ಬೇಡರ ಕಣ್ಣಪ್ಪನಿಗೆ ಮಹಿಳೆಯರಿಂದ ಆರತಿ ಮಹೋತ್ಸವ

| Published : Feb 28 2025, 12:49 AM IST

ಸಾರಾಂಶ

ಕಳೆದ ೪೦ ವರ್ಷಗಳಿಂದ ನಮ್ಮ ಹಿರಿಯರು ಹೊಳವನಹಳ್ಳಿ ಗ್ರಾಮದಲ್ಲಿ ಬೇಡರ ಕಣ್ಣಪ್ಪ ಸ್ವಾಮಿಯ ದೇವಸ್ಥಾನ ನಿರ್ಮಾಣ ಮಾಡಿ, ಪ್ರತಿ ವರ್ಷ ಮಹಾಶಿವರಾತ್ರಿ ಹಬ್ಬದ ದಿನ ಆರತಿ ಮಾಡುವ ಮೂಲಕ ಶಿವರಾತ್ರಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ಕೊರಟಗೆರೆ

ತಾಲೂಕಿನ ಹೊಳವನಹಳ್ಳಿ ಗ್ರಾಮದಲ್ಲಿ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಬೇಡರ ಕಣ್ಣಪ್ಪ ಸೇವಾ ಸಮಿತಿಯಿಂದ ಕಣ್ಣಪ್ಪನಿಗೆ ಮಹಿಳೆಯರಿಂದ ಆರತಿ ಮಹೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.

ಪ್ರತಿ ವರ್ಷದಂತೆ ಶಿವರಾತ್ರಿ ಹಬ್ಬದ ದಿನದಂದು ಉಪವಾಸ ಜಾಗರಣೆ ಮಾಡಿ ಮಾರನೇ ದಿನ ಹೊಳವನಹಳ್ಳಿ ಗ್ರಾಮದ ವಾಲ್ಮೀಕಿ ಸಮುದಾಯದಿಂದ ವಿವಿಧ ವಾದ್ಯಗಳೊಂದಿಗೆ ಆರತಿ ಮಹೋತ್ಸವದಲ್ಲಿ ಸಮುದಾಯದ ನೂರಾರು ಮಹಿಳೆಯರು ಆರತಿ ಹೊತ್ತು ಮೆರವಣಿಗೆಯೊಂದಿಗೆ ಸಾಗಿ ಬೇಡರ ಕಣ್ಣಪ್ಪ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.

ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷೆ ಕವಿತಾ ಮಾತನಾಡಿ, ಹೊಳವನಹಳ್ಳಿ ಗ್ರಾಮದ ನಾಯಕ ಜನಾಂಗದಿಂದ ಪ್ರತಿವರ್ಷದಂತೆ ಈ ವರ್ಷವೂ ಶಿವರಾತ್ರಿ ಹಬ್ಬದಂದು ಆರತಿ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಶಿವರಾತ್ರಿ ಹಬ್ಬದಂದು ಸಮುದಾಯದ ಪ್ರತಿಯೊಬ್ಬರೂ ಉಪವಾಸ ವ್ರತಾಚರಣೆ ಮಾಡಿ, ಹಬ್ಬದ ನಂತರ ಮಹಿಳೆಯರು ಗದ್ದಿಗೆ ಮಾರಮ್ಮ ತಾಯಿಯ ದೇವಸ್ಥಾನದಿಂದ ಬೇಡರ ಕಣ್ಣಪ್ಪ ಸ್ವಾಮಿ ದೇವಾಲಯದವರೆಗೆ ಆರತಿ ಹೊತ್ತು ಮೆರವಣಿಗೆಯಲ್ಲಿ ಸಾಗಿ ಸ್ವಾಮಿಗೆ ಪೂಜೆ ಸಲ್ಲಿಸುವುದು ಇಲ್ಲಿನ ವಿಶೇಷವಾಗಿದೆ ಎಂದು ಹೇಳಿದರು.

ಬೇಡರ ಕಣ್ಣಪ್ಪ ಸೇವಾ ಸಮಿತಿ ಅಧ್ಯಕ್ಷ ಜಯರಾಜು ಮಾತನಾಡಿ, ಕಳೆದ ೪೦ ವರ್ಷಗಳಿಂದ ನಮ್ಮ ಹಿರಿಯರು ಹೊಳವನಹಳ್ಳಿ ಗ್ರಾಮದಲ್ಲಿ ಬೇಡರ ಕಣ್ಣಪ್ಪ ಸ್ವಾಮಿಯ ದೇವಸ್ಥಾನ ನಿರ್ಮಾಣ ಮಾಡಿ, ಪ್ರತಿ ವರ್ಷ ಮಹಾಶಿವರಾತ್ರಿ ಹಬ್ಬದ ದಿನ ಆರತಿ ಮಾಡುವ ಮೂಲಕ ಶಿವರಾತ್ರಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಇಂದು ಜನಾಂಗದ ಮಹಿಳೆಯರು ಸುಡುವ ಬಿಸಿಲಿನಲ್ಲಿ ಆರತಿ ಹೊತ್ತು ಈ ಮಹೋತ್ಸವದಲ್ಲಿ ಪಾಲ್ಗೊಂಡು ಧಾರ್ಮಿಕ ಪೂಜಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದು, ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಸಮಿತಿಯಿಂದ ಆಯೋಜಿಸಲಾಗಿತ್ತು ಎಂದರು.

ಬೇಡರ ಕಣ್ಣಪ್ಪ ಸೇವಾ ಸಮಿತಿ ಕಾರ್ಯಕಾರಿ ಮಂಡಳಿ ಸದಸ್ಯರು, ವಾಲ್ಮೀಕಿ ಜನಾಂಗದ ಮಹಿಳೆಯರು, ಯುವಕರು ಉಪಸ್ಥಿತರಿದ್ದರು.