ಸಾರಾಂಶ
ಗದಗ: ಆಧಾರ್ ಕಾರ್ಡ್ ಭಾರತೀಯ ನಾಗರಿಕನಿಗೆ ಒಂದು ವಿಶಿಷ್ಟ ಗುರುತಿನ ಚೀಟಿಯಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆದ ಜಿಲ್ಲಾ ಮಟ್ಟದ ಆಧಾರ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆಧಾರ್ ಕಾರ್ಡ್ ವ್ಯಕ್ತಿಯ ಗುರುತಿನ ಮತ್ತು ವಿಳಾಸದ ಪುರಾವೆಯಾಗಿದ್ದು, ವಿವಿಧ ಸರ್ಕಾರಿ ಯೋಜನೆಗಳು ಹಾಗೂ ಸಹಾಯಧನಗಳನ್ನು ಪಡೆಯಲು ಆಧಾರ್ ಕಾರ್ಡ ಸಹಾಯವಾಗುತ್ತದೆ. ಸಾರ್ವಜನಿಕರ ಆಧಾರ ಕಾರ್ಡಗಳಿಗೆ ಮೊಬೈಲ್ ಲಿಂಕ್ ಅವಶ್ಯಕವಾಗಿದ್ದು, ಆಧಾರ ಕೇಂದ್ರಕ್ಕೆ ಆಗಮಿಸಿ ಮೊಬೈಲ್ ಲಿಂಕ್ ಮಾಡಿಸಬೇಕು. ಶಾಲೆಗಳಲ್ಲಿ ಆಧಾರ ನೋಂದಣಿ ಶಿಬಿರವನ್ನು ಏರ್ಪಡಿಸಿ ಪ್ರತಿಯೊಂದು ಮಗುವು ಆಧಾರ ಕಾರ್ಡನ್ನು ಹೊಂದುವಂತಾಗಬೇಕು. ಆಧಾರ ನೋಂದಣಿಯಾದ ಶಾಲಾ ಮಕ್ಕಳಿಗೆ ಕಡ್ಡಾಯ ಬಯೋಮೆಟ್ರಿಕ್ ಮಕ್ಕಳ ಪಾಲಕರು ಆಧಾರ ಕೇಂದ್ರಗಳಿಗೆ ಆಗಮಿಸಿ ಮಾಡಿಸಬೇಕು ಎಂದು ತಿಳಿಸಿದರು.
UIDAI ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಬಂಧಕ ಮೊಹಮ್ಮದ ಮುಸಾಬ ಮಾತನಾಡಿ, ಜಿಲ್ಲೆಯಲ್ಲಿ 12,35,602 ಆಧಾರ್ ಕಾರ್ಡ್ ಜನರೇಟ್ ಮಾಡಲಾಗಿದೆ. 11,57,749 ಆಧಾರ್ ಕಾರ್ಡ್‌ಗಳಿಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಲಾಗಿದ್ದು 77,853 ಆಧಾರ್ ಕಾರ್ಡಗಳ ಮೊಬೈಲ್ ಲಿಂಕ್ ಮಾಡುವುದು ಬಾಕಿ ಇವೆ. ಜಿಲ್ಲೆಯ 1,83,735 ವಿದ್ಯಾರ್ಥಿಗಳ ಪೈಕಿ 1,40,509 ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಪರಿಶೀಲನೆಗೆ ಕಳುಹಿಸಿದ್ದು ಆ ಪೈಕಿ 1,01,085 ವಿದ್ಯಾರ್ಥಿಗಳ ಆಧಾರ ಕಾರ್ಡ್ ಪೂರ್ಣಗೊಂಡಿವೆ. 82,650 ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಪರಿಶೀಲನೆ ಬಾಕಿ ಇದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಆಧಾರ್ ಕಾರ್ಡ್ ನೋಂದಣಿ , ಆಧಾರ್ ಕಾರ್ಡ್‌ನಲ್ಲಿ ಹೆಸರು ವ್ಯತ್ಯಾಸ ತಿದ್ದುಪಡಿ, ನವೀಕರಣಕ್ಕೆ ಸಂಬಂಧಪಟ್ಟ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
ಜಿಪಂ ಸಿಇಒ ಭರತ್.ಎಸ್, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ.ಎಂ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್.ಬುರುಡೆ, ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಸನಾಯಕ, ವಿಕಲಚೇತನರ ಕಲ್ಯಾಣ ಇಲಾಖೆ ಅಧಿಕಾರಿ ಮಹಾಂತೇಶ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾವತಿ.ಜಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.