ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಪಹಣಿಗೆ ಆಧಾರ್ ಲಿಂಕ್ ಮಾಡುವಲ್ಲಿ ದಾವಣಗೆರೆ ಜಿಲ್ಲೆಯು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದು, ಇಂಥಹ ಸಾಧನೆಗಾಗಿ ರೈತರಿಗೆ ಅಭಿನಂದಿಸುವುದಾಗಿ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಹೇಳಿದ್ದಾರೆ.ನಗರದ ಎಸ್‌ಡಿಪಿಐ ಜಿಲ್ಲಾ ಕಚೇರಿಯಲ್ಲಿ ಗುರುವಾರ ಪಕ್ಷದ ಜಿಲ್ಲಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಪಹಣಿಗೆ ಆಧಾರ್ ಲಿಂಕ್ ಮಾಡಿಸುವಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದು, ಮಾದರಿಯಾದ ದಾವಣಗೆರೆ ರೈತರನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಅಭಿನಂದಿಸುತ್ತದೆ ಎಂದರು.
ಕೃಷಿ ಭೂಮಿ ಅಕ್ರಮ ನೋಂದಣಿ ತಪ್ಪಿಸುವ ಮತ್ತು ಮತ್ತು ರೈತರ ಭೂಮಿಗೆ ಸುರಕ್ಷತೆ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಆರಂಭಿಸಿದ ಪಹಣಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆಯಲ್ಲಿ ಇಲ್ಲಿನ ರೈತರ ಸ್ಪಂದನೆ ಮಾದರಿಯಾಗಿದೆ. ರಾಜ್ಯದಲ್ಲಿ ರೈತರ ಬಗ್ಗೆ ನಿಖರ ಅಂಕಿ ಅಂಶ ಇರಲಿಲ್ಲ. ಹಾಗಾಗಿ ಸಣ್ಣ, ಅತಿ ಸಣ್ಣ ರೈತರು ಎಷ್ಟು ಮಂದಿ ಇದ್ದಾರೆಂಬ, ಸರ್ಕಾರದ ಸೌಲಭ್ಯ ಪಡೆಯಲು ಅರ್ಹರೆಷ್ಟು ಎಂಬ ಬಗ್ಗೆ ಕರಾರುವಕ್ಕಾದ ಮಾಹಿತಿ ಸಂಗ್ರಹಿಸಲು ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.ಒಬ್ಬನೇ ರೈತರ ಬೇರೆ ಬೇರೆ ಸರ್ವೇ ನಂಬರ್‌ಗಳಲ್ಲಿ ಭೂಮಿ ಹೊಂದಿದ್ದರೆ, ಆಧಾರ್ ಜೋಡಣೆಯಿಂದ ಎಲ್ಲಾ ಮಾಹಿತಿ ಒಂದೇ ಗುಚ್ಛದಲ್ಲಿ ಸಿಗಲಿದೆ. ಇದರಿಂದ ಎರಡು ಹೇಕ್ಟೆರ್‌ಗಿಂತ ಕಡಿಮೆ ಭೂಮಿ ಹೊಂದಿರುವ ಸಣ್ಣ, ಅತಿ ಸಣ್ಣ ರೈತರು ಹಾಗೂ ಅದಕ್ಕಿಂತ ಹೆಚ್ಚು ಭೂಮಿ ಹೊಂದಿರುವ ದೊಡ್ಡ ರೈತರ ಮಾಹಿತಿ ದಾಖಲಿಸುವ ಜೊತೆಗೆ ಭೂ ಸಂಬಂಧಿಸಿದ ವಂಚನೆಗೆ ತಡೆಗೆ ಅನುಕೂಲವೂ ಆಗಲಿದೆ ಎಂದು ಹೇಳಿದರು.
ರಾಜ್ಯಾದ್ಯಂತ ಸುಮಾರು 4.03 ಕೋಟಿ ಪಹಣಿ ಇದ್ದು, ಈ ಪೈಕಿ 1.16 ಕೋಟಿ ಪಹಣಿಗಷ್ಟೇ ಆಧಾರ್ ಲಿಂಕ್ ಆಗಿದೆ. ಒಟ್ಟಾರೆ, ರಾಜ್ಯದ ಪ್ರಗತಿ ಶೇ.41.94 ಇದೆ. ಇದರಲ್ಲಿ ದಾವಣಗೆರೆ ಜಿಲ್ಲೆಯಲ್ಲೇ ಶೇ.70 ಪಹಣಿ ಆದಾರ್ ಲಿಂಕ್ ಆಗಿವೆ. ಜಿಲ್ಲೆಯ 8.27 ಲಕ್ಷ ಪಹಣಿಗಳಲ್ಲಿ 4.54 ಪಹಣಿಗೆ ಆಧಾರ್ ಜೋಡಣೆಯಾಗಿವೆ. ಉಳಿದಂತೆ ಶೇ.69.66 ಸಾಧನೆ ಮಾಡಿದ ಕೋಲಾರ, ಶೇ.69.47ಗುರಿ ಸಾಧಿಸಿದ ಬಳ್ಳಾರಿ ಕ್ರಮವಾಗಿ 2, 3ನೇ ಸ್ಥಾನದಲ್ಲಿವೆ ಎಂದು ಮಾಹಿತಿ ನೀಡಿದರು.ಪಕ್ಷದ ಜಿಲ್ಲಾಧ್ಯಕ್ಷ ಯಾಹಿಯಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮೋಹಸಿನ್, ಫಯಾಜ್ ಅಹಮದ್, ಖಜಾಂಜಿ ಎ.ಆರ್.ತಾಹಿರ್, ಕಾರ್ಯದರ್ಶಿ ಮೊಹಮ್ಮದ್ ಅಜರುದ್ದೀನ್ ಬಾತಿ, ಜಿಲ್ಲಾ ಸಮಿತಿ ಸದಸ್ಯರಾದ ಫರೀದ್ ಖಾನ್, ಇಸ್ಮಾಯಿಲ್ ಜಬೀವುಲ್ಲಾ, ಹರಿಹರ ಅಧ್ಯಕ್ಷ ಸಮೀವುಲ್ಲಾ ಮುಲ್ಲಾ, ಜಿಲ್ಲಾ ಸದಸ್ಯರು ಇದ್ದರು.