ಪಾಳು ಬಿಟ್ಟ ಗಣಿ ಕಂದಕಗಳು ಜಲಮೂಲಗಳಾಗಲಿ

| Published : Dec 22 2023, 01:30 AM IST

ಸಾರಾಂಶ

ರೈತ ಮತ್ತು ಸೈನಿಕ ದೇಶದ ಬೆನ್ನೆಲುಬು ಇದ್ದಂತೆ. ಒಬ್ಬನು ದೇಶಕ್ಕೆ ಅನ್ನ ನೀಡಿದರೆ ಇನ್ನೊಬ್ಬನು ಗಡಿಯಲ್ಲಿ ಕಾಯುವ ಮೂಲಕ ದೇಶ ರಕ್ಷಿಸುವ ಕೆಲಸ ಮಾಡುತ್ತಾನೆ. ಇಂಜಿನಿಯರುಗಳಾದ ನಿಮಗೆ ರೈತನಿಗೆ ಆತನ ಹೊಲಕ್ಕೆ ನೀರು ಒದಗಿಸುವ ಗುರುತರ ಜವಾಬ್ದಾರಿ ಇದೆ.

ತರಬೇತಿ ಸಮಾರೋಪ ಸಮಾರಂಭದಲ್ಲಿ ಸಂಗೂರಮಠಧಾರವಾಡ: ರಾಜ್ಯದಲ್ಲಿ ಬಳಸಿ ಪಾಳು ಬಿಟ್ಟಿರುವ ನೂರಾರು ಗಣಿ ಕಂದಕಗಳನ್ನು ಜಲಮೂಲಗಳಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಚಿಂತನೆ ನಡೆಯಬೇಕಾಗಿದೆ ಎಂದು ಹಟ್ಟಿ ಚಿನ್ನದ ಗಣಿ ಕಂಪನಿಯ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಪ್ರಭಾಕರ ಸಂಗೂರಮಠ ಹೇಳಿದರು.

ಇಲ್ಲಿನ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ ಆಶ್ರಯದಲ್ಲಿ ಜಲಸಂಪನ್ಮೂಲ ಇಲಾಖೆಯಲ್ಲಿ ಹೊಸದಾಗಿ ನೇಮಕಗೊಂಡ ಇಂಜಿನಿಯರುಗಳಿಗೆ ಏರ್ಪಡಿಸಲಾಗಿದ್ದ ಒಂದು ತಿಂಗಳ ಕಡ್ಡಾಯ ತರಬೇತಿ ಸಮಾರೋಪದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಳ್ಳಾರಿ, ವಿಜಯಪುರ, ಚಿಕ್ಕಮಗಳೂರು, ಚಿತ್ರದುರ್ಗ, ಧಾರವಾಡ, ಹಾವೇರಿ, ಕಲಬುರಗಿ, ಯಾದಗಿರಿ, ಕೋಲಾರ, ರಾಯಚೂರು ಮೊದಲಾದ ಜಿಲ್ಲೆಗಳಲ್ಲಿ ಗಣಿಗಾರಿಕೆ ನಡೆಸಿದ ಬಳಿಕ ಪಾಳು ಬಿಟ್ಟಿರುವ ನೂರಾರು ಕಣಿವೆಗಳಿವೆ. ಇವುಗಳನ್ನು ಮಳೆ ನೀರು ಸಂಗ್ರಹಿಸುವ, ಇಂಗಿಸುವ ತಾಣಗಳಾಗಿ ಪರಿವರ್ತಿಸುವ ಮೂಲಕ ಸುತ್ತಮುತ್ತಲಿನ ಅಂತರ್ಜಲ ಮೇಲಕ್ಕೆತ್ತುವ ದಿಸೆಯಲ್ಲಿ ಸರ್ಕಾರ ಯೋಜನೆ ರೂಪಿಸಲಿ ಎಂದು ಸಲಹೆ ಮಾಡಿದರು.

ರೈತ ಮತ್ತು ಸೈನಿಕ ದೇಶದ ಬೆನ್ನೆಲುಬು ಇದ್ದಂತೆ. ಒಬ್ಬನು ದೇಶಕ್ಕೆ ಅನ್ನ ನೀಡಿದರೆ ಇನ್ನೊಬ್ಬನು ಗಡಿಯಲ್ಲಿ ಕಾಯುವ ಮೂಲಕ ದೇಶ ರಕ್ಷಿಸುವ ಕೆಲಸ ಮಾಡುತ್ತಾನೆ. ಇಂಜಿನಿಯರುಗಳಾದ ನಿಮಗೆ ರೈತನಿಗೆ ಆತನ ಹೊಲಕ್ಕೆ ನೀರು ಒದಗಿಸುವ ಗುರುತರ ಜವಾಬ್ದಾರಿ ಇದೆ. ಇದನ್ನು ಅರಿತುಕೊಂಡು ಕಾಲುವೆಯ ಕೊನೆಯಂಚಿನ ರೈತನಿಗೆ ನೀರು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಜತೆಗೆ ನೀರು ಬಳಕೆದಾರರ ಸಹಕಾರ ಸಂಘ ರಚಿಸಿ, ನೀರಿನ ಮಿತವ್ಯಯ ಸಾಧಿಸುವ ನಿಟ್ಟಿನಲ್ಲಿ ಅವರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಾಲ್ಮಿ ನಿರ್ದೇಶಕ ಪ್ರೊ. ಬಿ.ವೈ.ಬಂಡಿವಡ್ಡರ ಮಾತನಾಡಿ, ರೈತ ಬೆವರು ಸುರಿಸಿ ದುಡಿಯಲು ಸಿದ್ಧನಿದ್ದಾನೆ. ಅವನ ಹೊಲಗಳಿಗೆ ನೀರು ಹರಿಸುವುದು ಇಂಜಿನಿಯರುಗಳ ಕರ್ತವ್ಯವಾಗಿದೆ. ಹೀಗಾಗಿ ಇಂಜಿನಿಯರುಗಳು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದಲ್ಲಿ ರೈತನ ಪ್ರಗತಿಯ ಜತೆಗೆ ದೇಶದ ಪ್ರಗತಿಯೂ ತನ್ನಿಂದ ತಾನೇ ಆಗುವುದು ಖಚಿತ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನೆಟಾಫಿಮ್ ಕಂಪನಿಯ ಅಧಿಕಾರಿ ಪ್ರಮೋದ ನಾಯ್ಕರ ಅವರನ್ನು ಸನ್ಮಾನಿಸಲಾಯಿತು. ಫಕೀರೇಶ ಅಗಡಿ ಸ್ವಾಗತಿಸಿದರು. ಸಹ ಸಂಯೋಜಕ ಚೇತನ ಪ್ರಭಾಚಂದ್ರ ಶೆಟ್ಟಿ ಪರಿಚಯಿಸಿದರು.

ಅನುರಾಧಾ ಮಳಗಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಶಿಬಿರಾರ್ಥಿ ಇಂಜಿನಿಯರುಗಳಿಗೆ ಪ್ರಮಾಣಪತ್ರ ಹಾಗೂ ಸಾಂಸ್ಕೃತಿಕ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.