ಸಾರಾಂಶ
ಭಕ್ತರ ಬೇಡಿಕೆಗಳಿಗೆ ಫಲ ನೀಡುತ್ತಿರುವ ಸ್ವಾಮಿಯ ಆಶೀರ್ವಾದ ಫಲದಿಂದ 186 ಅಡಿ ಎತ್ತರದ ಭವ್ಯವಾದ ರಾಜಗೋಪುರ ಸೇರಿದಂತೆ ದೇವಾಲಯವು ರಾಜ್ಯದಲ್ಲಿಯೇ ವಿಶಿಷ್ಠ, ವಿಶೇಷವಾಗಿ ರೂಪುಗೊಳ್ಳುತ್ತಿದೆ .
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ರೇವತಿ ನಕ್ಷತ್ರದ ಅಂಗವಾಗಿ ತಾಲೂಕಿನ ಕಲ್ಲಹಳ್ಳಿ ಭೂವರಾಹನಾಥ ಸ್ವಾಮಿಯ 17 ಅಡಿ ಎತ್ತರದ ಶಿಲಾಮೂರ್ತಿಗೆ ಅಭಿಷೇಕ, ಪುಷ್ಪಾಭಿಷೇಕ ಹಾಗೂ ಶ್ರೀನಿವಾಸ ಕಲ್ಯಾಣ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿದವು.1 ಸಾವಿರ ಲೀಟರ್ ಹಾಲು, 500 ಲೀಟರ್ ಎಳನೀರು, 500 ಲೀಟರ್ ಕಬ್ಬಿನ ಹಾಲು, ಜೇನುತುಪ್ಪ, ಹಸುವಿನ ತುಪ್ಪ, ಸುಗಂಧ ದ್ರವ್ಯಗಳು ಪವಿತ್ರ ಗಂಗಾಜಲದಿಂದ ಅಭಿಷೇಕ ಮಾಡಿ, ಮಲ್ಲಿಗೆ, ಜಾಜಿ, ಸಂಪಿಗೆ, ಸೇವಂತಿಗೆ, ಪಾರಿಜಾತ, ಗುಲಾಬಿ, ಕಮಲ ಸೇರಿದಂತೆ ಪವಿತ್ರ ಪತ್ರೆಗಳು, ಧವನ, ತುಳಸಿ ಮುಂತಾದ 58 ವಿವಿಧ ಬಗೆಯ ಪುಷ್ಪಗಳಿಂದ ಪುಷ್ಪಾಭಿಷೇಕ ಮಾಡಿ ಶ್ರೀನಿವಾಸನ ಮೂರ್ತಿಗೆ ಕಲ್ಯಾಣೋತ್ಸವ ನಡೆಸಿ ಸಂಭ್ರಮಿಸಲಾಯಿತು.
ದೇವಾಲಯದ ವ್ಯವಸ್ಥಾಪನಾ ಸಮಿತಿ ಮ್ಯಾನೇಜಿಂಗ್ ಟ್ರಸ್ಟಿ ಡಾ.ಶ್ರೀನಿವಾಸ ರಾಘವನ್ ಮಾತನಾಡಿ, ಸಾಲಿಗ್ರಾಮ ಶ್ರೀ ಕೃಷ್ಣ ಶಿಲೆಯ ಭೂವರಾಹನಾಥ ಮೂರ್ತಿಗೆ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಿ ಲೋಕಕಲ್ಯಾಣಾರ್ಥವಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು.ಭಕ್ತರ ಬೇಡಿಕೆಗಳಿಗೆ ಫಲ ನೀಡುತ್ತಿರುವ ಸ್ವಾಮಿಯ ಆಶೀರ್ವಾದ ಫಲದಿಂದ 186 ಅಡಿ ಎತ್ತರದ ಭವ್ಯವಾದ ರಾಜಗೋಪುರ ಸೇರಿದಂತೆ ದೇವಾಲಯವು ರಾಜ್ಯದಲ್ಲಿಯೇ ವಿಶಿಷ್ಠ, ವಿಶೇಷವಾಗಿ ರೂಪುಗೊಳ್ಳುತ್ತಿದೆ ಎಂದು ತಿಳಿಸಿದರು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾದಿಗಳಿಗೆ ಪುಳಿಯೋಗರೆ, ಬಿಸಿಬೇಳೆ ಬಾತ್, ಉಪ್ಪಿಟ್ಟು, ಸಿಹಿ ಪೊಂಗಲ್ ಹಾಗೂ ಸಜ್ಜಪ್ಪ ಪ್ರಸಾದ ವಿತರಿಸಲಾಯಿತು.ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ಪತ್ನಿ, ಪುತ್ರ ಕಾಂತರಾಜು ಸೇರಿದಂತೆ ಕುಟುಂಬ ಸಮೇತರಾಗಿ ಇಂದು ಸಂಜೆ ಭೂ ವರಾಹನಾಥ ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.