ಪ್ರಧಾನಿ ರಾಜಿನಾಮೆಗೆ ಆಮ್ ಆದ್ಮಿ ಪಾರ್ಟಿ ಒತ್ತಾಯ

| Published : Apr 12 2024, 01:10 AM IST / Updated: Apr 12 2024, 12:31 PM IST

ಸಾರಾಂಶ

ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಬೇಕೆಂದು ಒತ್ತಾಯಿಸಿ ಆಮ್ ಆದ್ಮಿ ಪಾರ್ಟಿಯ ಕೊಡಗು ಜಿಲ್ಲಾ ಘಟಕ ಮಡಿಕೇರಿ ನಗರದ ಗಾಂಧಿ ಮಂಟಪದ ಬಳಿ ಪ್ರತಿಭಟನೆ ನಡೆಸಿತು.  

 ಮಡಿಕೇರಿ: ಚುನಾವಣಾ ಬಾಂಡ್ ಹಗರಣದ ಆರೋಪ ಎದುರಿಸುತ್ತಿರುವ ಪ್ರಧಾನಮಂತ್ರಿ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಬೇಕೆಂದು ಒತ್ತಾಯಿಸಿ ಆಮ್ ಆದ್ಮಿ ಪಾರ್ಟಿಯ ಕೊಡಗು ಜಿಲ್ಲಾ ಘಟಕ ಮಡಿಕೇರಿ ನಗರದ ಗಾಂಧಿ ಮಂಟಪದ ಬಳಿ ಪ್ರತಿಭಟನೆ ನಡೆಸಿತು.

ಈ ಸಂದರ್ಭ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ, ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರಕಾರದ ಸರ್ವಾಧಿಕಾರಿ ಧೋರಣೆ ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಜನಪ್ರಿಯ ನಾಯಕರಾಗಿರುವ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಯಾವುದೇ ತಪ್ಪು ಮಾಡದಿದ್ದರೂ ನೇರವಾಗಿ ಎದುರಿಸಲಾಗದೆ ಪಿತೂರಿ ನಡೆಸಿ ಬಂಧನಕ್ಕೆ ಒಳಗಾಗುವಂತೆ ಮಾಡಲಾಗಿದೆ. ಆದರೆ ಸ್ವತಃ ಪ್ರಧಾನಮಂತ್ರಿ ಚುನಾವಣಾ ಬಾಂಡ್ ಹಗರಣದ ಆರೋಪ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಅವ್ಯವಹಾರದಲ್ಲಿ ನೇರವಾಗಿ ಭಾಗಿಯಾಗಿರುವ ಬಿಜೆಪಿ ನಾಯಕರನ್ನು ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ ಅವರು, ಲೋಕಸಭಾ ಚುನಾವಣೆಯಲ್ಲಿ ಮತದಾರರು ತಮ್ಮನ್ನು ಅಧಿಕಾರದಿಂದ ಕಿತ್ತೆಸೆಯುತ್ತಾರೆ ಎಂಬುವುದನ್ನು ಅರಿತಿರುವ ಕೇಂದ್ರ ಸರ್ಕಾರ ಹೇಗಾದರೂ ಮಾಡಿ ಮತ್ತೆ ಅಧಿಕಾರ ಹಿಡಿಯಬೇಕೆಂಬ ಕಾರಣಕ್ಕೆ ವಾಮ ಮಾರ್ಗಗಳನ್ನು ಅನುಸರಿಸುತ್ತಿದೆ ಎಂದು ದೂರಿದರು.ದೆಹಲಿಯಲ್ಲಿ ಆಮ್ ಆದ್ಮಿ ಸರ್ಕಾರವನ್ನು ನಿಷ್ಕ್ರಿಯ ಗೊಳಿಸಲು ಕಳೆದ 2 ವರ್ಷಗಳಿಂದ ಹುನ್ನಾರ ನಡೆದಿದೆ. ಇದುವರೆಗೆ ಒಂದೇ ಒಂದು ರೂಪಾಯಿ ಅಕ್ರಮ ಹಣವನ್ನು ವಶಪಡಿಸಿಕೊಳ್ಳಲು ಜಾರಿ ನಿರ್ದೇಶನಾಲಯ, ತೆರಿಗೆ ಇಲಾಖೆ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಇದೆಲ್ಲವೂ ಮೋದಿ ಸರ್ಕಾರದ ಕೃಪಾಪೋಷಿತ ಕಾರ್ಯಾಚರಣೆ ಎಂಬುವುದನ್ನು ವಿವರಿಸಬೇಕಿಲ್ಲ ಎಂದು ಭೋಜಣ್ಣ ಸೋಮಯ್ಯ ಟೀಕಿಸಿದರು.