ಚಿತ್ರದುರ್ಗ: ಗ್ಯಾಸ್ ಬಳಕೆಯ ಆಧಾರ್ ಬಯೋಮೆಟ್ರಿಕ್‌ಗೆ ನೂಕು ನುಗ್ಗಲು

| Published : Dec 27 2023, 01:31 AM IST

ಚಿತ್ರದುರ್ಗ: ಗ್ಯಾಸ್ ಬಳಕೆಯ ಆಧಾರ್ ಬಯೋಮೆಟ್ರಿಕ್‌ಗೆ ನೂಕು ನುಗ್ಗಲು
Share this Article
  • FB
  • TW
  • Linkdin
  • Email

ಸಾರಾಂಶ

ಕೂಲಿ ಬಿಟ್ಟು ಗ್ಯಾಸ್ ವಿತರಕರ ಅಂಗಡಿ ಮುಂದೆ ಸರತಿಯಲ್ಲಿ ನಿಂತ ಮಹಿಳೆಯರು, ಮುಂಜಾನೆ ಐದಕ್ಕೆ ಜಮಾವಣೆ. ತಪ್ಪು ಮಾಹಿತಿ ಕಾರಣಕ್ಕೆ ಮಹಿಳೆಯರಿಗೆ ದಿನವಿಡೀ ಶಿಕ್ಷೆ. ಚಿತ್ರದುರ್ಗದ ಮಾರುತಿ ಗ್ಯಾಸ್ ಡಿಸ್ಟ್ರಿಬ್ಯೂಟರ್ ಅಂಗಡಿ ಮುಂಭಾಗ ಸರತಿಯಲ್ಲಿ ನಿಂತ ಮಹಿಳೆಯರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಅಡುಗೆ ಅನಿಲ ಸಂಪರ್ಕ ಹೊಂದಿರುವ ಗ್ರಾಹಕರು ಗ್ಯಾಸ್ ಬಳಕೆಗೆ ಆಧಾರ್ ಬಯೋ ಮೆಟ್ರಿಕ್ ಮಾಡಿಸುವುದು ಕಡ್ಡಾಯವೆಂಬ ಅನಿಲ ಕಂಪನಿಗಳ ಸುತ್ತೋಲೆಯೊಂದು ಮಹಿಳೆಯರ ನಿದ್ದೆಗೆಡಿಸಿದ್ದು, ಗ್ಯಾಸ್ ವಿತರಕರ ಅಂಗಡಿ ಮುಂಭಾಗ ದಿನವಿಡೀ ಸರತಿಯಲ್ಲಿ ನಿಲ್ಲಬೇಕಾದ ಶಿಕ್ಷೆ ಒದಗಿದೆ. ಕಳೆದ ನಾಲ್ಕು ದಿನಗಳಿಂದ ಚಿತ್ರದುರ್ಗದ ಮಾರುತಿ ಗ್ಯಾಸ್ ಡಿಸ್ಟ್ರಿಬ್ಯೂಟರ್ ಅಂಗಡಿ ಮುಂಭಾಗ ಮಹಿಳೆಯರು ಸರತಿಯಲ್ಲಿ ನಿಂತಿದ್ದು, ಮಂಗಳವಾರ ಸಂಖ್ಯೆ ಸಾವಿರ ದಾಟಿತ್ತು. ಕ್ರಿಸ್ ಮಸ್ ಕಾರಣಕ್ಕೆ ಸೋಮವಾರ ರಜೆ ಇತ್ತು. ಹಾಗಾಗಿ ಮಂಗಳವಾರ ಮುಂಜಾನೆ ಐದು ಗಂಟೆಗೆ ಧಾವಿಸಿ ಬಂದಿದ್ದ ಮಹಿಳೆಯರು ಅಂಗಡಿ ಬಾಗಿಲು ತೆಗೆಯುವ ಮುನ್ನವೇ ತಮ್ಮ ಸರತಿ ಆರಂಭಿಸಿದ್ದರು. ಮಧ್ಯಾಹ್ನವಾದಂತೆ ನೂಕು ನುಗ್ಗಲು ಉಂಟಾಗಿತ್ತು. ವಿಪಿ ಬಡಾವಣೆಗೆ ಹೋಗುವ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.

ಏನಿದು ಸುತ್ತೋಲೆ: ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ತನ್ನ ವಿತರಕರಿಗೆ ಕಳೆದ ತಿಂಗಳು ನ. 17 ರಂದು ಸುತ್ತೋಲೆಯೊಂದನ್ನು ಕಳಿಸಿ, ಅಡುಗೆ ಅನಿಲ ಸಂಪರ್ಕ ಪಡೆದ ಎಲ್ಲ ಗ್ರಾಹಕರು ಹಾಗೂ ಉಜ್ವಲ ಯೋಜನೆ ಫಲಾನುಭವಿಗಳು ಆಧಾರ್ ಬಯೋ ಮೆಟ್ರಿಕ್ ಮಾಡಿಸುವುದು ಕಡ್ಡಾಯ. ಇನ್ನು ಮೇಲೆ ಗ್ಯಾಸ್ ಪೂರೈಕೆ ಮಾಡುವಾಗ ಬಯೋಮೆಟ್ರಿಕ್ ಮಾಡಲಾಗಿದೆಯೇ ಎಂಬುದ ಖಚಿತಪಡಿಸಿಕೊಳ್ಳಬೇಕು. ಈ ಬಗ್ಗೆ ವ್ಯಾಪಕ ಪ್ರಚುರ ಪಡಿಸಿ ತಮ್ಮ ವಿತರಣೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಹಕರ ಬಯೋಮೆಟ್ರಿಕ್ ಪಡೆಯುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಆದರೆ ಇದಕ್ಕೆ ಯಾವುದೇ ಗಡವು ವಿಧಿಸಿರಲಿಲ್ಲ. ಅನಿಲ ವಿತರಕರೂ ಕೂಡಾ ಈ ಸಂಬಂಧ ಸ್ಪಷ್ಟತೆ ಹೊಂದಿರಲಿಲ್ಲ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ಕೂಡಾ ಮೌನವಾಗಿದ್ದರು.

ಹರಿದಾಡಿದ ಗಾಳಿಸುದ್ದಿ: ಏತನ್ಮಧ್ಯೆ ಪ್ರಧಾನಿ ಮೋದಿ ಅವರು ಉಜ್ವಲ್ ಗ್ಯಾಸ್ ಯೋಜನೆಯಡಿ ಸೌಲಭ್ಯ ಪಡೆದವರಿಗೆ ಪ್ರತಿ ತಿಂಗಳು ಐದು ನೂರು ರುಪಾಯಿ ಸಹಾಯಧನ ನೀಡುತ್ತಾರೆ. ಡಿ.31ರ ಒಳಗೆ ಎಲ್ಲರೂ ಗ್ಯಾಸ್ ಸಂಪರ್ಕಕ್ಕೆ ಆಧಾರ್ ನಂಬರ್ ಜೋಡಣೆ ಮಾಡಬೇಕೆಂಬ ಸುದ್ದಿಗಳು ಹರಿದಾಡಿದವು. ಇದನ್ನು ಯಾರು ಹರಿಯಬಿಟ್ಟರೋ ಗೊತ್ತಿಲ್ಲ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಗುಂಗಿನಲ್ಲಿದ್ದ ಮಹಿಳೆಯರು ಐದು ನೂರು ರುಪಾಯಿ ಗ್ಯಾಸ್ ಸಬ್ಸಿಡಿ ಯಾಕೆ ಕಳೆದುಕೊಳ್ಳಬೇಕೆಂದು ಧಾವಿಸಿ ಬಂದಿದ್ದರು. ಚಿತ್ರದುರ್ಗದ ಬಹುತೇಕ ಸ್ಲಂಗಳಲ್ಲಿರುವ ಮಹಿಳೆಯರು ಉಜ್ವಲ ಯೋಜನೆಯಡಿ ಸಂಪರ್ಕ ಪಡೆದಿದ್ದು, ಸೌಲಭ್ಯ ಕೈ ಜಾರಿತೆಂಬ ಕಾರಣಕ್ಕೆ ಮುಂಜಾನೆ ಐದು ಗಂಟೆಗೆ ಮನೆ ತೊರೆದಿದ್ದರು. ಊಟ, ನಿದ್ರೆ ಒದ್ದು ಬಂದಿದ್ದರು. ಜನ ಮರುಳೋ, ಜಾತ್ರೆ ಮರಳೋ ಎಂಬಂತಾಗಿತ್ತು ಪರಿಸ್ಥಿತಿ.

ಬಯೋ ಮೆಟ್ರಿಕ್ ಮಾಡಿಸುವ ವಿಧಾನದ ಬಗ್ಗೆ ಪೆಟ್ರೋಲಿಯಂ ಕಂಪನಿ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು. ಆಧುನಿಕ ಸಂದರ್ಭದ ಈ ವೇಳೆ ಬಯೋ ಮೆಟ್ರಿಕ್ ಮಾಡಿಸುವುದು ಸುಲಭ. ಗ್ಯಾಸ್ ವಿತರಣೆ ಮಾಡಲು ಮನೆಗಳಿಗೆ ಹೋಗುವ ಹುಡುಗರು ಸ್ಥಳದಲ್ಲಿಯೇ ಆಧಾರ್ ಕಾರ್ಡ್ ಪಡೆದು ಇಕೆವೈಸಿ ಮಾಡಿಸಬಹುದು. ಇದಕ್ಕಾಗಿ ಮಹಿಳೆಯರು ತಮ್ಮ ಕೆಲಸಗಳ ಬಿಟ್ಟು ಬಂದು ಸರತಿಯಲ್ಲಿ ನಿಲ್ಲುವುದು ಸೂಕ್ತವಲ್ಲ.

- ದಿವ್ಯಾಪ್ರಭು ಜಿಲ್ಲಾಧಿಕಾರಿ. ಚಿತ್ರದುರ್ಗ

ಗ್ಯಾಸ್ ಸಂಪರ್ಕ ಹೊಂದಿರುವರರು ಆಧಾರ ಬಯೋಮೆಟ್ರಿಕ್ ನೀಡಲು ಯಾವುದೇ ಗಡವು ಅಥವಾ ಕೊನೆಯ ದಿನವನ್ನು ಕೇಂದ್ರ ಸರ್ಕಾರ ನೀಡಿಲ್ಲ. ಸಾರ್ವಜನಿಕರು ತಮ್ಮ ಬಿಡುವಿನ ವೇಳೆಯಲ್ಲಿ ತೆರಳಿ ಆಧಾರ ಬಯೋಮೆಟ್ರಿಕ್ ನೀಡಬಹುದಾಗಿದೆ. ಅನಾವಶ್ಯಕವಾಗಿ ಗೊಂದಲ ಹಾಗೂ ತಪ್ಪು ಮಾಹಿತಿಗೆ ಸಿಲುಕಿ ಗ್ಯಾಸ್ ಏಜೆನ್ಸಿಗಳ ಬಳೆ ಮುಂಜಾನೆಯಿಂದ ಸರತಿ ಸಾಲಿನಲ್ಲಿ ನಿಲ್ಲುವುದು ಬೇಡ.

- ಮಧು ಸೂಧನ್ ಜಂಟಿ ನಿರ್ದೇಶಕ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ