ಕೇಜ್ರಿವಾಲ್‌ ಬಂಧನ ಖಂಡಿಸಿ ಆಪ್‌ ಪ್ರತಿಭಟನೆ

| Published : Mar 23 2024, 01:00 AM IST

ಸಾರಾಂಶ

ಅರವಿಂದ ಕೇಜ್ರಿವಾಲ್‌ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದ್ದು ಅತೀವ ಖಂಡನೀಯ. ಕೂಡಲೇ ಕೇಜ್ರಿವಾಲ್‌ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರನ್ನು ಜಾರಿ ನಿರ್ದೇಶನಾಲಯ ಬಂಧನ ಮಾಡಿದ್ದನ್ನು ವಿರೋಧಿಸಿ ಹುಬ್ಬಳ್ಳಿಯಲ್ಲಿ ಆಮ್ ಆದ್ಮಿ ಪಕ್ಷದಿಂದ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ತಹಸೀಲ್ದಾರರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು. ಇಲ್ಲಿನ ಮಿನಿವಿಧಾನಸೌಧಕ್ಕೆ ಪ್ರತಿಭಟನೆ ರ್‍ಯಾಲಿ ಮೂಲಕ ಆಗಮಿಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಅಬಕಾರಿ ನೀತಿ ಪ್ರಕರಣ ಸಂಬಂಧ ಇ.ಡಿ. ಗುರುವಾರ ಕೇಜ್ರಿವಾಲ್‌ ಅವರನ್ನು ಬಂಧಿಸಿದೆ. ಇವರ ಬಂಧನ ಖಂಡನೀಯವಾಗಿದೆ ಎಂದ ಕಿಡಿಕಾರಿದರು.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಪ್ರಜಾಪ್ರಭುತ್ವದ ಅನುಗುಣವಾಗಿ ಆರಿಸಿ ಬಂದು ದೆಹಲಿಯ ಆಡಳಿತ ನಡೆಸುತ್ತಿದ್ದಾರೆ. ಅಬಕಾರಿ ಪ್ರಕರಣದಲ್ಲಿ ಈಗಾಗಲೇ ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ ಮತ್ತು ಸಂಜಯ ಸಿಂಗ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದ್ದು, ಈ ವರೆಗೂ ಲಂಚ ಸ್ವೀಕರಿಸಿದ್ದರ ಪುರಾವೆ ಸಿಕ್ಕಿಲ್ಲ. ಹೀಗಿರುವಾಗ ಅರವಿಂದ ಕೇಜ್ರಿವಾಲ್‌ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದ್ದು ಅತೀವ ಖಂಡನೀಯ. ಕೂಡಲೇ ಕೇಜ್ರಿವಾಲ್‌ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಅನಂತಕುಮಾರ ಬುಗಡಿ, ಪ್ರವೀಣಕುಮಾರ ನಡಕಟ್ಟಿನ, ಬಸವರಾಜ ತೇರದಾಳ, ಮಲ್ಲಪ್ಪ ತಡಸದ, ಕಿಶೋರ ಶೆಟ್ಟಿ, ಹುಸೇನ ಬಾಷಾ, ಶಶಿಕುಮಾರ ಸುಳ್ಳದ, ರೇವಣಸಿದ್ದಪ್ಪ ಹುಬ್ಬಳ್ಳಿ, ಎಸ್.ಪಿ. ಹುಬ್ಲಿಕರ, ಪದ್ಮಾ ಹುಬ್ಲಿಕರ, ಸಂತೋಷ ಮಾನೆ, ಸಂಜೀವ ಬೆಳೆಗೇರಿ, ವಿಜಯ ಅಕ್ಕಳಕೋಟಿ, ಲಕ್ಷ್ಮಣ ನರಸಾಪುರ, ಕುಮಾರ ನೂಲ್ವಿ, ಶಿವಕುಮಾರ, ಮಹಮೂದ ಹರವಿ ಸೇರಿದಂತೆ ಹಲವರಿದ್ದರು.