ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಪ್ರಥಮ ಪ್ರಯತ್ನ ಯಶಸ್ವಿಯಾದರೆ ಕೊನೆಯವರೆಗೂ ಶುಭಫಲ ದೊರೆಯುತ್ತದೆ. ಆಟಿ ಹಬ್ಬದ ಆಚರಣೆಗಳು ಹಲವಾರು ಕಡೆಗಳಲ್ಲಿ ನಡೆದಿದ್ದರೂ ಇದು ಎಲ್ಲರಿಗೂ ಮಾದರಿ ಯಾಗಿದೆ ಎಂದು ಕೊಡಗು ಗೌಡ ಸಮಾಜಗಳ ಅಧ್ಯಕ್ಷ ಆನಂದ ಕರಂದ್ಲಾಜೆ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.ಗೌಡ ಸಮಾಜ ಚೇರಂಬಾಣೆ ಮತ್ತು ಗೌಡ ಮಹಿಳಾ ಒಕ್ಕೂಟ ಚೇರಂಬಾಣೆ ಇವರ ಸಂಯುಕ್ತ ಆಶ್ರಯದಲ್ಲಿ ಆಟಿ ಜಂಬರ 2025 ಕಾರುಗುಂದ ಗೌಡ ಸಮಾಜದಲ್ಲಿ ಆಯೋಜಿಸಿದ್ದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಪ್ರಮಾಣದ ಸಾಂಪ್ರದಾಯಿಕ ತಿನಿಸು ಗಳನ್ನು ಮಾಡಿ ಪ್ರದರ್ಶನ ಮಾಡಿರುವುದು ಶ್ಲಾಘನೀಯ. ಇಂತಹ ಅಚ್ಚುಕಟ್ಟಾದ ಕಾರ್ಯಕ್ರಮಕ್ಕೆ ಪೈಪೋಟಿ ನೀಡುವುದು ಕೂಡ ಕಷ್ಟವೇ ಎಂದರು.ಸಂಘಟನೆ ಬಲವರ್ಧನೆ ಸಾಧ್ಯ:
ಸಾಂಪ್ರದಾಯಿಕ ತಿಂಡಿ ತಿನಿಸುಗಳ ಪ್ರದರ್ಶನದ ಉದ್ಘಾಟನೆ ಮಾಡಿದ ಕೊಡಗು ದಕ್ಷಿಣ ಕನ್ನಡ ಒಕ್ಕಲಿಗ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಮೂಟೇರ ಪುಷ್ಪಾವತಿ ರಮೇಶ್ ಅವರು ಮಾತನಾಡಿ, ಈ ಬಗೆಯ ತಿಂಡಿ ತಿನಿಸುಗಳನ್ನು ಕಣ್ಣಿನಿಂದ ನೋಡಿರಲು ಸಾಧ್ಯವಿಲ್ಲ. ಕೇಳಿರಲು ಸಾಧ್ಯವೇ ಇಲ್ಲ. ಇಂತಹ ಸಂಪ್ರದಾಯಿಕ ತಿಂಡಿ ತಿನಿಸುಗಳನ್ನು ಪ್ರದರ್ಶನಕ್ಕೆ ಇರಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಪ್ರಶಂಸನೀಯ ಎಂದರು.ಸಾಂಪ್ರದಾಯಿಕ ಹಾಗೂ ಪಾರಂಪರಿಕ ವಸ್ತುಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರಾಂಶುಪಾಲರಾದ ಆನೇರ ಜಾನಕಿ ಮೋಹನ್ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಸಮಯೋಚಿತವಾಗಿ ಸಾಂದರ್ಭಿಕವಾಗಿ ಈ ಭಾಗದ ಜನರನ್ನು ಒಂದುಗೂಡಿಸಲು ಆಯೋಜಿಸಿದ ಈ ಕಾರ್ಯಕ್ರಮ ಪುಸ್ತಕ ರೂಪದಲ್ಲಿ ಹೊರಬಂದು ಶಾಶ್ವತವಾಗಿಯೇ ಜನ ಮಾನಸದಲ್ಲಿ ಉಳಿಯುವಂತಾಗಬೇಕು ಎಂದರು.
ಸಂಸ್ಕೃತಿಯ ಶ್ರೀಮಂತಿಕೆ ತೋರಿಸಿದ ಕಾರ್ಯಕ್ರಮಮುಖ್ಯ ಭಾಷಣಕಾರರಾಗಿ ಮಾತನಾಡಿದ ಪ್ರಾಂಶುಪಾಲರಾದ ಕೆಜಿ ದಿವಾಕರ ಅವರು ನಮ್ಮ ಆಹಾರಗಳು ಅಳಿಸಿ ಹೋಗುವ ಕಾಲಕ್ಕೆ ಇಂತಹ ಕಾರ್ಯಕ್ರಮ ಪುನಃ ಚೇತನ ನೀಡಿದೆ. ಹಾಗೆಯೇ ನಮ್ಮ ಆಚಾರ ವಿಚಾರವನ್ನು ಮುಂದಿನ ಪೀಳಿಗೆಗೆ ತಿಳಿಸಿ ಬೆಳೆಸುವ ದೃಷ್ಟಿಯಿಂದ ಮಹಿಳಾ ಒಕ್ಕೂಟದ ಸಹೋದರಿಯರು ಉತ್ತಮ ಹೆಜ್ಜೆ ಇಟ್ಟಿದ್ದಾರೆ. ಸುಮಾರು 170 ತಿಂಡಿ ತಿನಿಸುಗಳ ಪ್ರದರ್ಶನ ಮತ್ತು ನೂರಕ್ಕೂ ಹೆಚ್ಚು ಪಾರಂಪರಿಕ ವಸ್ತುಗಳ ಪ್ರದರ್ಶನ ಆಯೋಜಿಸುವುದು ಎಂದರೆ ಸುಲಭದ ಮಾತಲ್ಲ. ಇದು ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯನ್ನು ತೋರಿಸಿದ ಕಾರ್ಯಕ್ರಮ ಎಂದು ನುಡಿದರು. .
ಮುಖ್ಯ ಅತಿಥಿಗಳನ್ನು ಸಂಪ್ರದಾಯದಂತೆ ಸ್ವಾಗತಿಸಿ ಕಂಚಿಮಿಯ ಸ್ವಾಗತ ನೀಡಲಾಯಿತು. ಆಟಿ ಜಂಬರವನ್ನು ಸಮಾಜದ ಅಧ್ಯಕ್ಷರಾದ ಕೊಡಪಾಲು ಗಣಪತಿ ಅವರು ಉದ್ಘಾಟಿಸಿ ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಚೇರಂಬಾಣೆ ಗೌಡ ಸಮಾಜದ ಬೆನ್ನೆಲುಬಾಗಿ ರಚನೆಯಾಗಿರುವ ಮಹಿಳಾ ಒಕ್ಕೂಟದ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಗೌಡ ಜನಾಂಗದ ಸಂಸ್ಕೃತಿ ಬಹಳ ಶ್ರೀಮಂತ:
ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ತಮ್ಮ ಪ್ರಾಥಮಿಕ ನುಡಿಯಲ್ಲಿ ಗೌಡ ಜನಾಂಗದ ಸಂಸ್ಕೃತಿ ಬಹಳ ಶ್ರೀಮಂತವಾದುದು. ಇದಕ್ಕೆ ಸಾಕ್ಷಿಯಾಗಿ ಇಂದಿನ ತಿಂಡಿ ತಿನಿಸುಗಳ ಪ್ರದರ್ಶನ ಹಾಗೂ ಪಾರಂಪರಿಕ ವಸ್ತುಗಳಾಗಿವೆ. ಏಕೆಂದರೆ ಆಧುನಿಕ ಶೈಲಿಯ ಯಾವುದೇ ತಿಂಡಿ ತಿನಿಸುಗಳಿಗೆ ಇಂದಿನ ಕಾರ್ಯಕ್ರಮದಲ್ಲಿ ಅವಕಾಶವಿಲ್ಲ. ಆಧುನಿಕ ವಸ್ತುಗಳು ಇದರಲ್ಲಿ ಇಲ್ಲ. ಕೇವಲ ಚೇರಂಬಾಣೆ ವ್ಯಾಪ್ತಿಯ ಒಂದು ಕಾರ್ಯಕ್ರಮದಲ್ಲಿ ಇಂತಹ ದೊಡ್ಡ ಮಟ್ಟದ ಸಂಗ್ರಹ ಆಗಿರುವುದು ಸಂತಸದ ವಿಚಾರ ಎಂದರು..
ಕೊಡಗು ಗೌಡ ಸಮಾಜಗಳ ಒಕ್ಕೂಟದ ನಿರ್ದೇಶಕರಾದ ಪೇರಿಯನ ಉದಯ, ಪುದಿಯ ನೆರವನ ರೇವತಿ ರಮೇಶ್, ತಲಕಾವೇರಿ ದೇವತಕ್ಕರಾದ ಕೋಡಿ ಮೋಟಯ್ಯ ಭಾಗಮಂಡಲ ಪ್ರಗತಿಪರ ಜೇನು ಕೃಷಿಕರ ಸಂಘದ ಅಧ್ಯಕ್ಷರಾದ ಹೊಸೂರು ಸತೀಶ್ ಕುಮಾರ್, ತುಮ್ತಜಿ ಗಣೇಶ್, ಸಮಾಜದ ಉಪಾಧ್ಯಕ್ಷರಾದ ಕೆಕ್ಕಡ ದಿನೇಶ್, ಮಹಿಳಾ ಒಕ್ಕೂಟದ ಉಪಾಧ್ಯಕ್ಷರಾದ ಹೊಸೊಕ್ಲು ಲತಾ ಮೊಣ್ಣಪ್ಪ, ಕೂರನ ಸುಶೀಲ ಅಪ್ಪಾಜಿ, ಚೊಕ್ಕಾಡಿ ಪ್ರೇಮ ರಘವಯ್ಯ ಸೇರಿದಂತೆ ಗಣ್ಯರು, ದೇವನೂರು ಒಕ್ಕೂಟದ ಸದಸ್ಯರು ಸೇರಿದಂತೆ ಅತ್ಯಧಿಕ ಸಂಖ್ಯೆಯಲ್ಲಿ ಜನಾಂಗಬಾಂಧವರು ಅಭಿಮಾನಿಗಳು ನೆರೆದಿದ್ದರು. ಮಧ್ಯಾಹ್ನದ ಭೋಜನಕ್ಕಾಗಿ ಆಟಿ ವಿಶೇಷ ಖಾದ್ಯಗಳನ್ನು ತಯಾರಿಸಿ ನೀಡಲಾಗಿತ್ತು. ವಿಶೇಷವಾಗಿ ಕರಿ ಕಾಫಿ ಮನೆ ತಿಂಡಿ ಆಕರ್ಷಣೀಯವಾಗಿತ್ತು. ಗೌಡ ಸಮಾಜ ಹಾಗೂ ವೇದಿಕೆಯನ್ನು ಸಂಪೂರ್ಣವಾಗಿ ಈ ಸಂದರ್ಭದಲ್ಲಿ ಸಿಗುವ ಕಾಡು ಹೂವು ಮತ್ತು ಹಣ್ಣುಗಳಿಂದ ಅಲಂಕರಿಸಲಾಗಿತ್ತು. ಯಾವುದೇ ಕೃತಕ ಹೂ ಹಣ್ಣು ವಸ್ತುಗಳು ಕಂಡು ಬರಲಿಲ್ಲ.ಮಧ್ಯಾಹ್ನದ ನಂತರ ವಿದ್ಯಾರ್ಥಿಗಳಿಗೆ ಅರೆ ಭಾಷೆ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಿ ಶಿಕ್ಷಕರಾದ ತಳೂರು ಉಷಾರಾಣಿ, ನಡುವಟ್ಟಿರ ಸುಮಾ ತೀರ್ಪುಗಾರರಾಗಿ ಭಾಗವಹಿಸಿದ್ದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನರಂಜಿಸಿದವು. ಆಕರ್ಷಕ ಲಕ್ಕಿಡಿಪ್ ದಾಯನ ಯಶೋಧ ಮತ್ತು ಕಾಳೇರಮ್ಮನ ಅಶೋಕ್ ಅವರಿಗೆ ಅದೃಷ್ಟ ಒಲಿಯಿತು. ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರುಗಿದ ಆಟಿ ಜಂಬರ 2025 ಜನ ಮನ್ನಣೆ ಗಳಿಸುವಲ್ಲಿ ಯಶಸ್ವಿಯಾಯಿತು.ಸಮಾಜದ ಕಾರ್ಯದರ್ಶಿ ಬೆಳ್ಯನ ಚಂದ್ರಪ್ರಕಾಶ್ ಸ್ವಾಗತಿಸಿ ನಿರ್ದೇಶಕರಾದ ಕೊಡಗನ ತೀರ್ಥ ಪ್ರಸಾದ್ ವಂದಿಸಿದರು. ಮಹಿಳಾ ಒಕ್ಕೂಟದ ಕಾರ್ಯದರ್ಶಿ ಕೇಕಡ ಪೂಜಾ ನಾಗೇಂದ್ರ ಕಾರ್ಯಕ್ರಮ ನಿರೂಪಿಸಿದರು.