ಸಾರಾಂಶ
ಮುದಗಲ್: ಪಟ್ಟಣದ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಶಾಖಾ ಕಚೇರಿಯಲ್ಲಿ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ವಿಷ್ಣು ಅಧ್ಯಕ್ಷತೆಯಲ್ಲಿ ವಿದ್ಯುತ್ ಸರಬರಾಜು ಗ್ರಾಹಕರ ಸಂವಾದ ಸಭೆ ಜರುಗಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ವಿಷ್ಣು, ವಿದ್ಯುತ್ ಗ್ರಾಹಕರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರಮಾಡಲು ಸಭೆ ಆಯೋಜಿಸಲಾಗಿದೆ. ಇದಕ್ಕೂ ಮೊದಲಿಗೆ ರೈತರೆಲ್ಲರೂ ಕೊಳವೆ, ತೆರೆದ ಬಾವಿಗೆ ಅಳವಡಿಸಿರುವ ಪಂಪ್‌ಸೆಟ್‌ಗೆ ಆಧಾರ್ ಲಿಂಕ್ ಕಡ್ಡಾಯವಾಗಿದೆ.
ಪಂಪ್‌ಸೆಟ್ ಜೆಸ್ಕಾಂನಲ್ಲಿ ನೋಂದಣಿ ಆಗಿಲ್ಲವಾದರೆ ಅಂಥಹ ರೈತರು ನೋಂದಣಿ ಮಾಡಿಸಿ ಇಲಾಖೆಯಿಂದ ಸಿಗುವ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವ ಮಾಹಿತಿ ನೀಡಿದರು. ಪಟ್ಟಣ ಸೇರಿ ವಿವಿಧ ಗ್ರಾಮೀಣ ಭಾಗದ ವಿದ್ಯುತ್ ಸರಬರಾಜು ಕುಂದುಕೊರತೆಗಳನ್ನು ಆಲಿಸಲಾಯಿತು. ಪಟ್ಟಣದ ವಿವಿಧ ವಾರ್ಡ್‌ನ ವಿದ್ಯುತ್ ಸಮಸ್ಯೆ, ಕಂಬ, ವಿದ್ಯುತ್ ತಂತಿ ಬಗ್ಗೆ ದೂರು, ಆಗಾಗ ವಿದ್ಯುತ್ ನಿಲುಗಡೆ ಬಗ್ಗೆ ಸಭೆಯಲ್ಲಿದ್ದ ಅಧಿಕಾರಿಗಳನ್ನು ಗ್ರಾಹಕರು ತರಾಟೆಗೆ ತಗೆದುಕೊಂಡ ಪ್ರಸಂಗ ಜರುಗಿತು. ಗ್ರಾಮೀಣ ಭಾಗದ ಗ್ರಾಹಕರು ತಮ್ಮ ದೂರು ಸಲ್ಲಿಸಿದರು.
ಸೆಕ್ಷನ್ ಅಧಿಕಾರಿ ಶರಣಪ್ಪ.ಟಿ, ಎಇಇ ಬನ್ನೆಪ್ಪ ಕರಿಬತನಾಳ, ಸೇರಿ ವಿವಿಧ ಗ್ರಾಮೀಣ ಭಾಗದ ಗ್ರಾಹಕರು ಹಾಗೂ ಜೆಸ್ಕಾಂ ಸಿಬ್ಬಂದಿ ಇದ್ದರು.