ಹಿರಿಯರಿಂದ ದೂರ ಸರಿಯುತ್ತಿರುವ ಯುವ ಜನಾಂಗ

| Published : Nov 25 2024, 01:03 AM IST

ಸಾರಾಂಶ

ಗ್ರಾಮೀಣ ಪ್ರದೇಶದಲ್ಲಿ ಎಲ್ಲ ಹಬ್ಬಗಳ ಆಚರಣೆಯಲ್ಲಿ ಸರ್ವ ಸಮುದಾಯದವರು ಸೇರಿ ಭಾಗವಹಿಸುತ್ತಿದ್ದರು. ಅಲ್ಲಿ ಪಡೆಯುತ್ತಿದ್ದ ಜೀವನದ ಅನುಭವಗಳನ್ನು ಯಾವ ವಿಶ್ವವಿದ್ಯಾಲಯದಿಂದಲೂ ಪಡೆಯಲು ಸಾಧ್ಯವಿಲ್ಲ.

ಧಾರವಾಡ:

ಓದಿಗಿಂತ ಹಿರಿಯರ ಸಂಪರ್ಕ, ಒಡನಾಟದಿಂದ ಬೌದ್ಧಿಕ ಸಾಮರ್ಥ್ಯ ಹೆಚ್ಚಿಸಿಕೊಂಡವನು ನಾನು ಎಂದು ಕಲಬುರಗಿಯ ಜಾನಪದ ವಿದ್ವಾಂಸ ಡಾ. ವೀರಣ್ಣ ದಂಡೆ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ರಾಜ್ಯೋತ್ಸವ ನಿಮಿತ್ತ ಆಯೋಜಿಸಿದ್ದ ‘ಧರೆಗೆ ದೊಡ್ಡವರು’ ಸನ್ಮಾನ ಸ್ವೀಕರಿಸಿದ ಅವರು, ಯುವಜನಾಂಗ ಹಿರಿಯರಿಂದ ದೂರ ಸರಿಯುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಹಿಂದೆ ಜಾತ್ಯತೀತ ಮನಸ್ಸುಗಳಿದ್ದವು. ಎಲ್ಲ ಹಬ್ಬಗಳ ಆಚರಣೆಯನ್ನು ಎಲ್ಲ ಜನಾಂಗದವರು ಸೇರಿಯೇ ಮಾಡುತ್ತಿದ್ದರು. ಅಲ್ಲಿ ಪಡೆಯುತ್ತಿದ್ದ ಜೀವನದ ಅನುಭವಗಳನ್ನು ಯಾವ ವಿಶ್ವವಿದ್ಯಾಲಯದಿಂದಲೂ ಪಡೆಯಲು ಸಾಧ್ಯವಿಲ್ಲ. ಅಲ್ಲಿದ್ದ ತತ್ವಪದ, ಭಜನಾ ಪದ, ಮೊಹರಂ ಪದ, ತ್ರಿಪದಿ, ಚೌಪದಿ, ಗಾದೆ, ಒಗಟುಗಳನ್ನು ಹಿರಿಯರಿಂದ ಕೇಳಿ ಪಡೆದುಕೊಂಡ ಜ್ಞಾನ ಅಪಾರವಾದದ್ದು ಎಂದರು.

ಇನ್ನೋರ್ವ ಧರೆಗೆ ದೊಡ್ಡವರು ಸನ್ಮಾನ ಸ್ವೀಕರಿಸಿದ ಚಿತ್ರಕಲಾವಿದ ಸಿ. ಚಂದ್ರಶೇಖರ, ಅಂತರಂಗದ ಭಾವನೆಗಳನ್ನು ವ್ಯಕ್ತಪಡಿಸುವ ಪ್ರಕ್ರಿಯೆಗೆ ಮೂಲ ಆಕರವಾದದ್ದು ಚಿತ್ರಕಲೆ. ಬೇರೆ ಬೇರೆ ಮಾಧ್ಯಮದ ಮುಖಾಂತರವಾಗಿ ಅಂದರೆ ಕಾವ್ಯ, ಕಥೆ, ಕಾದಂಬರಿ ಮೊದಲಾದ ರೂಪದಲ್ಲಿ ಕವಿ, ಸಾಹಿತಿ, ತನ್ನ ಒಳಗಡೆ ಸ್ಪೋಟಗೊಳ್ಳುವ ಭಾವನೆಗಳನ್ನು ಹೊರಹಾಕುತ್ತಾನೆ. ಅದೇ ರೀತಿಯಲ್ಲಿ ಚಿತ್ರಕಲಾವಿದನು ಕೂಡ ತನ್ನ ಒಳಗಡೆ ಹುಟ್ಟುವ ಚಿತ್ರ-ವಿಚಿತ್ರ ಭಾವನೆಗಳನ್ನು ಚಿತ್ರಕಲೆಯ ಮೂಲಕ ಹೊರಹಾಕುತ್ತಾನೆ ಎಂದರು.

ಡಾ. ವೀರಣ್ಣ ದಂಡೆ ಅವರ ಬದುಕು, ಸಾಧನೆ ಕುರಿತು ಕಲಬುರಗಿ ಡಾ. ಅರುಣ ಜೋಳದಕೂಡಲಗಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಗ್ರಾಮೀಣ ಬದುಕಿನಲ್ಲಿ ಕಂಡುಕೊಂಡ ಅನುಭವಗಳನ್ನು ಜಾನಪದರು ಕಾವ್ಯದ ಮೂಲಕ ಅಭಿವ್ಯಕ್ತಪಡಿಸಿದ್ದಾರೆ. ಅಂಥ ಜನಪದ ಸಾಹಿತ್ಯವನ್ನು, ಜನಪದರ ಆಗುಹೋಗುಗಳನ್ನು ಸಂಗ್ರಹಿಸಿದ ಜಾನಪದ ಮಿಮಾಂಸೆಗೆ ದಂಡೆಯವರ ಕೊಡುಗೆ ಅಪಾರ ಎಂದರು.

ಸಿ. ಚಂದ್ರಶೇಖರ ಬದುಕು, ಸಾಧನೆ ಕುರಿತು ಡಾ. ವೈಶಾಲಿ ಕಾಂಬಳೆ, ಚಿತ್ರಕಲೆಗೆ ಭವ್ಯವಾದ ಇತಿಹಾಸವಿದೆ. ಪ್ರಾಚೀನ ಕಾಲದ ಮನುಷ್ಯ ಚಿತ್ರಕಲೆಯ ಮುಖಾಂತರವಾಗಿಯೇ ತನ್ನ ಬೇಕು ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತಿದ್ದ. ಇಂತಹ ಚಿತ್ರಕಲೆಗೆ ಇವತ್ತಿನ ಕಾಲಘಟ್ಟದಲ್ಲಿ ಮಹತ್ವವನ್ನು ತಂದುಕೊಟ್ಟು, ಅವರು ಚಿತ್ರಕಲೆಯನ್ನೆ ಉಸಿರಾಗಿಸಿಕೊಂಡ ಸಿ. ಚಂದ್ರಶೇಖರ ಅವರು ಧರೆಗೆ ದೊಡ್ಡವರಾಗಿ ನಿಲ್ಲುತ್ತಾರೆ ಎಂದರು.

ಕಿಟೆಲ್ ಕಾಲೇಜು ವಿದ್ಯಾರ್ಥಿಗಳೊಂದಿಗೆ ಇಬ್ಬರು ಗಣ್ಯರಿಂದ ಸಂವಾದ ನಡೆಯಿತು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಇದ್ದರು. ಹರ್ಲಾಪುರದ ಕಲಾವಿದರು ಕನ್ನಡ ಗೀತೆ, ಜಾಗ್ರತ ಗೀತೆಗಳನ್ನು ಪ್ರಸ್ತುತಪಡಿಸಿದರು. ಶಂಕರ ಹಲಗತ್ತಿ ಸ್ವಾಗತಿಸಿದರು. ಡಾ. ಜಿನದತ್ತ ಹಡಗಲಿ ಕಾರ್ಯಕ್ರಮ ನಿರೂಪಿಸಿದರು.