ಆಟಿ ಆರೋಗ್ಯದ ಸಂಸ್ಕೃತಿ: ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌

| Published : Aug 05 2024, 12:43 AM IST

ಆಟಿ ಆರೋಗ್ಯದ ಸಂಸ್ಕೃತಿ: ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌
Share this Article
  • FB
  • TW
  • Linkdin
  • Email

ಸಾರಾಂಶ

ಸುಮಾರು 300ಕ್ಕೂ ಅಧಿಕ ಜನರು ಉಚಿತ ಆಟಿ ಕಷಾಯ ಹಾಗೂ ಮೆಂತೆ ಗಂಜಿ ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ನಗರದ ಶರಬತ್‌ಕಟ್ಟೆ ಸಮೀಪದಲ್ಲಿರುವ ವೇದಮಾಯು ಆಯುರ್ವೇದ ಆಸ್ಪತ್ರೆಯಲ್ಲಿ ಆಟಿ ಅಮವಾಸ್ಯೆಯ ಹಾಲೆ ಮರದ ಕೆತ್ತೆಯ ಕಷಾಯ ಹಾಗೂ ಮೆಂತೆ ಗಂಜಿಯ ಉಚಿತ ವಿತರಣೆ ಭಾನುವಾರ ನಡೆಯಿತು.ಆಯುಷ್‌ ಇಲಾಖೆ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ದಕ್ಷಿಣ ಕನ್ನಡ ಪ್ರವಾಸೋದ್ಯಮ ಇಲಾಖೆ, ಮಂಗಳೂರಿನ ಸಾವಯವ ಕೃಷಿಕ ಬಳಗ ಹಾಗೂ ವೇದಮಾಯು ಆಯುರ್ವೇದ ಆಸ್ಪತ್ರೆಯ ಜಂಟಿ ಸಹಯೋಗದಲ್ಲಿ ಆಟಿ ಕಷಾಯದ ಕಾರ್ಯಕ್ರಮ ನಡೆಯಿತು.

ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ಅವರು ಆಟಿ ಕಷಾಯ ಕುಡಿಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಮ್ಮ ಪಾರಂಪರಿಕ ಪದ್ಧತಿ ಕೇವಲ ಆಚರಣೆಯಲ್ಲ, ಅದು ನಮ್ಮ ಪರಿಸರ, ದೈಹಿಕ ಆರೋಗ್ಯ ಒಳಗೊಂಡಿರುವ ಸಂಸ್ಕೃತಿಯಾಗಿದೆ. ಆಷಾಢ ಕಾಲದ ಬಿರುಮಳೆಗೆ ನಮ್ಮ ಪರಿಸರದಲ್ಲಿಯೇ ಸಿಗುವ ಅಂಶಗಳನ್ನು ಮದ್ದಾಗಿ ಸೇವಿಸುವುದನ್ನು ನಮ್ಮ ಪಾರಂಪರಿಕ ವೈದ್ಯಕೀಯ ಪದ್ಧತಿಗಳಾದ ಸಿದ್ಧ, ಆಯುರ್ವೇದದಲ್ಲಿ ತಲೆತಲಾಂತರಗಳಿಂದ ಅನುಭವದಾರಿಕೆಯ ಮೂಲಕ ಇಂದಿಗೂ ಅನುಕರಿಸಲಾಗುತ್ತಿದೆ ಎಂದರು.

ಜಿಲ್ಲಾ ಆಯುಷ್‌ ಅಧಿಕಾರಿ ಡಾ. ಮೊಹಮ್ಮದ್‌ ಇಕ್ಬಾಲ್‌, ಜಿಲ್ಲಾ ಪ್ರವಾಸೋದ್ಯಮ ಉಪ ನಿರ್ದೇಶಕ ಎನ್‌. ಮಾಣಿಕ್ಯ, ದಾಯ್ಜಿವಲ್ಡ್ ನ್ಯೂಸ್‌ನ ವಾಲ್ಟರ್‌ ನಂದಳಿಕೆ, ಜನಪದ ತಜ್ಞ ಮುಖೇಶ್‌ ಪಂಬದ, ಸಾವಯವ ಬಳಗದ ರತ್ನಾಕರ್‌, ಆಯುರ್ವೇದ ವೈದ್ಯ ಡಾ.ಸುರೇಶ್‌ ನೆಗಳಗುಳಿ ಇದ್ದರು.

ವೇದಮಾಯು ಆಯುರ್ವೇದ ಆಸ್ಪತ್ರೆಯ ಡಾ. ಕೇಶವರಾಜ್‌ ಸ್ವಾಗತಿಸಿದರು. ಬಾಲಕೃಷ್ಣ ನಿರೂಪಿಸಿದರು. ಸಾವಯವ ಬಳಗದ ಸದಸ್ಯರು ಆಟಿ ಕಷಾಯ ಹಾಗೂ ಮೆಂತೆ ಗಂಜಿ ವಿತರಣೆಯಲ್ಲಿ ಸಹಕರಿಸಿದರು. ಸುಮಾರು 300ಕ್ಕೂ ಅಧಿಕ ಜನರು ಉಚಿತ ಆಟಿ ಕಷಾಯ ಹಾಗೂ ಮೆಂತೆ ಗಂಜಿ ಸ್ವೀಕರಿಸಿದರು.