ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಯಾರದ್ದೋ ಆಸ್ತಿ ಇನ್ನಾರಿಗೋ ನೋಂದಣಿಯಾಗುವುದನ್ನು ತಪ್ಪಿಸಲು ಕಂದಾಯ ದಾಖಲೆಗಳೊಂದಿಗೆ ಆಧಾರ್ ಜೋಡಣೆ ಕಾರ್ಯವನ್ನು ಮಾಡಲಾಗುತ್ತಿದೆ. ಪ್ರಸ್ತುತ ಶೇ. 80 ರಷ್ಟು ಆಧಾರ್ ಜೋಡಣಾ ಕಾರ್ಯ ಮುಗಿದಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಶುಕ್ರವಾರ ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಜಿಲ್ಲೆಯ 28 ಜೋಡಿ ಗ್ರಾಮಗಳ ರೈತರಿಗೆ ಆರ್.ಟಿ.ಸಿ ಪಹಣಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರ ಜಮೀನುಗಳ ಕಬಳಿಕೆಯನ್ನು ತಪ್ಪಿಸಲು ಆರ್.ಟಿ.ಸಿ ಪಹಣಿಗಳೊಂದಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲಾಗುತ್ತಿದೆ ಎಂದರು.
1,830 ರೈತರ ಪರಹಣಿ ಇಂಡೀಕರಣಜಿಲ್ಲೆಯ ವಿವಿಧ ತಾಲ್ಲೂಕುಗಳ 28 ಗ್ರಾಮಗಳ 12,503 ಎಕರೆ ಜಮೀನಿಗೆ 5,812 ಪಹಣಿಗಳನ್ನು ಸೃಜಿಸಲು ದಾಖಲೆಗಳನ್ನು ಸಿದ್ದಪಡಿಸಲಾಗಿದೆ. ಈ ಪೈಕಿ ಈಗಾಗಲೇ ಸಹಕಾರ ನೀಡಿರುವ 1,830 ರೈತರಿಗೆ ಇಂದು ಪಹಣಿಗಳನ್ನು ಇಂಡೀಕರಿಸಿ ವಿತರಿಸಲಾಗಿದೆ. ಇನ್ನೂಳಿದ 3982 ಪಹಣಿಗಳ ಜಮೀನುಗಳ ಮಾಲೀಕರು ಸಹಕಾರ ನೀಡಿದಲ್ಲಿ ಕೆಲವೇ ತಿಂಗಳುಗಳಲ್ಲಿ ಆ ರೈತರಿಗೂ ಪಹಣಿ ವಿತರಿಸುವ ಕಾರ್ಯ ಆಗಲಿದೆ. ಸಣ್ಣ ಪುಟ್ಟ ವ್ಯತ್ಯಾಸಗಳಿಗೆ ರೈತರು ಆತಂಕ ಪಟ್ಟು ತಕರಾರು ಹಾಕಿಕೊಂಡರೆ ನಿಮಗೂ ಹಾಗೂ ನಿಮ್ಮ ನೆರೆಹೊರೆಯ ಜಮೀನು ಮಾಲೀಕರಿಗೂ ತೊಂದರೆಯಾಗಲಿದೆ. ದಯಮಾಡಿ ಯಾವುದೇ ರೈತರು ತಕರಾರು ಉದ್ಬವ ಆಗಲು ಅವಕಾಶ ನೀಡದೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದರು.
ಫವತಿ ಖಾತೆ ಆಂದೋಲನಫವತಿ ಖಾತೆಗೆ ಬಾಕಿ ಇರುವ 47 ಲಕ್ಷ ಸರ್ವೆ ನಂಬರುಗಳನ್ನು ಶೀಘ್ರ ವಿಲೇವಾರಿ ಮಾಡಲು ರಾಜ್ಯದಲ್ಲಿ ಮತ್ತೆ ಫವತಿ ಖಾತೆ ಆಂದೋಲನವನ್ನು ಆರಂಭಿಸಲಾಗುವುದು. ರಾಜ್ಯದಲ್ಲಿ ಜಮೀನುಗಳ ದುರಸ್ತಿ ಮಾಡಿ ರೈತರಿಗೆ ಹೊಸ ಆರ್ಟಿ ಸಿ ಪಹಣಿಗಳನ್ನು ಸೃಜನೆ ಮಾಡಿಕೊಡಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಂದಾಯ ಇಲಾಖೆ ಹೊಸ ಆಪ್ ಮತ್ತಿತರ ತಂತ್ರಾಂಶಗಳನ್ನು ಬಳಸಿಕೊಂಡು ರೈತರು ಮತ್ತು ಸಾರ್ವಜನಿಕರ ಭೂಮಿ ಸಮಸ್ಯೆಗಳ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲು ನಿರ್ಧರಿಸಲಾಗಿದೆ ಎಂದರು.
ಉಪವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿ ಪ್ರಕರಣಗಳ ಸಂಖ್ಯೆ 27,000ರಷ್ಟಿವೆ. ಇನ್ನು ತಾಲೂಕು ದಂಡಾಧಿಕಾರಿಗಳ ನ್ಯಾಯಾಲಯಗಳಲ್ಲಿ ಗರಿಷ್ಠ 90 ದಿನಗಳಲ್ಲಿ ವಿಲೇವಾರಿಯಾಗಬೇಕಾದ ಪ್ರಕರಣಗಳು ಈ ಹಿಂದೆ ಸರಾಸರಿ 212 ದಿನ ತೆಗೆದುಕೊಳ್ಳುತ್ತಿದ್ದವು. ಈಗ ಸರಾಸರಿ 82 ದಿನಗಳಲ್ಲಿ ವಿಲೇವಾರಿಯಾಗುತ್ತಿವೆ ಎಂದರು.ಗ್ರಾಮಲೆಕ್ಕಿಗರ ನೇಮಕಕ್ಕೆ ಕ್ರಮ
ರಾಜ್ಯದಲ್ಲಿ ಕಂದಾಯ ಇಲಾಖೆ ಎದುರಿಸುತ್ತಿರುವ ಸಿಬ್ಬಂದಿ ಕೊರತೆಯನ್ನು ನೀಗಿಸಲು ಮುಖ್ಯಮಂತ್ರಿಗಳು ಮೊದಲ ಆದ್ಯತೆ ನೀಡಿದ್ದಾರೆ. ಈಗಾಗಲೇ ಒಂದು ಸಾವಿರ ಗ್ರಾಮ ಲೆಕ್ಕಿಗರ ನೇರ ನೇಮಕಾತಿ ಪಕ್ರಿಯೆ ಪ್ರಗತಿಯಲ್ಲಿದೆ. ಈ ವರ್ಷದ ಕೊನೆಯ ವೇಳೆಗೆ ಹೊಸ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಅಲ್ಲದೇ 357 ಭೂ ಮಾಪಕರ ಭರ್ತಿ ಪ್ರಕ್ರಿಯೆ ಚಾಲನೆಯಲ್ಲಿದೆ. ಇಲಾಖೆಯ ಕಾರ್ಯ ಚಟುವಟಿಕೆಗಳ ವೇಗ ಹೆಚ್ಚಿಸಲು 1,191 ಪರವಾನಗಿ ಹೊಂದಿದ ಭೂ ಮಾಪಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ ಎಂದರು.ಹೊಸ ತಾಲೂಕುಗಳಿಗೆ ಸೌಲಭ್ಯ
ಮುಂದಿನ ವರ್ಷ ಚಿಕ್ಕಬಳ್ಳಾಪುರ ಜಿಲ್ಲೆಯ ಹೊಸ ತಾಲ್ಲೂಕುಗಳಾದ ಚೇಳೂರು ಮತ್ತು ಮಂಚೇನಹಳ್ಳಿ ತಾಲ್ಲೂಕುಗಳಿಗೆ ಆಡಳಿತ ಕೇಂದ್ರದ ಕಟ್ಟಡ ಪ್ರಜಾಸೌಧವನ್ನು ಮಂಜೂರು ಮಾಡಲಾಗುವುದು ಎಂದರು. ರಾಜ್ಯದಲ್ಲಿ ಒಟ್ಟು 14 ಲಕ್ಷ ಎಕರೆಗೂ ಹೆಚ್ಚು ಸರ್ಕಾರಿ ಜಮೀನುಗಳನ್ನು ಗುರುತಿಸಲಾಗಿದೆ. ಸರ್ಕಾರಿ ಜಮೀನುಗಳ ಒತ್ತುವರಿ ತೆರವು ಕಾರ್ಯವನ್ನು ಶೀಘ್ರವೇ ಆರಂಭಿಸಲಾಗುವುದು ಎಂದರು.