ಸಾರಾಂಶ
ಮುಖಚಹರೆ ಗುರುತಿಸುವ ವ್ಯವಸ್ಥೆ ನೌಕರರ ಪಾಲಿಗೆ ಕರಾಳವಾಗಿದೆ. ಸರ್ಕಾರದ ಈ ನಿರ್ಧಾರದಿಂದ ನೌಕರರಿಗೆ ನೆಮ್ಮದಿ ಇಲ್ಲದಂತಾಗಿದೆ.
ಯಲಬುರ್ಗಾ:
ಅಂಗನವಾಡಿ ಕೇಂದ್ರದ ಮಕ್ಕಳ ಮುಖಚಹರೆ ಗುರುತಿಸುವ ವ್ಯವಸ್ಥೆ ಹಿಂಪಡೆಯಬೇಕು ಹಾಗೂ ನೌಕರರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಬೇಕು ಎಂದು ಆಗ್ರಹಿಸಿ ತಾಲೂಕು ಅಂಗನವಾಡಿ ನೌಕರರ ಸಂಘದ ಪದಾಧಿಕಾರಿಗಳು ಶಿಶು ಅಭಿವೃದ್ಧಿ ಇಲಾಖೆ ಎದುರು ಪ್ರತಿಭಟನೆ ನಡೆಸಿ, ಇಲಾಖೆ ಮೇಲ್ವಿಚಾರಕಿ ಮಾಧವಿ ವೈದ್ಯ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.ಸಂಘದ ತಾಲೂಕು ಅಧ್ಯಕ್ಷೆ ಲಲಿತಾ ಅರಳಿ ಮಾತನಾಡಿ, ಮುಖಚಹರೆ ಗುರುತಿಸುವ ವ್ಯವಸ್ಥೆ ನೌಕರರ ಪಾಲಿಗೆ ಕರಾಳವಾಗಿದೆ. ಸರ್ಕಾರದ ಈ ನಿರ್ಧಾರದಿಂದ ನೌಕರರಿಗೆ ನೆಮ್ಮದಿ ಇಲ್ಲದಂತಾಗಿದೆ. ಅಂಗನವಾಡಿ ಕೇಂದ್ರದಿಂದ ದೊರೆಯುವ ಪ್ರತಿಯೊಂದು ಸೌಲಭ್ಯಗಳಿಗೂ ಮುಖಚಹರೆ ವ್ಯವಸ್ಥೆ ಕಡ್ಡಾಯಗೊಳಿಸಿರುವುದು ಸರಿಯಲ್ಲ. ಈ ಪದ್ಧತಿ ಕೈಬಿಡುವಂತೆ ಈಗಾಗಲೇ ಅಂಗನವಾಡಿ ನೌಕರರು ಕೇಂದ್ರ ಸರ್ಕಾರಕ್ಕೆ ಸಾಕಷ್ಟು ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರ ಕೊಟ್ಟಿರುವ ಮೊಬೈಲ್‌ಗಳು ಕೂಡ ಗುಣಮಟ್ಟದಿಂದ ಕೂಡಿಲ್ಲ. ಸರ್ವರ್ ಸಮಸ್ಯೆ ಕಾಡುತ್ತಿದೆ. ಕೆಲವು ಫಲಾನುಭವಿಗಳು ಊರ ಹೊರ ವಲಯದಲ್ಲಿರುವ ಕಾರಣ ಮುಖಚಹರೆ ಗುರುತಿಸಲು ಸಾಧ್ಯವಾಗುತ್ತಿಲ್ಲ. ಆಧಾರ್ ನಂಬರ್‌ಗೆ ಜೋಡಣೆಯಾದ ಮೊಬೈಲ್ ನಂಬರ್ ಕೂಡ ಫಲಾನುಭವಿಗಳ ಬಳಿಯಿಲ್ಲ. ಅಲ್ಲದೆ ಮೊಬೈಲ್‌ನಲ್ಲಿ ರೀಚಾರ್ಜ್ ಇಲ್ಲದಿದ್ದರೆ ಒಟಿಪಿ ಸಹ ಬರುವುದಿಲ್ಲ. ಒಟಿಪಿ ಕೇಳಿದರೆ ಅಂಗನವಾಡಿ ನೌಕರರ ಮೇಲೆ ದೌರ್ಜನ್ಯ ನಡೆದಿರುವ ಉದಾಹರಣೆ ಇವೆ. ಹೀಗಾಗಿ ಅವೈಜ್ಞಾನಿಕ, ಸಮರ್ಥಿಸಿಕೊಳ್ಳದ ನೀತಿಗಳಿಂದಾಗಿ ಅಂಗನವಾಡಿ ನೌಕರರು ಭಾರಿ ಒತ್ತಡಗಳಿಗೆ ಒಳಗಾಗುತ್ತಿದ್ದಾರೆ. ಹಲವರು ಅನಾರೋಗ್ಯಕ್ಕೂ ಒಳಗಾಗಿದ್ದಾರೆ. ಡಿಜಿಟಲೀಕರಣದಿಂದ ಅಂಗನವಾಡಿ ನೌಕರರಿಗೆ ಮುಳುವಾಗಿ ಜೀವಕ್ಕೆ ಕುತ್ತಾಗಿ ಪರಿಣಮಿಸಿದೆ. ಎಫ್ಆರ್‌ಎಸ್ ಮುಂದುವರಿಸಬೇಕಾದರೆ ಪ್ರತಿಯೊಂದು ಅಂಗನವಾಡಿ ಕೇಂದ್ರಕ್ಕೂ ವೈಫೈ ಸೇವೆ, ಗುಣಮಟ್ಟದ ಲ್ಯಾಪ್‌ಟಾಪ್ ಒದಗಿಸಬೇಕು. ೫ಜಿ ಸೇವೆ ಹೊಂದಿರುವ ಮೊಬೈಲ್ ವಿತರಿಸಬೇಕು ಎಂದು ಒತ್ತಾಯಿಸಿದರು.ಪದಾಧಿಕಾರಿಗಳಾದ ಬಸಮ್ಮ ಉಣಚಗೇರಿ, ಪಾರ್ವತಿ ಛಲವಾದಿ, ಯಲ್ಲುಬಾಯಿ ವಣಗೇರಿ, ಪ್ರೇಮಾ, ಅಮರಮ್ಮ, ದಾಕ್ಷಾಯಿಣಿ, ವೇದಾ, ನೀಲಮ್ಮ, ಗಂಗಮ್ಮ ಇದ್ದರು.