ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಆತ್ಮಹತ್ಯೆ ಮಾಡಿಕೊಳ್ಳಲು ತುಂಬಿ ಹರಿಯುತ್ತಿದ್ದ ಕಾವೇರಿ ನದಿಗೆ ಹಾರಿದ ಯುವತಿ ಮರವೊಂದಕ್ಕೆ ಸಿಲುಕಿ ಇಡೀ ರಾತ್ರಿ ಕಳೆದು ಪವಾಡ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ಮಹದೇವಪುರ ಗ್ರಾಮದ ಬಳಿ ನಡೆದಿದೆ.ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿ ನಿವಾಸಿ ಪವಿತ್ರಾ (19) ಆತ್ಮಹತ್ಯೆ ಯತ್ನಿಸಿ ಯುವತಿ ಎಂದು ತಿಳಿದು ಬಂದಿದೆ. ಬೆಳಗಿನ ಜಾವ ಸ್ಥಳೀಯರು ನದಿ ಮಧ್ಯದಲ್ಲಿ ಸಿಲುಕಿರುವ ಯುವತಿಯನ್ನು ಗಮನಿಸಿ ಅಗ್ನಿ ಶಾಮಕ ಸಿಬ್ಬಂದಿಗೆ ದೂರವಾಣಿ ಮೂಲಕ ವಿಷಯ ಮುಟ್ಟಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ರಕ್ಷಿಸಿ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬೆಂಗಳೂರಿನಲ್ಲಿ ಕಾನೂನು ಪದವಿ ವಿದ್ಯಾರ್ಥಿನಿ ಪವಿತ್ರಾ ಗುರುವಾರ ಸಂಜೆ ತನ್ನ ಪೋಷಕರೊಂದಿಗೆ ಜಗಳವಾಡಿಕೊಂಡು ನಂತರ ಮನೆ ಬಿಟ್ಟು ಮೈಸೂರಿನ ಸಂಬಂಧಿಕರ ಮನೆಗೆ ಹೋಗುವುದಾಗಿ ತಿಳಿಸಿದ್ದಾರೆ.ನಂತರ ಶ್ರೀರಂಗಪಟ್ಟಣಕ್ಕೆ ಬಂದು ನೇರವಾಗಿ ಮಹದೇವಪುರದ ಕಾವೇರಿ ನದಿಗೆ ಅಡ್ಡಲಾಗಿರುವ ಸೇತುವೆ ಮೇಲಿಂದ ತುಂಬಿ ಹರಿಯುತ್ತಿರುವ ಕಾವೇರಿ ನದಿಗೆ ಹಾರಿದ್ದಾಳೆ ಎನ್ನಲಾಗಿದೆ. ಸುಮಾರು 5 ಕಿ.ಮೀ ದೂರ ಪ್ರವಾಹದಲ್ಲಿ ಕೊಚ್ಚಿ ಹೋದ ಪವಿತ್ರಾ ಹಂಗರಹಳ್ಳಿ ಸಮೀಪ ನದಿ ಮಧ್ಯೆ ತಿಟ್ಟಿನ ಬಳಿ ಸಿಕ್ಕ ಮರವೊಂದನ್ನು ಹಿಡಿದುಕೊಂಡು ಇಡೀ ರಾತ್ರಿ ಮರದ ಮೇಲೆ ಕುಳಿತ್ತಿದ್ದಾಳೆ. ಶುಕ್ರವಾರ ಮುಂಜಾನೆ ಕಾಪಾಡುವಂತೆ ಜೋರಾಗಿ ಸ್ಥಳೀಯರನ್ನು ಕೂಗಿದಾಗ ಸ್ಥಳೀಯರು ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅರಕೆರೆ ಠಾಣೆ ಸಬ್ ಇನ್ಸ್ ಪೆಕ್ಟರ್ ಎನ್.ವಿನೋದಕುಮಾರ್ ನೇತೃತ್ವದ ಪೊಲೀಸರ ತಂಡ ಮತ್ತು ಅಗ್ನಿಶಾಮಕ ಸಿಬ್ಬಂದಿ ಪವಿತ್ರಾರನ್ನು ರಕ್ಷಿಸಿ, ನಂತರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ ಬಳಿಕ ಪವಿತ್ರಾಳ ಪೋಷಕರಿಗೆ ಮಾಹಿತಿ ನೀಡಿದ್ದಾರೆ.
ಯುವತಿಯ ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.