ವಕೀಲನಲ್ಲದಿದ್ದರೂ ವಾದಿಸಿ ಗ್ರಾಹಕರ ವೇದಿಕೆಯಲ್ಲಿ ಗೆದ್ದ ಯುವಕ

| Published : Oct 01 2025, 01:00 AM IST

ಸಾರಾಂಶ

ಕೊಪ್ಪಳ ತಾಲೂಕಿನ ಕಂಪಸಾಗರ ಗ್ರಾಮದ ನಿವಾಸಿಯಾಗಿರುವ ಹರೀಶ ಜೈನ್ ಕೃಷಿ ಕ್ಷೇತ್ರದಲ್ಲೊಂದು ಸ್ಟಾರ್ಟಪ್ ಕಂಪನಿ ಪ್ರಾರಂಭಿಸಿದ್ದಾನೆ

ಸೋಮರಡ್ಡಿ ಅಳವಂಡಿ ಕೊಪ್ಪಳ

ಆತ ವಕೀಲ ಅಲ್ಲ, ಆದರೂ ಗ್ರಾಹಕರ ನ್ಯಾಯಾಲಯದಲ್ಲಿ ತನಗೆ ಆಗಿದ್ದ ಅನ್ಯಾಯದ ವಿರುದ್ಧ ತಾನೆ ವಾದಿಸಿ ಜಯ ಸಾಧಿಸಿದ್ದಾನೆ. ಅಷ್ಟೇ ಅಲ್ಲ ಈತನ ವಾದಕ್ಕೆ ತಲೆದೂಗಿ ಆಗಿರುವ ನಷ್ಟದ ₹3.75 ಲಕ್ಷ ಹಾಗೂ ₹15 ಸಾವಿರ ಪರಿಹಾರ ನೀಡುವಂತೆ ಕೊಪ್ಪಳ ಜಿಲ್ಲಾ ಗ್ರಾಹಕರ ವೇದಿಕೆ ಮಹತ್ವದ ಆದೇಶ ಮಾಡಿದೆ.

ಹರೀಶ ಜೈನ್ ಈ ಸಾಧನೆ ಮಾಡಿದ ಯುವಕ. ಕೊಪ್ಪಳ ತಾಲೂಕಿನ ಕಂಪಸಾಗರ ಗ್ರಾಮದ ನಿವಾಸಿಯಾಗಿರುವ ಹರೀಶ ಜೈನ್ ಕೃಷಿ ಕ್ಷೇತ್ರದಲ್ಲೊಂದು ಸ್ಟಾರ್ಟಪ್ ಕಂಪನಿ ಪ್ರಾರಂಭಿಸಿದ್ದಾನೆ. ಅದರಲ್ಲಿ ಕೃಷಿ ಚಟುವಟಿಕೆಗೆ ಡ್ರೋನ್‌ ಬಾಡಿಗೆ ನೀಡುವ ಕಾರ್ಯ ಪ್ರಾರಂಭಿಸುತ್ತಾನೆ. ಇದಕ್ಕಾಗಿ ಎರಡು ಡ್ರೋನ್‌ ಸಹ ಖರೀದಿಸಿರುತ್ತಾನೆ.

ಹೀಗೆ ಖರೀದಿಸಿದ ಡ್ರೋನ್‌ದಿಂದ ಉತ್ತಮ ಕಾರ್ಯನಿರ್ವಹಿಸುತ್ತಾ ರೈತರ ಬೆಳೆಗೆ ರಸಾಯನಿಕ ಸಿಂಪರಣೆ ಮಾಡುವ ಕಾರ್ಯ ಪ್ರಾರಂಭಿಸಿರುತ್ತಾನೆ.

2023ರ ಅಕ್ಟೋಬರ್ 13 ರಂದು ಕೊಪ್ಪಳ ತಾಲೂಕಿನ ನಿಂಗಾಪುರ ಗ್ರಾಮದಲ್ಲಿ ರೈತರ ಹೊಲದಲ್ಲಿ ರಸಾಯನಿಕ ಸಿಂಪರಣೆ ಮಾಡುತ್ತಿರುವ ವೇಳೆಯಲ್ಲಿ ನಿಯಂತ್ರಣ ಕಳೆದುಕೊಂಡ ಡ್ರೋನ್‌ ಇದಕ್ಕಿಂತ ಸುಮಾರು ಒಂದೂವರೆ ಕಿಮೀ ದೂರ ಹೋಗಿ ವಿದ್ಯುತ್ ತಂತಿಗೆ ಡಿಕ್ಕಿ ಹೊಡೆದು ಹಾಳಾಗಿ ಹೋಯಿತು.

ಇದನ್ನು ಪ್ರಶ್ನೆ ಮಾಡಿ ಕಂಪನಿಗೆ ವಕೀಲರ ಮೂಲಕ ನೋಟಿಸ್ ಜಾರಿ ಮಾಡುತ್ತಾರೆ. ಆದರೂ ಕಂಪನಿಯವರು ಕ್ಯಾರೆ ಎನ್ನುವುದಿಲ್ಲ. ಆಗ ಹರೀಶ್ ಜೈನ್ ತಾನೇ ಕೊಪ್ಪಳ ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ದಾವೆ ಹೂಡುತ್ತಾರೆ. ಹೀಗೆ ದಾವೆ ಹೂಡಿದ ಅವರು ಇದಕ್ಕಾಗಿ ವಕೀಲರನ್ನು ನಿಯೋಜನೆ ಮಾಡುವುದಿಲ್ಲ. ಎಂ.ಟೆಕ್ ಪದವೀಧರ ಆಗಿರುವುದರಿಂದ ತಾಂತ್ರಿಕವಾಗಿ ಹೆಚ್ಚು ಅನುಭವ ನನಗೆ ಇದೆ ಎಂದು ತಾನೇ ವಾದಿಸುವುದಾಗಿ ಗ್ರಾಹಕರ ವೇದಿಕೆಯಲ್ಲಿ ಅರ್ಜಿ ಸಲ್ಲಿಸುತ್ತಾನೆ.

ಹೀಗೆ, ಅರ್ಜಿ ಸಲ್ಲಿಸಿ ಗ್ರಾಹಕರ ವೇದಿಕೆಯ ಮೂಲಕ ಡ್ರೋನ್‌ ಪೂರೈಕೆ ಮಾಡಿದ ರೋಬೋಟ್ ಕಿಂಗ್ ಎನ್ನುವ ಕಂಪನಿಗೆ ನೋಟಿಸ್ ಜಾರಿಯಾಗುತ್ತದೆ. ಈ ಕುರಿತು ಸುದೀರ್ಘ ವಿಚಾರಣೆ ಗ್ರಾಹಕರ ವೇದಿಕೆಯಲ್ಲಿ ನಡೆಯುತ್ತದೆ. ಸ್ವತಃ ಎಂ.ಟೆಕ್ ಪದವೀಧರನಾಗಿದ್ದ ಹರೀಶ್ ಜೈನ್ ದೇಶದಾದ್ಯಂತ ವಿವಿಧ ಗ್ರಾಹಕರ ನ್ಯಾಯಾಲಯದಲ್ಲಿ ಆಗಿರುವ ವಿಚಾರಣೆ, ತೀರ್ಪುಗಳ ಅಧ್ಯಯನ ಮಾಡುತ್ತಾ ವಾದಿಸುತ್ತಾನೆ. ಈಗ ಕೊಪ್ಪಳ ಜಿಲ್ಲಾ ಗ್ರಾಹಕರ ವೇದಿಕೆ ಸೆ. 28 ರಂದು ಮಹತ್ವದ ತೀರ್ಪು ನೀಡಿದೆ.

ತೀರ್ಪಿನ ಅನ್ವಯ ಈಗ ಹರೀಶ ಜೈನ್ ಅವರಿಗೆ ಡ್ರೋನ್‌ ನಷ್ಟದ ₹3.75 ಸಾವಿರ ಹಾನಿಯಾದ ದಿನದಿಂದ ಶೇ. 6 ಬಡ್ಡಿದರದಲ್ಲಿ ನೀಡಬೇಕು ಮತ್ತು ₹15 ಸಾವಿರ ಪರಿಹಾರ ನೀಡಬೇಕು ಎಂದು ಮಹತ್ವದ ಆದೇಶ ನೀಡಿದೆ.

ನನಗೆ ಅತೀವ ಖುಷಿಯಾಗಿದೆ. ನಾನೇ ವಾದಿಸಿ ಗೆದ್ದಿರುವುದು ಇನ್ನು ಖುಷಿಯಾಗುವಂತೆ ಮಾಡಿದೆ. ಗ್ರಾಹಕರ ನ್ಯಾಯಾಲಯದಲ್ಲಿ ವಕೀಲರನ್ನು ನೀಡಿದರೆ ನಾನೇ ಅವರಿಗೆ ಆ ಕುರಿತು ಮಾಹಿತಿ ನೀಡಬೇಕಾಗಿತ್ತು. ಹೀಗಾಗಿ, ಅನುಮತಿ ಪಡೆದು ನಾನೇ ವಾದಿಸಿದ್ದು ಯಶಸ್ವಿಯಾಗಿದ್ದೇನೆ. ವಿಚಾರಣೆಯ ವೇಳೆ ಸಾಕಷ್ಟು ಸಮಸ್ಯೆ ಎದುರಿಸಿದೆ. ಆಗ ನಾನು ಯು ಟ್ಯೂಬ್ ಮೂಲಕ ಬೇರೆ ಬೇರೆ ವಿಚಾರಣೆ ಮತ್ತು ತೀರ್ಪುಗಳ ಬಗ್ಗೆ ತಿಳಿದುಕೊಂಡು ವಾದಿಸಿ ಜಯ ಸಾಧಿಸಿದೆ ಎಂದು ಹರೀಶ ಜೈನ್ ತಿಳಿಸಿದ್ದಾರೆ.