ಸಾರಾಂಶ
ಕನಕಗಿರಿ: ಉತ್ತರ ಕರ್ನಾಟಕ ಗ್ರಾಮೀಣ ಸೊಗಡು ಬಿಂಬಿಸುವ ಹಾಗೂ ಶಕ್ತಿ ಪ್ರದರ್ಶನಾ ಕಲೆಗೆ ಹೆಸರುವಾಸಿಯಾದ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯು ಕನಕಗಿರಿ ಉತ್ಸವದಲ್ಲಿ ಇದೇ ಮೊದಲ ಬಾರಿಗೆ ನಡೆಯಿತು.
ಕುಷ್ಟಗಿ ತಾಲೂಕಿನ ಪುರ ಗ್ರಾಮದ ಮೂವರು ಕ್ರೀಡಾಪಟುಗಳು ಕಲ್ಲುಗಳನ್ನು ಎತ್ತಿ ನಾಮುಂದು-ತಾಮುಂದು ಎಂದು ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಮಧ್ಯಾಹ್ನದ ವೇಳೆ ನಡೆದ ಸ್ಪರ್ಧೆಯಲ್ಲಿ ಹತ್ತಾರು ಯುವಕರು ಪಾಲ್ಗೊಂಡು ಸಂಗ್ರಾಣಿ ಕಲ್ಲು ಎತ್ತಿದರು.ಪಕ್ಕಾ ರೈತನಾದ ವೆಂಕೋಬ ಬರೊಬ್ಬರಿ ೮೮ ಕೆಜಿ ತೂಕದ ಸಂಗ್ರಾಣಿ ಕಲ್ಲನ್ನು ಒಂದೇ ಕೈಯಲ್ಲಿ ಎತ್ತಿ ತೂರಿ ಪ್ರಥಮ ಸ್ಥಾನ ಪಡೆದರು. ಗದಗ ಜಿಲ್ಲೆ ನರಗುಂದ ಬನಟ್ಟಿ ಗ್ರಾಮದ ೨೨ ವರ್ಷದ ಯುವಕ ಮುತ್ತು ಗಡ್ಡಿ ೮೧ ಕೆಜಿ ಕಲ್ಲು ಎತ್ತುವ ಮೂಲಕ ದ್ವಿತೀಯ ಸ್ಥಾನ ಪಡೆದರೆ, ಪುರ ಗ್ರಾಮದ ಹಾಲಪ್ಪ ೭೮ ಕೆಜಿ ಎತ್ತಿ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟರು. ವಿಜೇತರಿಗೆ ಜಿಲ್ಲಾಡಳಿತದಿಂದ ಬಹುಮಾನ ನೀಡಿ, ಗೌರವಿಸಲಾಯಿತು.ಕ್ವಿಂಟಲ್ ತೂಕದ ಕಲ್ಲು ಎತ್ತಿದ ಮುತ್ತು: ೮೧ ಕೆಜಿ ಕಲ್ಲನ್ನು ಎತ್ತಿ ದ್ವಿತೀಯ ಸ್ಥಾನ ಪಡೆದಿದ್ದ ಮುತ್ತು ಗಡ್ಡಿ ಪಂದ್ಯಾಟ ಮುಗಿದ ಮೇಲೂ ಅಭಿಮಾನಿಗಳ ಇಚ್ಛೆಯಂತೆ ೮೮ ಕೆಜಿ, ೯೫ ಹಾಗೂ ೧ ಕ್ವಿಂಟಲ್ ೧ ಕೆಜಿ ತೂಕದ ಸಂಗ್ರಾಣಿ ಕಲ್ಲು ಎತ್ತಿ ಕನಕಗಿರಿ ಮಣ್ಣಲ್ಲಿ ಇತಿಹಾಸ ಸೃಷ್ಟಿಸಿದರು. ಕ್ವಿಂಟಲ್ ತೂಕದ ಕಲ್ಲು ಎತ್ತಿದ ಮುತ್ತು ಜತೆ ಅಭಿಮಾನಿಗಳು ಹಾಗೂ ನೆರೆದಿದ್ದ ಜನತೆ ಕೈ ಕುಲುಕಿ ಅಭಿನಂದಿಸಿದರು. ಇನ್ನೂ ಕೆಲವರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.