ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಸಂಜೀವಿನಿ ಕಾರ್ಯಕ್ರಮದ ಮೇಳಗಳಿಂದ ಮಹಿಳಾ ಸ್ವ ಸಹಾಯ ಸಂಘಗಳಿಗೆ, ಮಾರುಕಟ್ಟೆ ದೊರೆಯುವುದಲ್ಲದೆ, ಮುಂದುವರೆದು ಆನ್ಲೈನ್ ಫ್ಲಾಟ್ ಫಾರ್ಮ್ ಗಳಾದ ಅಮೇಜಾನ್ ನಲ್ಲಿ ದೊರೆಯುವಂತೆ ಮಾಡಬಹುದು ಎಂದು ಜಿಪಂ ಸಿಇಒ ಕೆ.ಎಂ. ಗಾಯತ್ರಿ ಹೇಳಿದರು.ಜಿಪಂನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕೌಶಲ್ಯಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಮತ್ತು ಜಿಪಂ ಸಹಯೋಗದಲ್ಲಿ ಆಯೋಜಿಸಿದ್ದ ದೀಪ ಸಂಜೀವಿನಿ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡಿದರು.ದೀಪಾವಳಿ ಹಬ್ಬದ ಪ್ರಯುಕ್ತ ದೀಪ ಸಂಜೀವಿನಿ ಕಾರ್ಯಕ್ರಮದಡಿ ಸ್ವ-ಸಹಾಯ ಗುಂಪಿನ ಮಹಿಳೆಯರು ತಾಯಾರಿಸಿದ ಮಣ್ಣಿನ ಹಣತೆ ಹಾಗೂ ಹಬ್ಬದ ವಿಶೇಷ ತಿಂಡಿ ತಿನಿಸುಗಳ ಮಳಿಗೆಗಳ ಮೇಳವನ್ನು ಬಹಳ ಕಡಿಮೆ ಸಮಯದಲ್ಲಿ ಆಯೋಜಿಸಿದ್ದು, ಇದು ಕೇವಲ ಜಿಪಂ ವ್ಯಾಪ್ತಿಗೆ ಸೀಮಿತವಾಗಿತ್ತು. ಆದರೆ ಮುಂಬರುವ ದಿನಗಳಲ್ಲಿ ಇದರ ವ್ಯಾಪ್ತಿಯನ್ನು ಹೆಚ್ಚಿಸಲಾಗುವುದು ಎಂದು ಅವರು ತಿಳಿಸಿದರು.ಸ್ವ ಸಹಾಯ ಗುಂಪು ಗ್ರಾಮೀಣ ಬಡಜನರ ಒಂದು ಸಣ್ಣ ಹಾಗೂ ಆರ್ಥಿಕವಾಗಿ ಏಕರೂಪದ ಬಾಂಧವ್ಯದ ಗುಂಪಾಗಿದ್ದು, ಅವರು ನಿಯಮಿತವಾಗಿ ಸಾಧಾರಣ ಮೊತ್ತದ ಹಣವನ್ನು ಉಳಿಸಲು ಸ್ವಯಂಪ್ರೇರಣೆಯಿಂದ ಒಟ್ಟುಗೂಡುತ್ತಾರೆ. ಈ ರೀತಿ ಮೇಳದಲ್ಲಿ ಜಿಲ್ಲೆಯ ವಿವಿಧ ತಾಲೂಕಿನ ಮಹಿಳೆಯರು ಭಾಗವಹಿಸಿದ್ದರಿಂದ ಮಹಿಳೆಯರಿಗೆ ಗುಡಿ ಕೈಗಾರಿಕೆ ಕುರಿತು ಅರಿವು ಮೂಡಿಸಲು ಸಹಕಾರಿಯಾಯಿತು ಎಂದರು.ಈ ರೀತಿಯ ಮಾರಾಟ ಮಳಿಗೆಯಲ್ಲಿ ಮಹಿಳಾ ಸಂಘದಿಂದ ಮಹಿಳೆಯರು ಹೆಚ್ಚು ಭಾಗವಹಿಸಿ, ಉಳಿತಾಯ ಮಾಡಿ ನಿರಂತರ ಲಾಭ ಪಡೆಯಬಹುದು. ತಾಲೂಕು ಮಟ್ಟದಲ್ಲಿ ಪ್ರತಿ ತಿಂಗಳು ಈ ರೀತಿಯ ಕಾರ್ಯ ಚಟುವಟಿಕೆಗಳಲ್ಲಿ ಮಹಿಳೆಯರು ಪಾಲ್ಗೊಳ್ಳಬೇಕು ಎಂದರು. ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಅನೇಕ ಬ್ಯಾಂಕ್ ಗಳಲ್ಲಿ ಲೋನ್, ವಿವಿಧ ಸಂಘ ಸಂಸ್ಥೆಯಿಂದ ಸಹಾಯಧನಗಳು ದೊರೆಯುತ್ತವೆ. ಅವನ್ನು ಬಳಸಿಕೊಂಡು ಮಹಿಳೆಯರು ಆರ್ಥಿಕವಾಗಿ ಮುಂದುವರೆದು ಸ್ವಾವಲಂಬಿ ಜೀವನ ನಡೆಸಬೇಕು. ಇತರೆ ಮಹಿಳೆಯರಿಗೂ ಮಾದರಿಯಾಗಬೇಕು ಎಂದು ಅವರು ಸಲಹೆ ನೀಡಿದರು.ಮಹಿಳಾ ಸ್ವ-ಸಹಾಯ ಸಂಘಗಳು ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ ಈ ಮಾರಾಟ ಮೇಳ ಆಯೋಜಿಸಿದ್ದು, ನೀವು ತಯಾರಿಸಿರುವ, ಉತ್ಪಾದಿಸುವ ನಿಮ್ಮ ಉತ್ಪನ್ನಗಳಗೆ ಬೇಡಿಕೆ ಹೆಚ್ಚುವುದರಿಂದ ನೀವು ಕೂಡ ಸಮಾಜದಲ್ಲಿ ಗುರುತಿಸಿಕೊಳ್ಳಬಹುದು ಎಂದರು.ಮುಂದಿನ ದಿನಗಳಲ್ಲಿ ಅವುಗಳಿಗೆ ತಕ್ಕಂತೆ ಈ ರೀತಿಯ ಮಾರಾಟ ಮೇಳ ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು.ಈ ವೇಳೆ ಸ್ವ- ಸಹಾಯ ಸಂಘದ ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.ಮೇಳದಲ್ಲಿ ಸಂಜೀವಿನಿ- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಟಿ. ನರಸೀಪುರ ತಾಲೂಕಿನ ದೊಡ್ಡ ಮಲಗೂಡು ಸಂಜೀವಿನಿ ಎನ್.ಆರ್.ಎಲ್.ಎಂ ಭೀಮಬಾಯಿ ಮಹಿಳಾ ಸ್ವಸಹಾಯ ಸಂಘದ ಮಣ್ಣಿನ ಕರಕುಶಲ ವಸ್ತುಗಳು, ಬೆಟ್ಟದಪುರ, ನಂಜನಗೂಡಿನ ರಾಂಪುರ, ಅಂಕನಹಳ್ಳಿ ಗ್ರಾಪಂ ಮಳಿಗೆಗಳು ಕಂಡುಬಂದವು. ವಿವಿಧ ರೀತಿಯ ಪೂಜಾ ಸಮಾಗ್ರಿಗಳು, ಸುವಾಸನೆ ಬೀರುವ ಗಂಧದಕಡ್ಡಿ, ಸಾಂರಾಣಿ, ಗೃಹ ಅಲಂಕಾರಿಕ ವಸ್ತುಗಳು, ದೀಪಗಳು, ಮರದಿಂದ ತಾಯಾರಿಸಿದ ಸಾಮಾಗ್ರಿಗಳು, ಪೇಟಿಂಗ್, ಸುಗಂಧಿತ ದ್ರವ್ಯ, ಸೇರಿದಂತೆ ಇತರ ವಸ್ತುಗಳು ದೀಪಾವಳಿ ಮಾರಾಟ ಮೇಳದಲ್ಲಿ ಗಮನ ಸೆಳೆದವು.ಕಾರ್ಯಕ್ರಮದಲ್ಲಿ ಜಿಪಂ ಸಿಪಿಒ ಪ್ರಭುಸ್ವಾಮಿ, ಲೆಕ್ಕಾಧಿಕಾರಿ ಸಿದ್ಧಗಂಗಮ್ಮ, ವಿವಿಧ ತಾಲೂಕುಗಳ ಸಂಜೀವಿನಿ ಸಂಘದ ಸದಸ್ಯರು ಇದ್ದರು.