ಕುಡ್ಲದ ಯುವಕ- ಥಾಯ್ಲೆಂಡ್‌ ಯುವತಿ ಸಪ್ತಪದಿ

| Published : Dec 06 2024, 08:56 AM IST

ಸಾರಾಂಶ

ಜುಲೈನಲ್ಲೇ ಥಾಯ್ಲೆಂಡ್‌ನಲ್ಲಿ ಅಲ್ಲಿನ ಪದ್ಧತಿಯಂತೆ ವಿವಾಹ ನೆರವೇರಿದೆ. ಇದೀಗ ಭಾರತೀಯ ಸಂಪ್ರದಾಯದ ಪ್ರಕಾರ ಗುರುವಾರ ನಗರದ ಮಂಗಳಾದೇವಿ ದೇವಸ್ಥಾನದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದೂರದ ಥಾಯ್ಲೆಂಡ್‌ನಲ್ಲಿ ಪ್ರೀತಿ ಅರಳಿ, ಮಂಗಳೂರಿನಲ್ಲಿ ಸಪ್ತಪದಿ ತುಳಿಯುವ ಮೂಲಕ ತುಳುನಾಡಿನ ಯುವಕ ಪೃಥ್ವಿರಾಜ್‌ ಎಸ್‌. ಅಮೀನ್ ಮತ್ತು ಥಾಯ್ಲೆಂಡ್‌ನ ಯುವತಿ ಮೊಂತಕನ್ ಸಸೂಕ್ ಗುರುವಾರ ನಗರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಮಂಗಳೂರಿನ ಸತೀಶ್‌ ಕುಮಾರ್‌ ಮತ್ತು ಸುಜಯಾ ಸತೀಶ್‌ ಅವರ ಪುತ್ರ ಪೃಥ್ವಿರಾಜ್‌ ಬೆಂಗಳೂರಿನಲ್ಲಿ ಸ್ವಂತ ಸಾಫ್ಟ್‌ವೇರ್‌ ಕಂಪೆನಿ ನಡೆಸುತ್ತಿದ್ದಾರೆ. ಪ್ರಾಜೆಕ್ಟ್‌ ಮೇಲೆ ಥಾಯ್ಲೆಂಡ್‌ ದೇಶಕ್ಕೆ ಹೋಗಿದ್ದ ಅವರಿಗೆ ಮೊಂತಕನ್ ಸಸೂಕ್ ಪರಿಚಯವಾಗಿದ್ದರು. ಇಬ್ಬರ ನಡುವೆ ಪ್ರೀತಿ ಚಿಗುರಿ ವಿವಾಹವಾಗುವ ನಿರ್ಧಾರ ಮಾಡಿದ್ದರು.ಪೃಥ್ವಿರಾಜ್‌ ಹೆತ್ತವರು ಆರಂಭದಲ್ಲಿ ನಿರಾಕರಿಸಿದರೂ ನಂತರ ಒಪ್ಪಿಗೆ ನೀಡಿದ್ದರು. ಯುವತಿ ಮೊಂತಕನ್ ಮನೆಯಲ್ಲೂ ವಿವಾಹಕ್ಕೆ ಸಮ್ಮತಿ ದೊರಕಿದ್ದು, ಜುಲೈನಲ್ಲೇ ಥಾಯ್ಲೆಂಡ್‌ನಲ್ಲಿ ಅಲ್ಲಿನ ಪದ್ಧತಿಯಂತೆ ವಿವಾಹ ನೆರವೇರಿದೆ. ಇದೀಗ ಭಾರತೀಯ ಸಂಪ್ರದಾಯದ ಪ್ರಕಾರ ಗುರುವಾರ ನಗರದ ಮಂಗಳಾದೇವಿ ದೇವಸ್ಥಾನದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.