ಸಾರಾಂಶ
ಜಿಲ್ಲೆಯ ಹೇಮಾವತಿ ನಾಲೆಯಿಂದ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಮೂಲಕ ರಾಮನಗರ ಜಿಲ್ಲೆಗೆ ನೀರು ಸರಬರಾಜು ಮಾಡುವ ಯೋಜನೆಯನ್ನು ಸರ್ಕಾರ ಕೂಡಲೇ ಕೈಬಿಡಬೇಕು
ಕನ್ನಡಪ್ರಭ ವಾರ್ತೆ ಶಿರಾ
ಜಿಲ್ಲೆಯ ಹೇಮಾವತಿ ನಾಲೆಯಿಂದ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಮೂಲಕ ರಾಮನಗರ ಜಿಲ್ಲೆಗೆ ನೀರು ಸರಬರಾಜು ಮಾಡುವ ಯೋಜನೆಯನ್ನು ಸರ್ಕಾರ ಕೂಡಲೇ ಕೈಬಿಡಬೇಕು. ಹಾಸನ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಕೆ.ಎಸ್. ಧನಂಜಯರಾಧ್ಯ ಒತ್ತಾಯಿಸಿದರು.ನಗರದ ಅಂಬೇಡ್ಕರ್ ಸರ್ಕಲ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಹಾಸನ ಸಂಸದರ ಅತ್ಯಾಚಾರ ಹಗರಣವನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಮಹಿಳಾ ಸಂಘಟನೆಗಳು ಹಾಗೂ ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ತುಮಕೂರು-ದಾವಣಗೆರೆ ರೈಲ್ವೆ ಮಾರ್ಗ, ತುಮಕೂರು ರಾಯದುರ್ಗ ರೈಲ್ವೆ ಮಾರ್ಗ, ಭದ್ರಾ ಮೇಲ್ದಂಡೆ ಯೋಜನೆ, ಎತ್ತಿನಹೊಳೆ, ಯೋಜನೆಗಳನ್ನು ಶೀಘ್ರವಾಗಿ ಅನುಷ್ಠಾನಗೊಳಿಸಬೇಕು. ಈ ಯೋಜನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾಗಳು ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದರು. ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಆರ್.ವಿ. ಪುಟ್ಟಕಾಮಣ್ಣ ಮಾತನಾಡಿ, ಶಿರಾದ ಅಂಬೇಡ್ಕರ್ ಸರ್ಕಲ್‌ನಿಂದ ದರ್ಗಾ ಸರ್ಕಲ್‌ವರೆಗೆ ರಸ್ತೆಯ ಎರಡು ಬದಿಗಳಲ್ಲಿ ಚರಂಡಿಯನ್ನು ನಿರ್ಮಿಸದೆ ಪಾದಚಾರಿಗಳ ರಸ್ತೆ ನಿರ್ಮಿಸುತ್ತಿರುವುದು ಅವೈಜ್ಞಾನಿಕವಾಗಿದೆ. ಇದನ್ನು ಕೂಡಲೇ ನಿಲ್ಲಿಸಿ ವೈಜ್ಞಾನಿಕವಾಗಿ ಮಾಡಬೇಕು. ನಗರದಲ್ಲಿ ನಗರಾಭಿವೃದ್ಧಿ ಇಲಾಖೆಯಿಂದ ಭೂಪರಿವರ್ತನೆಯಾದ ನಿವೇಶನಗಳನ್ನು ಎ ಖಾತಾ ಮತ್ತು ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆಯಾದ ನಿವೇಶನಗಳನ್ನು ಬಿ ಖಾತಾ ಎಂದು ವರ್ಗಿಕರಿಸಿರುವುದನ್ನು ರದ್ದುಪಡಿಸಬೇಕು. ಬಿತ್ತನೆ ಬೀಜ ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಸರಕಾರ ರೈತರಿಗೆ ಸಕಾಲದಲ್ಲಿ ಒದಗಿಸಬೇಕು. ರೈತರಿಗೆ ಬರಪರಿಹಾರ ಹಣವನ್ನು ತುರ್ತು ಬಿಡುಗಡೆ ಮಾಡಬೇಕು. ರೈತರ ಸಾಲಕ್ಕೆ ಜಮಾ ಮಾಡಿಕೊಳ್ಳಬಾರದು ಎಂದು ಒತ್ತಾಯಿಸಿದರು.ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಟೈರ್ ರಂಗನಾಥ್, ರೈತ ಸಂಘದ ತಾಲೂಕು ಅಧ್ಯಕ್ಷ ಸಣ್ಣಧ್ಯಾಮೇಗೌಡ ಭಾಗವಹಿಸಿದ್ದರು.