ಯ ರಸ್ತೆ ತಡೆ ನಡೆಸಿದರು. ನಂತರ ಪೊಲೀಸ್ ಠಾಣೆಯ ಒಳಗೆ ಬಿಡುವ ಭರವಸೆ ನೀಡಿದ ನಂತರ ರಸ್ತೆ ತಡೆ ಕೈ ಬಿಡಲಾಯಿತು.

14 ಕೆಸಿಕೆಎಂ 6ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಬಣಕಲ್ ಮುಖ್ಯ ರಸ್ತೆ ರಸ್ತೆ ತಡೆ ನಡೆಸಿದರು.