ಬರಪೀಡಿತ ಪ್ರದೇಶ ಘೋಷಣೆಗೆ ಜಿಲ್ಲಾಡಳಿತಕ್ಕೆ ಎಎಪಿ ಒತ್ತಾಯ

| Published : Dec 08 2023, 01:45 AM IST

ಬರಪೀಡಿತ ಪ್ರದೇಶ ಘೋಷಣೆಗೆ ಜಿಲ್ಲಾಡಳಿತಕ್ಕೆ ಎಎಪಿ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಬರಪೀಡಿತ ಪ್ರದೇಶ ಘೋಷಣೆಗೆ ಜಿಲ್ಲಾಡಳಿತಕ್ಕೆ ಎಎಪಿ ಒತ್ತಾಯಚಿಕ್ಕಮಗಳೂರು ತಾಲೂಕು ಘೋಷಣೆಗೆ ಆಗ್ರಹ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ

ಚಿಕ್ಕಮಗಳೂರು ತಾಲೂಕು ಘೋಷಣೆಗೆ ಆಗ್ರಹ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ತಾಲೂಕಿನ ಅಂಬಳೆ ಹೋಬಳಿಯಲ್ಲಿ ಮಳೆಯ ಕೊರತೆಯಿಂದ ಅಪಾರ ಬೆಳೆ ನೆಲೆಕಚ್ಚಿ ಅಂಬಳೆ ಸೇರಿದಂತೆ ಚಿಕ್ಕಮಗಳೂರು ತಾಲೂಕನ್ನು ಬರಪೀಡಿತ ಪ್ರದೇಶ ವೆಂದು ಘೋಷಣೆ ಮಾಡಬೇಕೆಂದು ಆಮ್‌ ಆದ್ಮಿ ಪಕ್ಷ ಜಿಲ್ಲಾಡಳಿತವನ್ನು ಒತ್ತಾಯಿಸಿದೆ. ಈ ಸಂಬಂಧ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಗುರುವಾರ ಮನವಿ ಸಲ್ಲಿಸಿದ ಎಎಪಿ ಮುಖಂಡರು ತಾಲೂಕಿನಲ್ಲಿ ಬಹುತೇಕ ಬೆಳೆಗಳು ಕೈಕೊಟ್ಟಿರುವ ಹಿನ್ನೆಲೆಯಲ್ಲಿ ರೈತಾಪಿ ವರ್ಗದ ಜೀವನ ಚಿಂತಾಜನಕವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಬಳಿಕ ಮಾತನಾಡಿದ ಎಎಪಿ ಜಿಲ್ಲಾಧ್ಯಕ್ಷ ಲಿಂಗರಾಧ್ಯ, ತಾಲೂಕಿನಲ್ಲಿ ಸಮರ್ಪಕ ಮಳೆಯಾಗದೇ ರೈತರು ಕಂಗಲಾಗಿದ್ದಾರೆ. ಜೊತೆಗೆ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ. ಮುಂದಿನ ದಿನ ಗಳಲ್ಲಿ ನೀರಿನ ಕೊರತೆ ಸಂಭವಿಸುವ ಹಿನ್ನೆಲೆಯಲ್ಲಿ ತ್ವರಿತವಾಗಿ ಬರಪೀಡಿತ ಪ್ರದೇಶವೆಂದು ಘೋಷಿಸ ಬೇಕು ಎಂದರು. ಈಗಾಗಲೇ ಕಾಂಗ್ರೆಸ್ ಪಕ್ಷದ ರಾಜ್ಯ ಸರ್ಕಾರ ಯಾವುದೇ ಅಭಿವೃದ್ಧಿ ಕೈಗೊಳ್ಳುತ್ತಿಲ್ಲ. ಕೇವಲ ಬೆಳಗಾವಿ ಅಧಿವೇಶನ ವ್ಯರ್ಥ ಖರ್ಚುವೆಸಗಿ ಶಾಸಕರಿಗೆ ಐಶಾರಾಮಿ ಹೋಟೆಲ್ ಹಾಗೂ ಓಡಾಟಕ್ಕೆ ವಿಮಾನ ಪ್ರಯಾಣದ ವ್ಯವಸ್ಥೆ ಕಲ್ಪಿಸುತ್ತಿರುವುದು ಅವಶ್ಯಕತೆಯಿದೆಯೇ ಎಂದು ಪ್ರಶ್ನಿಸಿದರು. ಎಎಪಿ ಕಾರ್ಯದರ್ಶಿ ಎಂ.ಪಿ.ಈರೇಗೌಡ ಮಾತನಾಡಿ, ಬರಪೀಡಿತ ಪ್ರದೇಶಗಳಲ್ಲಿ ಸರಿಯಾದ ವ್ಶೆಜ್ಞಾನಿಕ ಸಮೀಕ್ಷೆ ನಡೆಸಬೇಕು. ಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಸರ್ವ ಪಕ್ಷ ಗಳ ನಿಯೋಗವನ್ನು ದೆಹಲಿಗೆ ಕರೆದೊಯ್ಯಬೇಕು ಎಂದು ಒತ್ತಾಯಿಸಿದರು. ಆ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಳೆ - ಬೆಳೆಯಿಲ್ಲದೆ ಕಂಗೆಟ್ಟಿರುವ ಅರ್ಹ ಫಲಾನುಭವಿ ರೈತರಿಗೆ ಎಕರೆ 25 ಸಾವಿರ ಹಾಗೂ ಜಾನುವಾರು ಪೋಷಣೆಗೆ ತಲಾ 5 ಸಾವಿರ ಪರಿಹಾರ ಘೋಷಿಸಬೇಕು, ಗ್ರಾಮೀಣ ಪ್ರದೇಶದವರಿಗೆ ಉದ್ಯೋಗ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಎಎಪಿ ಮಾಧ್ಯಮ ಪ್ರತಿನಿಧಿ ಡಾ. ಕೆ.ಸುಂದರಗೌಡ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸೈಯದ್ ಜಮೀಲ್ ಅಹಮದ್, ಮುಖಂಡರಾದ ಹರ್ಷನ್, ಪುಟ್ಟರಾಜು ಹಾಜರಿದ್ದರು.------ ಬಾಕ್ಸ್‌ --ಬರ ಪೀಡಿತ ಪ್ರದೇಶ ಘೋಷಿಸಲು ಆಗ್ರಹ: ಡಿ. 13 ರಂದು ಪ್ರತಿಭಟನೆಚಿಕ್ಕಮಗಳೂರು: ಬರ ಅಧ್ಯಯನ ತಂಡ ಚಿಕ್ಕಮಗಳೂರು ತಾಲೂಕಿನ ವಾಸ್ತವ ಸ್ಥಿತಿ ಅಧ್ಯಯನ ಮಾಡಿ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಶಾಖೆ ಡಿ.13 ರಂದು ಇಲ್ಲಿನ ತಾಲೂಕು ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಲು ನಿರ್ಧರಿಸಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ತಾಲೂಕು ಘಟಕದ ಅಧ್ಯಕ್ಷ ಎಂ.ಬಿ ಚಂದ್ರ ಶೇಖರ್, ಚಿಕ್ಕಮಗಳೂರು ತಾಲೂಕಿನ ಅಂಬಳೆ, ಲಕ್ಯಾ, ಸಖರಾಯಪಟ್ಟಣ ಹೋಬಳಿಗಳಲ್ಲಿ ತೀವ್ರ ಬರಗಾಲವಿದ್ದರೂ ಸರಿಯಾಗಿ ರೈತರ ಜಮೀನುಗಳ ಬಳಿ ಹೋಗಿ ಸಮೀಕ್ಷೆ ಸರ್ವೆ ಮಾಡದಿರುವುದೇ ಈ ತಾಲೂಕು ಬರ ಪಟ್ಟಿಯಿಂದ ಹೊರಗುಳಿಯಲು ಕಾರಣ ಎಂದು ದೂರಿದರು. ಜಿಲ್ಲೆಯ 9 ತಾಲೂಕುಗಳಲ್ಲಿ ಈಗಾಗಲೆ 8 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸ ಲಾಗಿದೆ. ಚಿಕ್ಕಮಗಳೂರು ತಾಲೂಕನ್ನು ಶಾಸಕ ಎಚ್.ಡಿ ತಮ್ಮಯ್ಯ ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಕೃಷಿ ಸಚಿವರಿಗೆ ಮನವಿ ನೀಡಿ ಸದನದಲ್ಲಿ ವಿಷಯ ಪ್ರಸ್ತಾಪಿಸಿ ಪರಿಹಾರದ ಹಣ ಮಂಜೂರು ಮಾಡುವಂತೆ ಆಗ್ರಹಿಸಿರುವುದನ್ನು ಸ್ವಾಗತಿಸಿದರು. ತಾಲೂಕಿನ ಪರಿಸ್ಥಿತಿಯನ್ನು ಸಮಗ್ರವಾಗಿ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ಒತ್ತಾಯಿಸಿದ ಅವರು, ಇದರಿಂದ ಬೆಳೆ ನಷ್ಟವಾಗಿರುವ ರೈತರಿಗೆ ವೈಜ್ಞಾನಿಕ ಪರಿಹಾರ ನೀಡಲು ಮುಂದಾಗಬೇಕು ಹಾಗೂ ರೈತರ ಸಂಪೂರ್ಣ ಸಾಲಮನ್ನಾ ಮಾಡುವಂತೆ ಆಗ್ರಹಿಸಿದರು. ಜಾನುವಾರುಗಳನ್ನು ಸಾಕಲಾಗದೆ ಮಾರುವ ಪರಿಸ್ಥಿತಿ ಬಂದಿದೆ. ಕೊಳವೆ ಬಾವಿಗಳ ಅಂತರ್ಜಲದ ಕೊರತೆ ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ಸರ್ಕಾರ ಜಿಲ್ಲೆಯನ್ನು ಸಂಪೂರ್ಣ ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸುವ ಸಂದರ್ಭದಲ್ಲಿ ಚಿಕ್ಕಮಗಳೂರು ತಾಲೂಕನ್ನು ಬಿಟ್ಟು ಉಳಿದ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿ ಚಿಕ್ಕಮಗಳೂರು ತಾಲೂಕಿನ ಬಗ್ಗೆ ಮಲತಾಯಿ ಧೋರಣೆ ಅನುಸರಿಸಿರುವುದನ್ನು ಖಂಡಿಸಿದರು. ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್, ಗೌರವಾಧ್ಯಕ್ಷ ಕೆ.ಕೆ. ಕೃಷ್ಣೆಗೌಡ, ಮುಖಂಡರಾದ ಬಸವರಾಜ್, ಶಿವಣ್ಣ, ಲೋಕೇಶ್ ಉಪಸ್ಥಿತರಿದ್ದರು. 7 ಕೆಸಿಕೆಎಂ 1ಚಿಕ್ಕಮಗಳೂರು ಬರಪೀಡಿತ ತಾಲೂಕೆಂದು ಘೋಷಿಸಲು ಆಗ್ರಹಿಸಿ ಆಮ್‌ ಆದ್ಮಿ ಪಕ್ಷದ ಮುಖಂಡರು ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಗುರುವಾರ ಮನವಿ ಸಲ್ಲಿಸಿದರು.