ಸಾರಾಂಶ
ಮಂಗಳೂರು: ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಮಂಗಳೂರು, ಪ್ರವಾಸೋದ್ಯಮ ಇಲಾಖೆ, ಬ್ಯಾಂಕ್ ಆಫ್ ಬರೋಡ ಹಾಗೂ ಕಲ್ಕೂರ ಪ್ರತಿಷ್ಠಾನ ಸಹಯೋಗದಲ್ಲಿ ತುಳುನಾಡಿನ ವಿಶೇಷ ‘ಆಟಿ ಕೂಟ’ ಕಾರ್ಯಕ್ರಮ ಭಾನುವಾರ ಪಿಲಿಕುಳ ನಿಸರ್ಗಧಾಮದ ಗುತ್ತಿನ ಮನೆಯಲ್ಲಿ ನಡೆಯಿತು.ತುಳುನಾಡಿನ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ವಿಶೇಷ ತಿಂಡಿ ತಿನಿಸುಗಳು, ಯಕ್ಷಗಾನ ಪ್ರದರ್ಶನ ಗಮನ ಸೆಳೆಯಿತು. ಸರಯೂ ಯಕ್ಷ ಬಳಗ ಕೋಡಿಕಲ್ ಇವರಿಂದ ‘ಮಹಾಶೂರ ಭೌಮಾಸುರ’ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು.ಆಟಿಯ ಊಟ: ವಿಶೇಷ ಆಟಿಯ ಊಟ ಸಿದ್ಧಪಡಿಸಲಾಗಿತ್ತು. ಅಂಬಟೆ ಉಪ್ಪಿನಕಾಯಿ, ತೆಕ್ಕರೆ ಪಚಡಿ, ನೀರು ಕುಕ್ಕು ಚಟ್ನಿ, ಉಪ್ಪಡ್ ಪಚ್ಚಿರ್ ಪಲ್ಯ, ಪತ್ರೊಡೆ, ಕಂಚಲ, ಅಂಬಡೆ ಮೆಣಸ್‌ಕಾಯಿ, ಕೊಟ್ಟಿಗೆ, ನುಗ್ಗೆ ಸೊಪ್ಪು ಹಲಸಿನ ಬೀಜ ಸುಕ್ಕ, ಸಾರ್ನಡ್ಡೆ ಪಾಯಸ, ತೇವು ತೇಟ್ಲ, ಪದ್ಪೆ, ತೇವುದ ದಂಟ್, ಅಂಬಡೆ ಸಾಂಬಾರ್, ಕರ್‌ಕುಂಬುಡ ಪುಳಿಕೊದ್ದೆಲ್, ಹಲಸಿನ ಹಣ್ಣಿನ ಗಾರಿಗೆ, ಹಲಸಿನ ಹಪ್ಪಳ, ಮೆಣಸು ಪೋಡಿ, ಕಣಿಲೆ, ಹೆಸರು ಮೊಳಕೆ ಗಸಿ, ಕುಡು ಸಾರು, ಜೀಗುಜ್ಜೆ ಪೋಡಿ, ತಜಂಕ್ ವಡೆ, ಚಟ್ಟಂಬಡೆ, ಅನ್ನ, ಮೊಸರು, ಮಜ್ಜಿಗೆ ಊಟವು ಆಟಿ ಕಾಲದ ಪರಂಪರೆಯನ್ನು ನೆನಪಿಸಿತು.
ಆಟಿ ಕೂಟ ಕಾರ್ಯಕ್ರಮವನ್ನು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎನ್.ಜಿ. ಮೋಹನ್ ಉದ್ಘಾಟಿಸಿದರು. ಉಪ ಸಮಿತಿ ಅಧ್ಯಕ್ಷ ಶ್ರೀನಿಕೇತನ, ಬ್ಯಾಂಕ್ ಆಫ್ ಬರೋಡ ಮ್ಯಾನೆಜರ್ ಜಗದೀಶ್, ಪ್ರಾಧಿಕಾರದ ಆಯುಕ್ತ ಡಾ.ಅರುಣ್ ಕುಮಾರ್, ಮಾಜಿ ಶಾಸಕ ಜೆ.ಆರ್. ಲೋಬೊ, ಯೋಜನಾಧಿಕಾರಿ ಡಾ. ನಿತಿನ್ ಕುಮಾರ್ ಮತ್ತಿತರರು ಇದ್ದರು. ರಾಮಕೃಷ್ಣ ಮರಾಠಿ ನಿರೂಪಿಸಿದರು.