ಉಡುಪಿ: ತುಳುನಾಡಿನ ಆಚಾರ-ವಿಚಾರವನ್ನು ಪುಸ್ತಕದಲ್ಲಿ ಓದಿ ಸಂಸ್ಕೃತಿ, ಆಚರಣೆಗಳ ಬಗ್ಗೆ ಕೇಳಿದ್ದೆವು. ಆದರೆ ಈಗ ಅದನ್ನು ಆಟಿದ ಲೇಸ್ ಮೂಲಕ ಕಣ್ತುಂಬಿಕೊಂಡು, ಸವಿಯುವ ಅವಕಾಶವು ದೊರೆತಿದೆ ಎಂದು ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶ ಕಿರಣ್.ಎಸ್. ಗಂಗಣ್ಣನವರ್ ಹೇಳಿದರು.
ತುಳುನಾಡಿನ ಸಾಂಪ್ರದಾಯಿಕ ಆಹಾರ ಪದ್ಧತಿ, ಸಂಸ್ಕೃತಿ ಹಾಗೂ ಕಲಾ ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರ ಸಂಘವು ಆಟಿದ ಲೇಸ್ ಮತ್ತು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಉಡುಪಿ ವಕೀಲರ ಸಂಘದ ಮಾಜಿ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ ಮಾತನಾಡಿ, ಪ್ರಥಮ ಬಾರಿಗೆ ಆಟಿಯ ಲೇಸ್ ಕಾರ್ಯಕ್ರಮ ಆಯೋಜನೆಗೊಂಡಿರುವುದು ಸಂತಸ ತಂದಿದೆ. ಇಂತಹ ಕಾರ್ಯಕ್ರಮಗಳು, ನಮ್ಮ ತುಳುನಾಡಿನ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಉಪಾಧ್ಯಕ್ಷ ದೇವದಾಸ್ ವಿ. ಶೆಟ್ಟಿಗಾರ್ ವಹಿಸಿದ್ದರು. ವೇದಿಕೆಯಲ್ಲಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ, ಕುಂದಾಪುರ ವಕೀಲರ ಸಂಘದ ಪ್ರ.ಕಾರ್ಯದರ್ಶಿ ಪಿ.ಜಯಚಂದ್ರ ಶೆಟ್ಟಿ, ಹಿರಿಯ ವಕೀಲರಾದ ವಾಣಿ.ವಿ.ರಾವ್ ಉಪಸ್ಥಿತರಿದ್ದರು.ವಕೀಲೆ ರೂಪ ಪ್ರಾರ್ಥಿಸಿದರು ವಕೀಲರಾದ ಸುದರ್ಷರಾಜೆ ಆಟಿದ ವಿಶೇಷತೆ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು. ಯುವ ವಕೀಲರಾದ ಐಶ್ವರ್ಯಾ ನಿರೂಪಿಸಿದರು.