ಕಾಲ್ನಡಿಗೆಯಲ್ಲಿ ಮೆಕ್ಕಾ ತಲುಪಿದ ಉಪ್ಪಿನಂಗಡಿಯ ಅಬ್ದುಲ್ ಖಲೀಲ್

| Published : Feb 03 2024, 01:48 AM IST

ಸಾರಾಂಶ

ದ.ಕ ಜಿಲ್ಲೆ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕ ಎಂಬಲ್ಲಿರುವ ಮಹಮ್ಮದ್ - ನಫೀಸಾ ದಂಪತಿ ಮಗನಾದ ಅಬ್ದುಲ್ ಖಲೀಲ್ ಯಾತ್ರೆ ಪೂರ್ಣಗೊಳಿಸಲು ಒಂದು ವರ್ಷ ಎರಡು ದಿನಗಳ ಕಾಲಾವಧಿಯಲ್ಲಿ ಬರೋಬ್ಬರಿ ೮೧೫೦ ಕಿ.ಮೀ. ದೂರವನ್ನು ನಡಿಗೆಯ ಮೂಲಕ ಸಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಕಳೆದ ೨೦೨೩ ರ ಜನವರಿ ೩೦ ರಂದು ಉಪ್ಪಿನಂಗಡಿಯ ಪೆರಿಯಡ್ಕದಿಂದ ಮುಸಲ್ಮಾನರ ಪವಿತ್ರ ನಗರಿ ಸೌದಿ ಅರೇಬಿಯಾದಲ್ಲಿರುವ ಮೆಕ್ಕಾ ಕ್ಷೇತ್ರಕ್ಕೆ ಕಾಲ್ನಡಿಗೆಯ ಯಾತ್ರೆ ಕೈಗೊಂಡಿದ್ದ ಅಬ್ದುಲ್ ಖಲೀಲ್ ಅಲಿಯಾಸ್ ನೌಷಾದ್ ಬಿ.ಕೆ. ಎಸ್. (24ವ) ಸೋಮವಾರ ಮೆಕ್ಕಾಂ ಕ್ಷೇತ್ರವನ್ನು ತಲುಪಿದ್ದಾರೆ. ಈ ಮೂಲಕ ತಮ್ಮ ಸುಧೀರ್ಘಾವಧಿಯ ಕಾಲ್ನಡಿಗೆ ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ದ.ಕ ಜಿಲ್ಲೆ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕ ಎಂಬಲ್ಲಿರುವ ಮಹಮ್ಮದ್ - ನಫೀಸಾ ದಂಪತಿ ಮಗನಾದ ಅಬ್ದುಲ್ ಖಲೀಲ್ ಯಾತ್ರೆ ಪೂರ್ಣಗೊಳಿಸಲು ಒಂದು ವರ್ಷ ಎರಡು ದಿನಗಳ ಕಾಲಾವಧಿಯಲ್ಲಿ ಬರೋಬ್ಬರಿ ೮೧೫೦ ಕಿ.ಮೀ. ದೂರವನ್ನು ನಡಿಗೆಯ ಮೂಲಕ ಸಾಗಿದ್ದಾರೆ. ಅದಕ್ಕಾಗಿ ಅವರು ಭಾರತ, ಪಾಕಿಸ್ತಾನ, ಓಮನ್, ಯುಎಇ ಮತ್ತು ಸೌದಿ ಅರೇಬಿಯಾವನ್ನು ದಾಟಿರುತ್ತಾರೆ. ಪಾಕಿಸ್ತಾನದಲ್ಲಿ ಮಾತ್ರ ಅವರ ಕಾಲ್ನಡಿಗೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ವಾಘ ಗಡಿಯ ಮೂಲಕ ಪಾಕ್ ಪ್ರವೇಶಿಸಿದ ಬಳಿಕ ವಿಮಾನದಲ್ಲಿ ಓಮನ್ ದೇಶವನ್ನು ಪ್ರವೇಶಿಸಿ ಬಳಿಕ ಅಲ್ಲಿಂದ ಕಾಲ್ನಡಿಗೆಯನ್ನು ಮುಂದುವರೆಸಿದ್ದರು. ಉಳಿದೆಲ್ಲಾ ದೇಶಗಳಲ್ಲಿಯೂ ಅವರಿಗೆ ಅಲ್ಲಿನ ಆಡಳಿತ ಪೂರ್ಣ ಪ್ರಮಾಣದ ಸಹಕಾರವನ್ನು ಒದಗಿಸಿತ್ತು.

ಯಾತ್ರೆಯ ಯಶಸ್ಸನ್ನು ತಾಯಿಗೆ ಸಮರ್ಪಿಸುತ್ತೇನೆ: ಈ ಬಗ್ಗೆ ಮೆಕ್ಕಾ ನಗರದಿಂದಲೇ ಪತ್ರಿಕೆಯೊಂದಿಗೆ ಮಾತನಾಡಿದ ಅಬ್ದುಲ್ ಖಲೀಲ್, ಸುಧೀರ್ಘ ಪ್ರಯಾಣದ ನನ್ನ ಯಾತ್ರೆ ಗುರಿ ತಲುಪಿದಾಗ ಭಾವಪರವಶನಾದೆ. ನನ್ನ ಈ ಯಾತ್ರೆಗೆ ನಂಬಿದ ದೇವರು ಸಹಕಾರ ನೀಡಿದ್ದಾರೆ. ಈ ನನ್ನ ಯಾತ್ರೆಯ ಯಶಸ್ಸನ್ನು ನನ್ನ ತಾಯಿಗೆ ಸಮರ್ಪಿಸುತ್ತೇನೆ. ಹುಟ್ಟು ಭಾರತೀಯನಾದ ನಾನು ಭಾರತೀಯ ಜೀವನ ಪರಂಪರೆಯಲ್ಲಿ ಕಾಣಸಿಗುವ ಕಾಲ್ನಡಿಗೆ ಯಾತ್ರೆಯ ಬಗ್ಗೆ ಆಸಕ್ತನಾಗಿದ್ದೆ. ಅದಕ್ಕಾಗಿ ಇಷ್ಟು ದೂರದ ಯಾತ್ರೆಯನ್ನು ಆಯ್ಕೆ ಮಾಡಿಕೊಂಡಿದ್ದೆ. ನನ್ನ ನಿಲುವನ್ನು ಒಪ್ಪದ ಕೆಲ ಮಂದಿ ನಿರಂತರ ನಿಂದಿಸಿದರು. ಅವಮಾನಿಸಿದರು. ಆದರೆ ದೇವರ ಕೃಪೆ ನನ್ನ ಪಾಲಿಗಿತ್ತು. ದೇಹಾರೋಗ್ಯವನ್ನು ನನಗಿತ್ತು. ಎಲ್ಲರೂ ಜಾತಿ ಮತ ತಾರತಮ್ಯವಿಲ್ಲದೆ ನನಗೆ ತುಂಬಾ ಒಳ್ಳೆ ರೀತಿಯಲ್ಲಿ ಸಹಕಾರ ನೀಡಿದ್ದಾರೆ. ನನ್ನ ದೇಶದಲ್ಲಿ ಇನ್ನು ಎಲ್ಲರೂ ಒಂದಾಗಿ ಸೌಹಾರ್ದತೆಯಿಂದ ಬಾಳುವಂತಾಗಬೇಕೆಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ. ಮೆಕ್ಕಾದಲ್ಲಿ ನಾಲ್ಕು ತಿಂಗಳ ಕಾಲ ಇದ್ದು, ಹಜ್ ನಿಯಾವಳಿಯನ್ನು ಪೂರ್ಣಗೊಳಿಸಿ ಭಾರತಕ್ಕೆ ವಾಪಸ್‌ ಬರುವುದಾಗಿ ತಿಳಿಸಿದ್ದಾರೆ.