ಸಾರಾಂಶ
ಯಲ್ಲಾಪುರ: ನಾಗರಿಕರಿಗೆ ಗುರುತಿನ ದಾಖಲೆಯಾದ ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿಗಾಗಿ ಸಾರ್ವಜನಿಕರು ಪರದಾಡುತ್ತಿದ್ದಾರೆ. ಪಟ್ಟಣದಲ್ಲಿನ ಅಂಚೆ ಹಾಗೂ ತಹಸೀಲ್ದಾರ್ ಕಚೇರಿಯಲ್ಲಿನ ಆಧಾರ್ ಸೇವೆ ಸ್ಥಗಿತಗೊಂಡಿರುವುದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ.
ಎಸ್ಎಸ್ಎಲ್‌ಸಿ ಪರೀಕ್ಷೆ ಮತ್ತು ದಾಖಲಾತಿಗೆ ಆಧಾರ್ ಕಾರ್ಡ್ ಪ್ರಮುಖವಾಗಿದ್ದು, ಆಧಾರ್ ಕಾರ್ಡಿನಲ್ಲಿರುವಂತೆ ಎಲ್ಲ ದಾಖಲಾತಿಗಳನ್ನು ಭರ್ತಿ ಮಾಡಬೇಕಾಗಿದೆ. ಅಂದು ಆಪರೇಟರ್‌ಗಳು ಮಾಡಿರುವ ತಪ್ಪಿನಿಂದಾಗಿ ಅಥವಾ ಪಾಲಕರು ನೀಡಿರುವ ತಪ್ಪು ಮಾಹಿತಿಯಿಂದಾಗಿ ಆಧಾರ್ ಕಾರ್ಡ್‌ಗಳಲ್ಲಿ ವ್ಯಕ್ತಿಯ, ವಿದ್ಯಾರ್ಥಿಯ ತಪ್ಪು ಹೆಸರು, ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ, ವಿಳಾಸ, ಅಡ್ಡ ಹೆಸರು ಮುಂತಾದ ಅನೇಕ ದೋಷಗಳು ಕಾರ್ಡಿನಲ್ಲಿ ಕಂಡುಬರುತ್ತವೆ. ಇದನ್ನು ಎಸ್ಎಸ್ಎಲ್‌ಸಿಯಲ್ಲಿಯೇ ಸರಿ ಮಾಡಿದರೆ ಮಾತ್ರ ಮುಂದಿನ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ಅನವಶ್ಯಕವಾಗಿ ಇಲಾಖೆಯಿಂದ ಇಲಾಖೆಗೆ ಅಲೆಯುವ ದುಸ್ಥಿತಿ ಬರುತ್ತದೆ.ಯಲ್ಲಾಪುರದ ಅಂಚೆ ಕಚೇರಿಯಲ್ಲಿ ಸರ್ಕಾರದ ವತಿಯಿಂದ ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿ ವ್ಯವಸ್ಥೆ ಕೆಲವು ದಿನಗಳ ಹಿಂದಿತ್ತು. ಆದರೆ ಇದೀಗ ಅಲ್ಲಿನ ಯಂತ್ರೋಪಕರಣಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಸಬೂಬು ಹೇಳಿ, ಅದನ್ನು ಸ್ಥಗಿತಗೊಳಿಸಲಾಗಿದೆ. ಹಳೆಯ ತಹಸೀಲ್ದಾರ್ ಕಚೇರಿಯಲ್ಲಿಯೂ ಆಧಾರ್ ಕಾರ್ಡ್ ನವೀಕರಣ ಮತ್ತು ಹೊಸ ಆಧಾರ್ ನೋಂದಣಿ ಮಾಡುವ ವ್ಯವಸ್ಥೆ ಇತ್ತಾದರೂ, ಅದೀಗ ನಿಂತಿದೆ. ಸ್ವತಃ ಆಧಾರ್ ನಿರ್ದಿಷ್ಟ ಪಡಿಸಿದ್ದ ಶುಲ್ಕ ತುಂಬಿ ಆನ್‌ಲೈನ್‌ನಲ್ಲಿ ತಿದ್ದುಪಡಿ ಮಾಡಿಕೊಳ್ಳುವ ಅವಕಾಶ ನೀಡಲಾಗಿತ್ತು. ಆದರೆ, ಅದನ್ನು ಕೂಡ ಈಗ ನಿಲ್ಲಿಸಲಾಗಿದೆ. ಆದ್ದರಿಂದ ತಿದ್ದುಪಡಿ ಮಾಡಿಕೊಳ್ಳಬೇಕಾಗಿದ್ದ ಜನ ಬಹಳಷ್ಟು ತೊಂದರೆ ಅನುಭವಿಸುವಂತಾಗಿದೆ.
ಕೆಲವರು ಹುಬ್ಬಳ್ಳಿಯಲ್ಲಿ ಇನ್ನೂ ಕೆಲ ಜನ ಮುಂಡಗೋಡಿನಲ್ಲಿ, ಶಿರಸಿಯಲ್ಲಿ, ಆಗಾಗ ತಾಲೂಕಿನ ಮಂಚಿಕೇರಿಯಲ್ಲಿ ನವೀಕರಣ ಹಾಗೂ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಸ್ಪಷ್ಟತೆಯೇ ಕಂಡುಬರುತ್ತಿಲ್ಲ.ಯಲ್ಲಾಪುರ ತಾಲೂಕಿನ ಅನೇಕ ನಾಗರಿಕರು ತಮ್ಮ ಆಧಾರ್ ಕಾರ್ಡ್ ನವೀಕರಿಸಲು ಪ್ರಯತ್ನಿಸುತ್ತಿದ್ದಾರಾದರೂ, ತಾಂತ್ರಿಕ ಸಮಸ್ಯೆಗಳಿಂದ ಈ ಪ್ರಕ್ರಿಯೆ ಹಾಳಾಗಿದೆ. ಸರ್ವರ್ ಸಮಸ್ಯೆ, ಸಿಬ್ಬಂದಿಯ ಅಲಭ್ಯತೆ ಸೇರಿ ಇನ್ನಿತರ ಸಮಸ್ಯೆಗಳಿಂದ ಜನರನ್ನು ವಾಪಸ್ ಕಳಿಸಲಾಗುತ್ತಿದೆ.
ಹೊಸ ನೋಂದಣಿಗೂ ಇದೇ ರೀತಿಯ ಸಮಸ್ಯೆಯಾಗುತ್ತಿದೆ. ಪ್ರಕ್ರಿಯೆ ನಿಧಾನವಾಗಿರುವುದರಿಂದ ಮತ್ತು ಸಣ್ಣ ತಪ್ಪುಗಳಿಂದಾಗಿ ಅಗತ್ಯ ದಾಖಲೆಗಳನ್ನು ತಿರಸ್ಕರಿಸುವುದರಿಂದ ನಾಗರಿಕರು ಆಧಾರ್ ನೋಂದಣಿ ಸವಾಲಾಗಿದೆ. ಹೀಗಾಗಿ ನಾಗರಿಕರು ಹತ್ತಿರದ ಪಟ್ಟಣಗಳಿಂದ ದೂರದ ನಗರಗಳಿಗೆ ತೆರಳಿ ಆಧಾರ್ ಮಾಡಿಸಿಕೊಳ್ಳಬೇಕಾಗಿದೆ.ಶಾಲೆ ದಾಖಲಾತಿಗೆ, ಸರ್ಕಾರದ ವಿವಿಧ ಯೋಜನೆಗಳಿಗಾಗಿ, ಸಬ್ಸಿಡಿ ಮತ್ತು ಸೇವೆಗಳನ್ನು ಪಡೆಯಲು ಆಧಾರ್ ಅತ್ಯಗತ್ಯ ದಾಖಲೆಯಾಗಿದೆ. ನವೀಕರಣ ಮತ್ತು ನೋಂದಣಿ ಸಮಸ್ಯೆ ಯಲ್ಲಾಪುರ ತಾಲೂಕಿನ ನಾಗರಿಕರನ್ನು ಅಸಹಾಯಕರನ್ನಾಗಿ ಮಾಡಿದ್ದು, ಅವರು ಪ್ರಯೋಜನಗಳನ್ನು ಪಡೆಯಲು ಹೆಣಗಾಡುತ್ತಿದ್ದಾರೆ.
ಈ ಸಮಸ್ಯೆ ಪರಿಹರಿಸಲು ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕಿದೆ. ಮೀಸಲಾದ ಆಧಾರ್ ಕೇಂದ್ರಗಳನ್ನು ಸ್ಥಾಪಿಸುವುದು, ಆನ್‌ಲೈನ್ ಪೋರ್ಟಲ್‌ನ ಮೂಲ ಸೌಕರ್ಯಗಳನ್ನು ಸುಧಾರಿಸುವುದು ಮತ್ತು ಸಿಬ್ಬಂದಿಯನ್ನು ಹೆಚ್ಚಿಸುವುದು, ತಾಲೂಕಿನ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಬೇಕಿದೆ.;Resize=(128,128))
;Resize=(128,128))