ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನ ಅಬ್ಬಿನಹೊಳೆ ಠಾಣೆಯ ಪೊಲೀಸರು ಶ್ರೀಗಂಧ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ತಾಲೂಕಿನ ಶ್ರೀರಂಗ ಬಡಾವಣೆ ಇ-ಕುರುಬರಹಳ್ಳಿ ಗ್ರಾಮದ ವಿ. ರಾಜು ತಂದೆ ಲೇಟ್ ವೆಂಕಟಪ್ಪ ರವರಿಗೆ ಸೇರಿದ ಇಕ್ಕನೂರು ಕುರುಬರಹಳ್ಳಿ ಮಧ್ಯೆಯಿರುವ ರಿನಂ. 13/3 ರ 4 ಎಕರೆ ಜಮೀನಿನಲ್ಲಿ 300 ಶ್ರೀಗಂಧದ ಸಸಿಗಳನ್ನು ಹಾಕಿದ್ದರು. ಅವುಗಳಲ್ಲಿ ಸೆ.3ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು 3 ಶ್ರೀಗಂಧದ ಮರಗಳನ್ನು ಕತ್ತರಿಸಿ ಮರದ ಮೇಲ್ಭಾಗ ಅಲ್ಲಿಯೇ ಬಿಟ್ಟು ಮರದ ಕಾಂಡದ ಭಾಗವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.
3 ಮರದ ತುಂಡು ಸುಮಾರು 50 ರಿಂದ 60 ಕೆಜಿ. ತೂಕವಿದ್ದು, ಅವುಗಳ ಅಂದಾಜು ಮೌಲ್ಯ ಸುಮಾರು ₹1ಲಕ್ಷ ಬೆಲೆ ಬಾಳುತ್ತಿತ್ತು. ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿಕೊಂಡು ಹೋದವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಿ ಎಂದು ರೈತರು ಅಬ್ಬಿನಹೊಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.ಕಳುವಾದ ಮಾಲು ಮತ್ತು ಆರೋಪಿಗಳನ್ನು ಪತ್ತೆ ಮಾಡುವ ಸಲುವಾಗಿ ಅಬ್ಬಿನಹೊಳೆ ಪೊಲೀಸ್ ಠಾಣೆಯ ಪಿಎಸ್ಐ ಬಾಹುಬಲಿ ಎಂ. ಪಡನಾಡ, ಜಿ. ಮಂಜುನಾಥ್ ಹಾಗೂ ಸಿಬ್ಬಂದಿಯವರನ್ನು ಒಳಗೊಂಡ ತಂಡವು ಆರೋಪಿತರ ಕುರಿತಂತೆ ಬಾತ್ಮೀದಾರರಿಂದ ಮಾಹಿತಿಯನ್ನು ಸಂಗ್ರಹಿಸಿ ಸೆ.8 ರಂದು ಆಂಧ್ರದ ಕುಂದುರ್ಪಿ ಮಂಡಲದ ವಡ್ದೆಪಾಳ್ಯದ ಕೊಟ್ಟೂರಪ್ಪ, ಓಬಣ್ಣ, ಈರಣ್ಣ ಹಾಗೂ ಚಳ್ಳಕೆರೆ ತಾಲೂಕು ಜಾಜೂರು ಗ್ರಾಮದ ಸಿದ್ದಣ್ಣ ಎನ್ನುವವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಆಗ ಆರೋಪಿಗಳು ಅಬ್ಬಿನಹೊಳೆ ಪೊಲೀಸ್ ಠಾಣೆ ವ್ಯಾಪ್ತಿಯ ಇಕ್ಕನೂರು, ಕುರುಬರಹಳ್ಳಿ ಗ್ರಾಮದ ಮಧ್ಯವಿರುವ ವಿ.ರಾಜು ಅವರ ಜಮೀನಿನಲ್ಲಿ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇವರಿಂದ ಸುಮಾರು ₹60000 ಮೌಲ್ಯದ 30 ಕೆಜಿ 640 ಗ್ರಾಂ ತೂಕದ ಶ್ರೀಗಂಧದ ಮರದ ತುಂಡುಗಳನ್ನು ಮತ್ತು ಕಳ್ಳತನಕ್ಕೆ ಬಳಸಿದ 2 ಗರಗಸ, 1 ಬಾಚಿ, 2 ಮೋಟಾರ್ ಸೈಕಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಅಬ್ಬಿನಹೊಳೆ ಪೊಲೀಸ್ ಠಾಣೆಯ ಪಿಎಸ್ಐ ಬಾಹುಬಲಿ ಎಂ. ಪಡನಾಡ ಮತ್ತು ಜಿ. ಮಂಜುನಾಥ್ ಹಾಗೂ ಸಿಬ್ಬಂದಿಗಳಾದ ನಾಗರಾಜ್, ನಿಂಗರಾಜು, ದೇವೇಂದ್ರಪ್ಪ, ದಾದಾ ಖಲಂದರ್, ನಾಗಣ್ಣ, ನಾಗರಾಜ ಮತ್ತು ರುದ್ರೇಶರವರನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.