ಹುಲಿಹೈದರ ಮತ್ತು ನವಲಿಯಲ್ಲಿ ಆಧಾರ್ ಸೇವಾ ಕೇಂದ್ರಗಳನ್ನು ಆರಂಭಿಸಿ ಗ್ರಾಮೀಣ ಜನರಿಗೆ ಅನುಕೂಲ ಮಾಡಿದೆ.
ಪ್ರಲ್ಹಾದರೆಡ್ಡಿ ಮಾದಿನಾಳ ಕನಕಗಿರಿ
ಗಣಕಯಂತ್ರ ಸಹಾಯಕ ಕೊರತೆ ಸೇರಿ ನಾನಾ ಕಾರಣಗಳಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ತಾಲೂಕಿನ ಹುಲಿಹೈದರ ಹಾಗೂ ನವಲಿ ಹೋಬಳಿಯಲ್ಲಿ ಆಧಾರ್ ಸೇವಾ ಕೇಂದ್ರಗಳು ಆರಂಭಗೊಂಡಿವೆ.ಹೌದು, ೬೦ಕ್ಕೂ ಹೆಚ್ಚು ಗ್ರಾಮಸ್ಥರು ಆಧಾರ್ ಇಕೆವೈಸಿ ಮಾಡಿಸಲು ತಾಲೂಕು ಕೇಂದ್ರಕ್ಕೆ ಬರುತ್ತಿದ್ದಾರೆ. ಪಟ್ಟಣದಲ್ಲಿ ಅಂಚೆ ಹಾಗೂ ನಾಡ ಕಚೇರಿಯಲ್ಲಿ ನಿತ್ಯ ೬೦ ಜನರ ಇಕೆವೈಸಿ ಮಾಡಲಾಗುತ್ತಿದ್ದು, ಈಗಲೂ ನಿತ್ಯವೂ ನೂರಾರು ಜನ ವಾಪಸ್ ತೆರಳುತ್ತಿದ್ದಾರೆ. ಕೆಲವರು ಜಾಗರಣೆ ಮಾಡಿ ಹರಸಾಹಸ ಪಟ್ಟು ಇಕೆವೈಸಿ ಮಾಡಿಕೊಳ್ಳುತ್ತಿರುವುದು ಮುಂದುವರೆದಿದೆ.
ತಾಲೂಕು ಕೇಂದ್ರದಲ್ಲಿ ಇಕೆವೈಸಿ ಒತ್ತಡ ನಿಯಂತ್ರಿಸುವುದಕ್ಕಾಗಿ ತಾಲೂಕು ಆಡಳತವು ನವಲಿ ಹಾಗೂ ಹುಲಿಹೈದರ ಹೋಬಳಿಗಳಲ್ಲಿ ಈ ಹಿಂದೆ ನಾನಾ ಕಾರಣಗಳಿಂದ ಸ್ಥಗಿತಗೊಂಡಿದ್ದ ಆಧಾರ್ ಸೇವಾ ಕೇಂದ್ರವನ್ನು ಮತ್ತೆ ಆರಂಭಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಂಡಿದೆ. ಆದರೂ ಆಧಾರ್ ಇಕೆವೈಸಿಗೆ ಜನ ಮುಗಿಬಿದ್ದಿದ್ದು, ಹಗಲು ರಾತ್ರಿ ಎನ್ನದೆ ಸರತಿಯಲ್ಲಿ ನಿಲ್ಲುವ ಪರಿಸ್ಥಿತಿ ಇನ್ನೂ ತಪ್ಪದಾಗಿದೆ.ಆಧಾರ್ ಇಕೆವೈಸಿಗಾಗಿ ಜನ ರಾತ್ರಿಯಿಡಿ ಜಾಗರಣೆ ಕುರಿತಂತೆ ಅ.೮ರಂದು ಕನ್ನಡಪ್ರಭದಲ್ಲಿ ವಿಸ್ತೃತ ವರದಿ ಪ್ರಕಟಿಸಿದ್ದ ಬೆನ್ನಲ್ಲೆ ಎಚ್ಚೆತ್ತುಕೊಂಡಿರುವ ತಾಲೂಕು ಆಡಳಿತ ಹುಲಿಹೈದರ ಮತ್ತು ನವಲಿಯಲ್ಲಿ ಆಧಾರ್ ಸೇವಾ ಕೇಂದ್ರಗಳನ್ನು ಆರಂಭಿಸಿ ಗ್ರಾಮೀಣ ಜನರಿಗೆ ಅನುಕೂಲ ಮಾಡಿದೆ. ಆದರೆ, ಪಟ್ಟಣದ ಎರಡೂ ಕಚೇರಿಗಳಲ್ಲಿಯೂ ಇಕೆವೈಸಿಗೆ ಜನ ಜಾಗರಣೆ, ಪಾಳಿ ವ್ಯವಸ್ಥೆ ಇದೆ. ಸಮೀಪದ ಸುಳೇಕಲ್ ಮತ್ತು ಮುಸಲಾಪೂರದಲ್ಲಿ ಹೊಸ ಆಧಾರ್ ಕೇಂದ್ರ ಆರಂಭಿಸಿದರೆ ಇಲ್ಲಿನ ಜನ ನಿಟ್ಟುಸಿರು ಬಿಡಲಿದ್ದಾರೆ.
ಆಧಾರ್ ಇಕೆವೈಸಿಗಾಗಿ ರಾತ್ರಿಯಿಡಿ ಜಾಗರಣೆ ಮಾಡುತ್ತಿರುವ ಕುರಿತು ಕನ್ನಡಪ್ರಭ ವಿಸ್ತೃತ ವರದಿ ಪ್ರಕಟಿಸಿದ ಹಿನ್ನಲೆಯಲ್ಲಿ ನವಲಿ, ಹುಲಿಹೈದರದಲ್ಲಿ ಆಧಾರ್ ಕೇಂದ್ರಗಳು ಆರಂಭವಾಗಿವೆ. ಆಧಾರ್ ಇಕೆವೈಸಿಗೆ ಜನ ಮುಗಿಬೀಳುತ್ತಿದ್ದು, ತಾಲೂಕಿನಲ್ಲಿ ಇನ್ನೆರೆಡು ಕೇಂದ್ರಗಳನ್ನು ತೆರೆಯಲು ಜಿಲ್ಲಾಢಳಿತ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಹಿತ ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡಪ್ರಭಕ್ಕೆ ಧನ್ಯವಾದ ಎಂದು ಪ.ಪಂ ಸದಸ್ಯ ಶೇಷಪ್ಪ ಪೂಜಾರ ತಿಳಿಸಿದ್ದಾರೆ.ಆಧಾರ್ ಇಕೆವೈಸಿ ಸಮಸ್ಯೆ ಗಮನಕ್ಕೆ ಬರುತ್ತಿದ್ದಂತೆ ನವಲಿ, ಹುಲಿಹೈದರ ಎರಡು ಕಡೆಗಳಲ್ಲಿ ಆಧಾರ್ ಸೇವೆ ಪ್ರಾರಂಭಿಸಲಾಗಿದೆ. ಇನ್ನೂಳಿದಂತೆ ತಾಲೂಕಿನಲ್ಲಿ ಇಕೆವೈಸಿ ಎಲ್ಲೂ ಸಮಸ್ಯೆ ಕಂಡು ಬಂದಿಲ್ಲ. ಒಂದು ವೇಳೆ ಸಮಸ್ಯೆಯಾದಲ್ಲಿ ತಕ್ಷಣವೇ ಕ್ರಮ ಕೈಗೊಳ್ಳುತ್ತೇನೆ ಎಂದು ಕನಕಗಿರಿ ತಹಶೀಲ್ದಾರ ಚಂದ್ರಶೇಖರ ಗಾಳಿ ತಿಳಿಸಿದ್ದಾರೆ.