ಸಾರಾಂಶ
ಕನಕಪುರ: ಇತ್ತೀಚಿನ ದಿನಗಳಲ್ಲಿ ರೈತರ ಜಮೀನಿನ ಪಂಪ್ ಸೆಟ್‌ಗಳಿಗೆ ಬೆಸ್ಕಾಂ ಇಲಾಖೆ ಆಧಾರ್ ಲಿಂಕ್ ಮಾಡುತ್ತಿರುವುದನ್ನು ವಿರೋಧಿಸಿ ತಾಲೂಕು ರೈತ ಸಂಘ ಸೋಮವಾರ ನಗರದ ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ತಾಲೂಕು ರೈತ ಸಂಘದ ಅಧ್ಯಕ್ಷ ಉಯಂಬಳ್ಳಿ ಸತೀಶ್ ಹಾಗೂ ರೈತ ಮುಖಂಡ ಸಂಪತ್ ಕುಮಾರ್ ಮಾತನಾಡಿ, ರೈತರಿಗೆ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತರಿಂದ ವಿದ್ಯುತ್ ಬಿಲ್ ಪಡೆಯಲು ವಾಮಮಾರ್ಗ ಅನುಸರಿಸಿ ರೈತರ ಪಂಪ್ ಸೆಟ್‌ಗಳಿಗೆ ಆಧಾರ್ ಲಿಂಕ್ ಮಾಡುತ್ತಿದೆ. ಹಿಂಬಾಗಿಲಿನಿಂದ ಪಂಪ್ ಸೆಟ್ಟುಗಳ ಮಾಹಿತಿಗಳನ್ನು ಸಂಗ್ರಹಿಸಿ, ಅವರಿಂದ ವಿದ್ಯುತ್ ಬಿಲ್ ಪಡೆಯಲು ಮುಂದಾಗಿರುವುದು ನಾಚಿಕೆಗೇಡು ಎಂದು ಆರೋಪಿಸಿದರು.
ಕೇವಲ ಅಧಿಕಾರ ಹಿಡಿಯಲು ಜನರಿಗೆ ಬಿಟ್ಟಿಭಾಗ್ಯಗಳನ್ನು ಘೋಷಿಸಿ, ಇದನ್ನು ನಿಭಾಯಿಸಲಾಗದ ಸರ್ಕಾರ ರಾಜ್ಯದ ಜನರ ಹಾಗೂ ರೈತರ ಮೇಲೆ ತೆರಿಗೆಗಳನ್ನು ಹಾಕುವುದರ ಮೂಲಕ ಜನವಿರೋಧಿ ಆಡಳಿತ ನಡೆಸುತ್ತಿದೆ. ಮಳೆ ಇಲ್ಲದೆ ಬರದಿಂದ ಜನ ನರಳುತ್ತಿದ್ದರೆ, ಇವರ ಮೇಲೆ ತೆರಿಗೆ ಹಾಕಲು ಮುಂದಾದಲ್ಲಿ ಮುಂಬರುವ ಯಾವುದೇ ಸ್ಥಳೀಯ ಚುನಾವಣೆಗಳಿರಲಿ ಜಿಲ್ಲೆಯ ಪ್ರತಿಯೊಬ್ಬ ರೈತರು ರಾಜ್ಯ ಸರ್ಕಾರದ ವಿರುದ್ಧ ಹಸ್ತಪ್ರತಿಗಳ ಮೂಲಕ ಅವರ ವೈಫಲ್ಯಗಳನ್ನು ಜನರ ಮುಂದಿಡುವುದಾಗಿ ಎಚ್ಚರಿಸಿದರು.ಈ ಕೂಡಲೇ ರೈತರ ಪಂಪ್ ಸೆಟ್‌ಗಳಿಗೆ ಆಧಾರ್ ಲಿಂಕ್ ಮಾಡುವುದನ್ನು ನಿಲ್ಲಿಸಬೇಕು. ರೈತರಿಂದ ಡಿಪಾಸಿಟ್ ಹಣ ಪಡೆಯಬಾರದು, ಇಲ್ಲದಿದ್ದಲ್ಲಿ ಬೆಸ್ಕಾಂ ಕಚೇರಿಗಳ ಮುಂದೆ ನಿರಂತರ ಧರಣಿ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ.
ಧರಣಿಯಲ್ಲಿ ರೈತ ಮುಖಂಡರಾದ ಜವರೇಗೌಡ, ಪುಟ್ಟೇಗೌಡ, ಆನಂದರಾವ್, ಅಂತೋನಿ, ಚಂದ್ರ, ಗಣೇಶ, ರಾಮಕೃಷ್ಣ, ಮುತ್ತಪ್ಪ, ಶ್ರೀನಿವಾಸ್, ರಾಜು, ನಾಗಣ್ಣ, ಹೊನ್ನೇಗೌಡ, ರಾಜು, ಬಿ.ಎಂ.ಪ್ರಕಾಶ್, ನಾಗಣ್ಣ, ರೈತ ಮುಖಂಡರು ಭಾಗವಹಿಸಿದ್ದರು.ಕೆ ಕೆ ಪಿ ಸುದ್ದಿ 02ಕನಕಪುರ ಬೆಸ್ಕಾಂ ಕಚೇರಿ ಮುಂದೆ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.