ಫಿಶ್‌ ಟನಲ್‌ ಎಡವಟ್ಟಿಗೆ ಯುವತಿ ಬಲಿ

| Published : Oct 24 2024, 12:54 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಕಳೆದ ಎರಡು ತಿಂಗಳಿನಿಂದ ನಗರದ ನವಭಾಗ ರಸ್ತೆಯಲ್ಲಿ ಫಿಶ್ ಟನಲ್ ಎಕ್ಸ್‌ಪೋ ಎಂಬ ಇವೆಂಟ್ ಬೀಡು ಬಿಟ್ಟಿದೆ. ಇಲ್ಲಿ ಫಿಶ್ ಟನಲ್ ಪ್ರದರ್ಶನದ ಜೊತೆಗೆ ವಿವಿಧ ರೋಮಾಂಚನಕಾರಿ ಆಟಗಳನ್ನು ಆಡಬಹುದು. ಹೀಗೆ ಸಂತಸ ಪಡಲೆಂದು ಕುಟುಂಬಸ್ಥರೊಂದಿಗೆ ಬಂದಿದ್ದ ಯುವತಿಯೊಬ್ಬಳು ಸುನಾಮಿ ಇವೆಂಟ್ ಮೇಲಿನಿಂದ ಬಿದ್ದು ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ನಿಖಿತಾ ಸಾವನ್ನಪ್ಪಿದ್ದಾಳೆ. ಹೀಗಾಗಿ ಫಿಶ್ ಟನಲ್ ಎಕ್ಸ್‌ಪೋದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಕಳೆದ ಎರಡು ತಿಂಗಳಿನಿಂದ ನಗರದ ನವಭಾಗ ರಸ್ತೆಯಲ್ಲಿ ಫಿಶ್ ಟನಲ್ ಎಕ್ಸ್‌ಪೋ ಎಂಬ ಇವೆಂಟ್ ಬೀಡು ಬಿಟ್ಟಿದೆ. ಇಲ್ಲಿ ಫಿಶ್ ಟನಲ್ ಪ್ರದರ್ಶನದ ಜೊತೆಗೆ ವಿವಿಧ ರೋಮಾಂಚನಕಾರಿ ಆಟಗಳನ್ನು ಆಡಬಹುದು. ಹೀಗೆ ಸಂತಸ ಪಡಲೆಂದು ಕುಟುಂಬಸ್ಥರೊಂದಿಗೆ ಬಂದಿದ್ದ ಯುವತಿಯೊಬ್ಬಳು ಸುನಾಮಿ ಇವೆಂಟ್ ಮೇಲಿನಿಂದ ಬಿದ್ದು ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ನಿಖಿತಾ ಸಾವನ್ನಪ್ಪಿದ್ದಾಳೆ. ಹೀಗಾಗಿ ಫಿಶ್ ಟನಲ್ ಎಕ್ಸ್‌ಪೋದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಘಟನೆ..?:

ನಗರದಲ್ಲಿ ಫಿಶ್ ಟನಲ್ ಎಕ್ಸ್‌ಪೋಗೆ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ಶಿಕ್ಷಕ ಅರವಿಂದ ಬಿರಾದಾರ ಪತ್ನಿ ಗೀತಾ, ಪುತ್ರಿ ನಿಖಿತಾ ಹಾಗೂ ನೆರೆ ಮನೆಯ ಮಂದಿ ಜೊತೆಗೆ ಅ.20 ರಂದು ಆಗಮಿಸಿದ್ದರು. ಈ ವೇಳೆ ನಿಖಿತಾ ಹಾಗೂ ಆಕೆಯ ಇಬ್ಬರು ಗೆಳೆತಿಯರು ರೇಂಜರ್ ಸ್ವಿಂಗ್‌ನಲ್ಲಿ(ಸುನಾಮಿ ಇವೆಂಟ್) ಕುಳಿತಿದ್ದರು. ತಲೆ ಕೆಳಗಾಗಿ ತಿರುಗಿಸೋ ರೇಂಜರ್ ಸ್ವಿಂಗ್‌ನಲ್ಲಿ ಕುಳಿತು ಆಟವಾಡುವಾಗ ರೇಂಜರ್ ಸ್ವಿಂಗ್ ಆರಂಭವಾಗುತ್ತಿದ್ದಂತೆ ಎರಡ್ಮೂರು ಸುತ್ತು ತಿರುಗುವಷ್ಟರಲ್ಲಿಯೇ ನಿಖಿತಾಗೆ ಹಾಕಿದ್ದ ಸೇಫ್ಟಿ ಬೆಲ್ಟ್ ಸಡಿಲವಾಗಿದೆ. ಅಷ್ಟರಲ್ಲೇ ಸುರಕ್ಷತೆಗೆಂದು ಅಳವಡಿಸಿದ್ದ ರಾಡ್ ಕೂಡ ತುಂಡಾಗಿದ್ದರಿಂದ ಯುವತಿ ಮೇಲಿನಿಂದ ಬಿದ್ದು ತಲೆಗೆ ಹಾಗೂ ಮುಖಕ್ಕೆ ತೀವ್ರ ಪಟ್ಟುಬಿದ್ದು ಗಂಭೀರ ಗಾಯಗೊಂಡಿದ್ದಳು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅಂದೇ ರಾತ್ರಿ ನಿಖಿತಾ ಸಾವನ್ನಪ್ಪಿದ್ದಾಳೆ.

ಪಾಲಕರ ಮೊಬೈಲ್‌ನಲ್ಲಿ ಮಗಳ ಸಾವಿನ ದೃಶ್ಯ ಸೆರೆ:

ನಿಖಿತಾ ಹಾಗೂ ಆಕೆಯ ಸ್ನೇಹಿತೆಯರು ರೇಂಜರ್ ಸ್ವಿಂಗ್‌ನಲ್ಲಿ ಕುಳಿತು ಮೋಜುಮಸ್ತಿ ಮಾಡುವುದನ್ನು ಪಾಲಕರು ವಿಡಿಯೋ ಮಾಡುತ್ತಿದ್ದರು. ಈ ವೇಳೆ ಮಗಳು ಹೆದರಿ ಕಿರುಚಾಡುವುದು ಹಾಗೂ ಆಕೆಯ ತಾಯಿ ಸುನಾಮಿ ನಿಲ್ಲಸರಿ ಅಣ್ಣಾರ... ಅಣ್ಣಾರ... ನಿಲ್ಲಸರಿ... ಮಗಳು ಹೆದರಿದ್ದಾಳೆ ಎಂದು ಪರಿಪರಿಯಾಗಿ ಬೇಡಿಕೊಳ್ಳುವುದು ನಿಖಿತಾ ತಾಯಿಯ ಮೊಬೈಲ್‌ನಲ್ಲಿ ರೆಕಾರ್ಡ್ ಆಗಿದೆ.

ಕಣ್ಣೆದುರೇ ಮಗಳ ಸಾವು

ಆರಂಭದಲ್ಲಿ ಚೆನ್ನಾಗಿ ಎನಿಸಿದ ಸುನಾಮಿ ಎಂಬ ರೋಮಾಂಚನಕಾರಿ ಆಟದಲ್ಲಿ ಮಗಳು ಹೆದರಿರುವುದನ್ನು ಕಂಡು ಪಾಲಕರು ಗಾಬರಿಗೊಳಗಾಗಿದ್ದರು. ಆಗಸದಲ್ಲಿ ತಲೆಕೆಳಗಾಗಿ ಹಾರಾಟ ಮಾಡುತ್ತಿದ್ದ ಸುನಾಮಿ ಇವೆಂಟ್ ತಕ್ಷಣವೇ ನಿಲ್ಲಿಸಿ ಎಂದರೂ ಆಪರೇಟರ್ ಕೇಳದ ಹಿನ್ನೆಲೆ ಮಗಳು ಮೇಲಿನಿಂದ ಬಿದ್ದಿದ್ದಾಳೆ. ತಮ್ಮ ಕಣ್ಣಮುಂದೆಯೇ ಮೇಲಿಂದ ಮಗಳು ಬಿದ್ದು ಪ್ರಾಣಬಿಟ್ಟಿದ್ದನ್ನು ಕಂಡು ಹೆತ್ತ ಜೀವಗಳು ಕಣ್ಣೀರಿಡುತ್ತಿವೆ.

ಫಿಶ್ ಟನಲ್ ಎಕ್ಸ್‌ಪೋನಲ್ಲಿ ಯಾವುದೇ ಸುರಕ್ಷತಾ ಕ್ರಮಗಳಿಲ್ಲ. ಫಿಶ್ ಟನಲ್ ಎಕ್ಸ್‌ಪೋದ ರೇಂಜರ್ ಸ್ವಿಂಗ್ ಯಂತ್ರದ ಸೇಫ್ಟಿ ಬೆಲ್ಟ್ ಗಳು ಹಾಳಾಗಿವೆ. ಅವುಗಳನ್ನೇ ಉಪಯೋಗಿಸಲಾಗುತ್ತಿದ್ದು, ಇದಕ್ಕೆಲ್ಲ ಮ್ಯಾನೇಜಮೆಂಟ್ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ.

ಕೇರಳ ಮೂಲದ ರಮೇಶಬಾಬು ಫಿಶ್ ಟನಲ್ ಎಕ್ಸ್‌ಪೋಗೆ ಸಂಬಂಧಿಸಿದ ಕಚೇರಿಯನ್ನು ಬೆಂಗಳೂರಿನಲ್ಲಿ ಹೊಂದಿದ್ದಾರೆ. ಲೋಕೋಪಯೋಗಿ ಇಲಾಖೆ, ವಿದ್ಯುತ್ ಇಲಾಖೆ, ಮಹಾನಗರ ಪಾಲಿಕೆ, ಕಂದಾಯ ಇಲಾಖೆ ಸೇರಿದಂತೆ ಎಲ್ಲಿಯೂ ಫಿಶ್ ಟನಲ್ ಎಕ್ಸ್‌ಪೋ ಸಂಬಂಧಿಸಿದ ಇಲಾಖೆಗಳಿಂದ ಪೂರ್ವಾನುಮತಿ ಪಡೆದ ಮಾಹಿತಿ ಇದ್ದಂತಿಲ್ಲ. ಪೊಲೀಸ್ ಇಲಾಖೆ ಸೇರಿದಂತೆ ಇತರೇ ಇಲಾಖೆಗಳಿಂದ ಎನ್‌ಒಸಿ ಪಡೆಯಲಾಗಿದೆಯಾ ಎಂಬುದನ್ನು ಪರಿಶೀಲನೆ ನಡೆಸಲಾಗುತ್ತಿದೆ.

ಇಬ್ಬರ ಬಂಧನ:

ಸುನಾಮಿ ಇವೆಂಟ್ (ರೇಂಜರ್ ಸ್ವಿಂಗ್) ಆಪರೇಟರ್ ರಮೇಶರಾಯ್ ಹಾಗೂ ಇವೆಂಟ್ ಮ್ಯಾನೇಜರ್ ರಮೇಶಬಾಬು ಎಂಬುವವರನ್ನು ಬಂಧಿಸಲಾಗಿದೆ. ನಿತ್ಯ ನೂರಾರು ಜನರು ಆಟವಾಡುವ ಸ್ಥಳದಲ್ಲಿ ₹ 80ರಿಂದ ₹ 150 ವರೆಗೂ ಟಿಕೆಟ್ ದರ ಪಡೆಯುತ್ತಿದ್ದ ಆಯೋಜಕರು ಸರಿಯಾದ ನಿರ್ವಹಣೆ ಮಾಡದ ಹಿನ್ನೆಲೆ ಯುವತಿಯೊಬ್ಬಳು ಪ್ರಾಣ ಕಳೆದುಕೊಂಡಿದ್ದಾಳೆ. ಇದ್ದ ಒಬ್ಬಳೇ ಮಗಳನ್ನು ಕಳೆದುಕೊಂಡ ನಿಖಿತಾ ತಂದೆ-ತಾಯಿ ಕಣ್ಣೀರಿಡುತ್ತಿದ್ದಾರೆ.

------------ಕೋಟ್‌.....

ಸುನಾಮಿ ಇವೆಂಟ್‌ನಲ್ಲಿ ನಮ್ಮ ಮಗಳು ಸೇರಿ ಮೂವರು ಕುಳಿತಿದ್ದರು. ಸುನಾಮಿ ಎರಡನೇ ಸುತ್ತು ತಿರುಗುವಾಗಲೇ ಆಕೆಯ ರಕ್ಷಣೆಗೆ ಅಳವಡಿಸಿದ್ದ ರಾಡ್ ತುಂಡಾಗಿ ನಮ್ಮ ಮಗಳು ಮೇಲಿಂದ ತಲೆಕೆಳಗಾಗಿ ಬಿದ್ದಳು. ಈ ವೇಳೆ ಆಕೆಯ ಮುಖಕ್ಕೆ ತೀವ್ರವಾದ ಪೆಟ್ಟು ಬಿದ್ದಿದ್ದರಿಂದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ನಮ್ಮ ಮಗಳಿಗೆ ಆದಂತೆ ಯಾರಿಗೂ ಆಗಬಾರರು. ಬೇಜವಾಬ್ದಾರಿ ತೋರಿದ ಆಯೋಜಕರ ಮೇಲೆ ಸೂಕ್ತ ಕ್ರಮ ಆಗಬೇಕು.

ಅರವಿಂದ ಬಿರಾದಾರ, ಮೃತ ಯುವತಿ ತಂದೆ

-------------ಫಿಶ್ ಟನಲ್ ಇವೆಂಟ್‌ನಲ್ಲಿ ಮೋಜುಮಸ್ತಿ ಮಾಡುವಾಗ ಮೇಲಿನಿಂದ ಬಿದ್ದು ಯುವತಿ ಸಾವನ್ನಪ್ಪಿದ್ದು, ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಗಾಂಧಿಚೌಕ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಫಿಶ್ ಟನಲ್ ಬಂದ್‌ ಮಾಡಿಸಲಾಗಿದೆ. ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಅವಘಡಕ್ಕೆ ಕಾರಣ ಹಾಗೂ ಫಿಶ್ ಟನಲ್ ಅಳವಡಿಕೆಗೆ ಸಂಬಂಧಿತ ಇಲಾಖೆಗಳಿಂದ ಅನುಮತಿ ಪಡೆಯಲಾಗಿದೆಯಾ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ.

ಶಂಕರ ಮಾರಿಹಾಳ, ಹೆಚ್ಚುವರಿ ಎಸ್ಪಿ