ಸಾರಾಂಶ
ರಟ್ಟೀಹಳ್ಳಿ: ಆ. 20ರಂದು ನಡೆಯುವ ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಗೆ ಆಮ ಆದ್ಮಿ ಪಕ್ಷದಿಂದ 15 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ಮತದಾರರು ಭ್ರಷ್ಟಾಚಾರ ಹಾಗೂ ಸ್ವಚ್ಛ ಆಡಳಿತಕ್ಕಾಗಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ರಾಜ್ಯ ಕಾರ್ಯಾಧ್ಯಕ್ಷ ಸೀತಾರಾಮ ಗುಂಡಪ್ಪ ಮನವಿ ಮಾಡಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ಬಿಜೆಪಿ ಹೊಂದಾಣಿಕೆ ರಾಜಕಾರಣದ ಮೂಲಕ ರಾಜ್ಯದ ಜನರನ್ನು ಮೂರ್ಖರನ್ನಾಗಿಸಿ ಮಾಡುತ್ತಿವೆ ಎಂದರು.
ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ರಾಜ್ಯವನ್ನು ದಿವಾಳಿ ಅಂಚಿಗೆ ತಲುಪಿಸುತ್ತಿರುವ ಆಡಳಿತ ಪಕ್ಷ ಅದಕ್ಕೆ ಹೊಂದಾಣಿಕೆ ಮಾಡಿಕೊಂಡಿರುವ ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳು ಮಧ್ಯ ಶುದ್ಧ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಮೊದಲ ಹಂತದಲ್ಲಿ ಕೆಳಮಟ್ಟ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹೀಗೆ ಕೆಳ ಮಟ್ಟದಿಂದ ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರು ಚುನಾವಣೆ ಎದುರಿಸಲು ಸಿದ್ಧರಾಗಿದ್ದು, ನಮ್ಮ ಪಕ್ಷಕ್ಕೆ ಒಂದು ಬಾರಿ ಆಶೀರ್ವದಿಸಿ ಎಂದು ಮನವಿ ಮಾಡಿದರು.ಪಕ್ಷದ ಜಿಲ್ಲಾಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಗೆ ಎಲ್ಲ 15 ವಾರ್ಡ್‌ಗಳಲ್ಲಿ ನಮ್ಮ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ಎರಡು ಪಕ್ಷದ ಆಡಳಿತ ವ್ಯವಸ್ಥೆ ನಮ್ಮ ಕಣ್ಣಿನ ಮುಂದೆ ಇದೆ. ಆದ್ದರಿಂದ ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಆಮ್ ಆದ್ಮಿ ಪಕ್ಷಕ್ಕೆ ಆಶೀರ್ವದಿಸಿ ಎಂದು ಮನವಿ ಮಾಡಿದರು.ಪಕ್ಷದ ರಾಜ್ಯ ಕಾರ್ಯದರ್ಶಿ ರವಿ ಬೆಂಗಳೂರು, ಫರೀದ ನದಾಫ್, ರಾಜಶೇಖರ ದೂದಿಹಳ್ಳಿ, ಕುಮಾರಸ್ವಾಮಿ, ರಾಜೇಶ ಅಂಗಡಿ, ಮಾಲತೇಶ ಮಡಿವಾಳರ, ಆಸೀಫ್ ಮುಲ್ಲಾ, ಸಮೀವುಲ್ಲಾ ಖಾಜಿ, ದಾದಾಫೀರ ರಿಕಾಟೆ, ಭರಮಪ್ಪ ಉಪ್ಪಾರ, ಸಾಬೀರ ಗೊಡಹಾಳ್, ರೇಷ್ಮಾ ಹೊನ್ನಾಳ್ಳಿ, ಜಬೀನಾ ಬಾನು ಗಂಗದ, ಗಂಗವ್ವ ಪವಾರ, ಸೀತಮ್ಮ ಕಲಕುಟಿಗೇರ ಹಾಗೂ ಮುಂತಾದವರು ಇದ್ದರು.ರಟ್ಟೀಹಳ್ಳಿಯ ಪ್ರವಾಸಿ ಮಂದಿರದಲ್ಲಿ ಆಮ್ ಆದ್ಮಿ ಕಾರ್ಯಕರ್ತರು.