ಸಾರಾಂಶ
ಹಾವೇರಿ: ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಧಾರ್ ನೋಂದಣಿ ಕೇಂದ್ರಗಳು ಕುಂಟುನೆಪ ಹೇಳುವುದನ್ನು ಬಿಟ್ಟು ಚುರುಕಿನಿಂದ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಆಧಾರ ಮೇಲ್ವಿಚಾರಣಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಎಷ್ಟು ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಹಾಗೂ ಎಷ್ಟು ಕೇಂದ್ರಗಳು ಸ್ಥಗಿತಗೊಂಡಿವೆ, ಯಾವ ಯಾವ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಪರಿಶೀಲಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಆಧಾರ್ ಕೇಂದ್ರಗಳಲ್ಲಿ ಶಾಲಾ ವಿದ್ಯಾರ್ಥಿಗಳ ಹೆಸರು ತಿದ್ದುಪಡಿ ವಿಳಂಬವಾಗುತ್ತಿರುವ ಕುರಿತು ಸಾಕಷ್ಟು ದೂರುಗಳು ಕೇಳಿಬರುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಆದ್ಯತೆ ಮೇಲೆ ಕೆಲಸ ಮಾಡಬೇಕು. ತಾಂತ್ರಿಕ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಸಮನ್ವಯದಿಂದ ಬಗೆಹರಿಸಬೇಕು ಎಂದರು.ವಿರಾಟ್ ರವಿರಾಜ ಪಾಟೀಲ ಎಂಬ ವಿದ್ಯಾರ್ಥಿಯ ಆಧಾರ್ ಕಾರ್ಡ್‌ನಲ್ಲಿ ಹೆಸರು ತಿದ್ದುಪಡಿಗೆ ಕಳೆದ 15 ದಿನದಿಂದ ಅಲೆದಾಡುತ್ತಿದ್ದು, ಈವರೆಗೆ ಆ ವಿದ್ಯಾರ್ಥಿಯ ಸಮಸ್ಯೆ ಇತ್ಯರ್ಥವಾಗಿಲ್ಲ. ಇದರಿಂದ ಆ ವಿದ್ಯಾರ್ಥಿ ನವೋದಯ ಶಾಲೆ ಪ್ರವೇಶಕ್ಕೆ ಅರ್ಜಿ ಹಾಕಲು ಸಮಸ್ಯೆಯಾಗಿದೆ. ವಿದ್ಯಾರ್ಥಿಯ ಪಾಲಕರು ಇದನ್ನು ನನ್ನ ಗಮನಕ್ಕೆ ತಂದಿದ್ದಾರೆ. ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಬೇಕು. ಈ ಸಮಸ್ಯೆಯನ್ನು ಕೂಡಲೇ ಇತ್ಯರ್ಥಪಡಿಸಬೇಕು ಎಂದು ಆಧಾರ್ ಕೇಂದ್ರ ನಿರ್ವಹಣೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ 25, ಹಾನಗಲ್ಲ- 41, ಹಾವೇರಿ- 35, ಹಿರೇಕೆರೂರು- 13, ರಾಣಿಬೆನ್ನೂರು- 33, ರಟ್ಟಿಹಳ್ಳಿ- 16, ಸವಣೂರು- 17 ಹಾಗೂ ಶಿಗ್ಗಾಂವಿ ತಾಲೂಕಿನಲ್ಲಿ 20 ಸೇರಿ ಒಟ್ಟು 200 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ನಾಡಕಚೇರಿ, ಬೆಂಗಳೂರು ಒನ್, ಕರ್ನಾಟಕ ಒನ್, ತಾಲೂಕು ಪಂಚಾಯಿತಿ, ಅಂಚೆ ಕಚೇರಿ, ವಿವಿಧ ಬ್ಯಾಂಕ್‌ಗಳಲ್ಲಿ ಆಧಾರ ದಾಖಲೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿರುವುದಾಗಿ ಆಧಾರ್ ನೋಂದಣಿ ಕೇಂದ್ರ ಮೇಲುಸ್ತುವಾರಿ ಅಧಿಕಾರಿ ಮಾಹಿತಿ ನೀಡಿದರು.ಜಿಲ್ಲೆಯಲ್ಲಿ ಸೊನ್ನೆಯಿಂದ ಐದು ವರ್ಷದೊಳಗಿನ 81,719, 5ರಿಂದ 18 ವರ್ಷದೊಳಗಿನ 3,78,268 ಹಾಗೂ 18 ವರ್ಷ ಮೇಲ್ಪಟ್ಟ 14,26,791 ಜನರು ಆಧಾರ್ ನೋಂದಣಿ ಮಾಡಲಾಗಿದೆ. ಐದು ವರ್ಷ ಮೇಲ್ಪಟ್ಟ 80,301 ಮಕ್ಕಳ ಹಾಗೂ 15 ವರ್ಷ ಮೇಲ್ಪಟ್ಟ 57,815 ಮಕ್ಕಳು ಸೇರಿ 1,38,116 ಮಕ್ಕಳ ಬಯೋಮೆಟ್ರಿಕ್ ಬಾಕಿ ಇದೆ. ಅದೇ ರೀತಿ ಆಧಾರ್ ನೋಂದಣಿ, ತಿದ್ದುಪಡಿ ಕಾರ್ಯ ಪ್ರಗತಿಯಲ್ಲಿದೆ ಎಂದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್., ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಭುದೇವ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುರೇಶ ಹುಗ್ಗಿ ಇತರರು ಉಪಸ್ಥಿತರಿದ್ದರು.