ಖಾಸಗೀಕರಣ ಕೈಬಿಟ್ಟು, ರೈತರಿಗೆ ಉಚಿತ ವಿದ್ಯುತ್‌ ನೀಡಿ

| Published : May 16 2025, 01:56 AM IST

ಸಾರಾಂಶ

ವಿದ್ಯುತ್ ಖಾಸಗೀಕರಣ ವಿರೋಧಿಸಿ, ಗ್ರಾಮೀಣ ಭಾಗಕ್ಕೆ ಸಮರ್ಪಕ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಇಂಧನ ಸಚಿವರ ಅಣಕು ‍‍‍‍ಶವಯಾತ್ರೆ ಮೂಲಕ ಬೆಸ್ಕಾಂ ಗ್ರಾಮಾಂತರ ವಿಭಾಗದ ಎಇಇ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.

- ಇಂಧನ ಸಚಿವರ ಅಣಕು ಶವಯಾತ್ರೆ, ಪ್ರತಿಭಟನೆಯಲ್ಲಿ ರೈತ ಸಂಘ-ಹಸಿರು ಸೇನೆ ಒತ್ತಾಯ । ಬೆಸ್ಕಾಂ ಎಇಇಗೆ ಮನವಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ವಿದ್ಯುತ್ ಖಾಸಗೀಕರಣ ವಿರೋಧಿಸಿ, ಗ್ರಾಮೀಣ ಭಾಗಕ್ಕೆ ಸಮರ್ಪಕ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಇಂಧನ ಸಚಿವರ ಅಣಕು ‍‍‍‍ಶವಯಾತ್ರೆ ಮೂಲಕ ಬೆಸ್ಕಾಂ ಗ್ರಾಮಾಂತರ ವಿಭಾಗದ ಎಇಇ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.

ನಗರದ ಶ್ರೀ ಜಯದೇವ ವೃತ್ತದಿಂದ ಸಂಘದ ಜಿಲ್ಲಾಧ್ಯಕ್ಷ ಗುಮ್ಮನೂರು ಬಸವರಾಜ ಇತರರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಇಂಧನ ಸಚಿವರ ಪ್ರತಿಕೃತಿ ದಹಿಸಲಾಯಿತು. ಅಲ್ಲದೇ, ಬೆಸ್ಕಾಂ ಗ್ರಾಮಾಂತರ ಕಚೇರಿಗೆ ಮುತ್ತಿಗೆ ಹಾಕಿ, ರೈತರ ವಿವಿಧ ಬೇಡಿಕೆಗಳನ್ನು ಶೀಘ್ರ ಈಡೇರಿಸುವಂತೆ ಒತ್ತಾಯಿಸಿ, ಬೆಸ್ಕಾಂ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಗುಮ್ಮನೂರು ಬಸವರಾಜ ಮಾತನಾಡಿ, ರಾಜ್ಯವ್ಯಾಪಿ ಜಿಲ್ಲಾ ಕೇಂದ್ರಗಳಲ್ಲಿ ಇಂಧನ ಸಚಿವರ ಅಣಕು ಶವಯಾತ್ರೆ, ಪ್ರತಿಕೃತಿ ದಹನ ಹಾಗೂ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹೋರಾಟ ರೈತ ಸಂಘ ಹಮ್ಮಿಕೊಂಡಿದೆ. ಕೃಷಿ ಪಂಪ್‌ ಸೆಟ್‌ಗಳಿಗೆ ಸ್ಮಾರ್ಟ್ ಕಾರ್ಡ್, ಡಿಜಿಟಲ್ ಮೀಟರ್ ಅಳವಡಿಕೆಗೆ ₹10 ಸಾವಿರ ಠೇವಣಿ ಶುಲ್ಕ ನಿಗದಿಪಡಿಸಿದ್ದನ್ನು ಹಿಂಪಡೆಯಬೇಕು. ಕೇಂದ್ರ, ರಾಜ್ಯ ಸರ್ಕಾರಗಳು ವಿದ್ಯುತ್ ಕ್ಷೇತ್ರ ಖಾಸಗೀಕರಣ ನಿಲ್ಲಿಸಬೇಕು. ರೈತರಿಗೆ ವಿದ್ಯುತ್ ಪರಿಕರಗಳನ್ನು ಅಕ್ರಮ-ಸಕ್ರಮದಡಿ ಹಿಂದೆ ನೀಡುತ್ತಿದ್ದಂತೆ ಉಚಿತ ವಿದ್ಯುತ್ತನ್ನು ಗೌರವಯುತವಾಗಿ ನೀಡಬೇಕು ಎಂದರು.

ಸರ್ಕಾರ ಗಮನಹರಿಸಬೇಕು:

ವಿದ್ಯುತ್ ಸಂಪರ್ಕಕ್ಕೆ ರೈತರ ಆಧಾರ್ ಜೋಡಣೆ ಕೈ ಬಿಡಬೇಕು. ರೈತರ ಜಮೀನಿನಲ್ಲಿ 3-4 ಕೊಳವೆ ಬಾವಿಗಳಿದ್ದು, ಅಂತರ್ಜಲ ಕಡಿಮೆಯಾದ ಸ್ಥಿತಿಯಲ್ಲಿ ಆಧಾರ್ ಕಾರ್ಡ್ ಜೋಡಣೆ ಮಾಡಿದರೆ ರೈತರ ಬದುಕು ದುಸ್ತರವಾಗುತ್ತದೆ. ಶೀಘ್ರ ಯೋಜನೆಯಲ್ಲಿ ಸರ್ಕಾರ ಟಿ.ಸಿ.ಗಳನ್ನು ಮಾತ್ರ ನೀಡಲಿದೆ. ಉಳಿದ ಕಂಬ ಮತ್ತು ವೈಯರ್‌ಗಳನ್ನು ರೈತರು ಸ್ವಂತ ಖರ್ಚಿನಿಂದ ಮಾಡಿಸಲು ಸಾಧ್ಯವೇ ಇಲ್ಲ. ಸರ್ಕಾರವೇ ಉಚಿತವಾಗಿ ಇವೆಲ್ಲ ಸೌಲಭ್ಯ ನೀಡಬೇಕು. ಸೋಲಾರ್ ಪಂಪ್ ಸೆಟ್‌ಗಳ ಮುಖಾಂತರ 500 ಅಡಿ ಆಳದಿಂದ 1200 ಅಡಿ ಆಳದ ಕೊಳವೆ ಬಾವಿಗಳಿಂದ ನೀರೆತ್ತಲು ಸಾಧ್ಯವಿಲ್ಲ. ಈ ಬಗ್ಗೆಯೂ ಸರ್ಕಾರ ಗಮನಹರಿಸಲಿ ಎಂದು ಆಗ್ರಹಿಸಿದರು.

ಪ್ರಥಮ ಆದ್ಯತೆ ಮೇರೆಗೆ ಸ್ಪಂದಿಸಿ:

ಶಾಲಾ-ಕಾಲೇಜು ಓದುತ್ತಿರುವ ಗ್ರಾಮೀಣರು, ರೈತಾಪಿ, ಕೃಷಿ ಕೂಲಿ ಕಾರ್ಮಿಕರ ಮಕ್ಕಳಿಗೆ, ಹೈನುಗಾರಿಕೆ ಮಾಡುವಂತಹ ರೈತಾಪಿ ಕುಟುಂಬಗಳಿಗೆ ಅನುಕೂಲ ಆಗುವಂತೆ ಸಂಜೆ 6ರಿಂದ ಬೆಳಗ್ಗೆ 6 ಗಂಟೆವರೆಗೆ ಸಮರ್ಪಕ, ಯೋಗ್ಯ ವಿದ್ಯುತ್ ಪೂರೈಸಬೇಕು. ಕೆಲ ಭಾಗದಲ್ಲಿ ರೈತರಿಗೆ, ಗ್ರಾಮೀಣ ಭಾಗಕ್ಕೆ ಸಮರ್ಪಕ ವಿದ್ಯುತ್ ನೀಡುತ್ತಿಲ್ಲ. ಈ ಹಿನ್ನೆಲೆ ನಗರ, ಗ್ರಾಮೀಣ ಪ್ರದೇಶಗಳೆನ್ನದೇ ಸಮರ್ಪಕ ವಿದ್ಯುತ್ ಪೂರೈಸಬೇಕು. ರೈತರ ಸಂಕಷ್ಟಗಳಿಗೆ ಬೆಸ್ಕಾಂ ಅಧಿಕಾರಿಗಳು, ರಾಜ್ಯ ಸರ್ಕಾರ ಪ್ರಥಮ ಆದ್ಯತೆ ಮೇಲೆ ಸ್ಪಂದಿಸಬೇಕು ಎಂದು ತಾಕೀತು ಮಾಡಿದರು.

ಸಂಘದ ಹರಿಹರ ತಾಲೂಕು ಅಧ್ಯಕ್ಷ ವಟಿಗನಹಳ್ಳಿ ಸುನೀಲ, ಚಿಕ್ಕಬೂದಿಹಾಳ ಭಗತ್ ಸಿಂಹ, ಕೆಂಚಮ್ಮನಹಳ್ಳಿ ಹನುಮಂತಪ್ಪ, ಮಾಯಕೊಂಡ ಅಧ್ಯಕ್ಷ ಚಿಕ್ಕತೊಗಲೇರಿ ಮಲ್ಲಿಕಪ್ಪ, ಕೋಲ್ಕುಂಟೆ ಉಚ್ಚೆಂಗೆಪ್ಪ, ಕುರ್ಕಿ ಹನುಮಂತಪ್ಪ, ಕೆಂಚಮ್ಮನಹಳ್ಳಿ ಹನುಮಂತಪ್ಪ, ಜಗಳೂರು ಅಧ್ಯಕ್ಷ ಭರಮಸಮುದ್ರ ಕುಮಾರ, ದೊಣೆಹಳ್ಳಿ ಲೋಕಣ್ಣ, ನೀರ್ಥಡಿ ಭೀಮಣ್ಣ, ಹುಚ್ಚವ್ವನ ಹಳ್ಳಿ ಸಿದ್ದಪ್ಪ ಇತರರು ಇದ್ದರು.

- - -

(ಬಾಕ್ಸ್‌) * ಉಗ್ರ ಹೋರಾಟದ ಎಚ್ಚರಿಕೆ ಬೆಸ್ಕಾಂ 11 ಕೆವಿ ಮತ್ತು ಎಲ್‌ಟಿ ಮಾರ್ಗಗಳಲ್ಲಿ ಸುಮಾರು 15 ವರ್ಷಗಳಿಂದಲೂ ಗಿಡ- ಮರಗಳು ಬೆಳೆದಿವೆ. ವಿದ್ಯುತ್ ತಾಗಿ ಅಂತಹ ಮಾರ್ಗದ ವೈಯರ್‌ಗಳು ಸುಟ್ಟು ಹೋಗುತ್ತವೆ. ಇದರಿಂದಾಗಿ ಕೃಷಿ ಪಂಪ್ ಸೆಟ್, ಟಿಸಿ, ಮೋಟಾರ್, ಕೇಬಲ್‌ಗಳು ಸುಟ್ಟು ಹೋಗಿ, ರೈತರಿಗೆ ಲಕ್ಷಾಂತರ ರು. ಬೆಳೆ ನಷ್ಟವಾಗುತ್ತದೆ. ಬೆಸ್ಕಾಂ ಪ್ರತಿ ವರ್ಷ ಕೋಟ್ಯಾಂತರ ರು. ನಷ್ಟವಾಗುತ್ತಿದೆ. ಅಧಿಕಾರಿಗಳು ನಿರ್ಲಕ್ಷ್ಯ ಕೈಬಿಟ್ಟು, ಸಮಸ್ಯೆಗಳಿಗೆ ಸ್ಪಂದಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಜಿಲ್ಲೆಯ ಶಾಸಕರು, ಜಿಲ್ಲಾಧಿಕಾರಿ ತಕ್ಷಣವೇ ಬೆಸ್ಕಾಂ ಅಧಿಕಾರಿಗಳ ಸಭೆ ಕರೆದು, ಸಮರ್ಪಕ ವಿದ್ಯುತ್ ಪೂರೈಕೆಗೆ ಸೂಚಿಸಬೇಕು. ಇಲ್ಲದಿದ್ದರೆ, ಸಚಿವರು, ಸಂಸದರು, ಶಾಸಕರ ನಿವಾಸಗಳ ಬಳಿ ಉಗ್ರ ಹೋರಾಟ ನಡೆಸಬೇಕಾದೀತು ಎಂದು ಬಸವರಾಜ ಎಚ್ಚರಿಸಿದರು.

- - -

-15ಕೆಡಿವಿಜಿ1:

ರೈತರ ಬೇಡಿಕೆಗಳ ನಿರ್ಲಕ್ಷ್ಯ ಖಂಡಿಸಿ ದಾವಣಗೆರೆಯಲ್ಲಿ ಗುರುವಾರ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಇಂಧನ ಸಚಿವರ ಅಣಕು ಶವಯಾತ್ರೆ ನಡೆಸಿ, ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಇ.ಇ. ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು.