ಶಿಕ್ಷಣದಿಂದ ಸ್ವಾವಲಂಭಿ ಜೀವನ ನಡೆಸುವ ಸಾಮರ್ಥ್ಯ ಪ್ರಾಪ್ತ: ಸಚಿವ ಡಿ.ಸುಧಾಕರ್

| Published : Jul 28 2024, 02:09 AM IST

ಶಿಕ್ಷಣದಿಂದ ಸ್ವಾವಲಂಭಿ ಜೀವನ ನಡೆಸುವ ಸಾಮರ್ಥ್ಯ ಪ್ರಾಪ್ತ: ಸಚಿವ ಡಿ.ಸುಧಾಕರ್
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಬದುಕಿನಲ್ಲಿ ಶಿಕ್ಷಣ ಬಹಳ ದೊಡ್ಡ ಪಾತ್ರವಹಿಸಲಿದ್ದು, ಶಿಕ್ಷಣ ಪಡೆಯುವುದರಿಂದ ಸ್ವಾವಲಂಬನೆ ಜೀವನ ನಡೆಸುವ ಸಾಮರ್ಥ್ಯ ಪ್ರಾಪ್ತವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ನಗರದ ತರಾಸು ರಂಗಮಂದಿರದಲ್ಲಿ ಶನಿವಾರ ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ತೋಟಗಾರಿಕೆ ಮಹಾವಿದ್ಯಾಲಯ ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕೃಷಿ ಶಿಕ್ಷಣ ಮಾಹಿತಿ ಕೊಡುವ ಉದ್ದೇಶದಿಂದ ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಪಿಯುಸಿ ಆದ ನಂತರ ಕೃಷಿ ಪದವಿಗಳು ಹಾಗೂ ಅವುಗಳಲ್ಲಿರುವ ಅವಕಾಶಗಳು, ಆಯ್ಕೆ ಬಗ್ಗೆ ಅರಿವಿನ ಕೊರತೆ ಹೋಗಲಾಡಿಸಲಾಗುತ್ತದೆ. ರಾಜ್ಯದಲ್ಲಿರುವ ಕೃಷಿ ಸಂಬಂಧಿತ ಶೈಕ್ಷಣಿಕ ಸಂಸ್ಥೆಗಳು ಮತ್ತು ಅಲ್ಲಿರುವ ಪದವಿಗಳು ಹಾಗೂ ಪ್ರವೇಶ ಪ್ರಕ್ರಿಯೆ ಬಗ್ಗೆ ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಿದ್ದು, ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.

ದೇಶದ ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಯಾಗಿರುವುದನ್ನು ಗಮನಿಸಿದ್ದೇವೆ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರಗಳು ಕೋಟ್ಯಂತರ ರುಪಾಯಿ ವೆಚ್ಚ ಮಾಡುತ್ತಿದೆ. ಸರ್ವರಿಗೂ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಶಾಲಾ-ಕಾಲೇಜು, ವಿಶ್ವವಿದ್ಯಾಲಯ, ಶೈಕ್ಷಣಿ ಸಂಸ್ಥೆ ಸ್ಥಾಪಿಸುವ ಮೂಲಕ ಶಿಕ್ಷಣವನ್ನು ಗ್ರಾಮೀಣ ವಿದ್ಯಾರ್ಥಿಗಳ ಬಳಿಗೆ ಕೊಂಡ್ಯೂಯುವ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳು ತಮ್ಮ ಬೌದ್ಧಿಕ ಸಾಮರ್ಥ್ಯ ಹಾಗೂ ಬುದ್ಧಿಮಟ್ಟ ಹೆಚ್ಚಳ ನಮ್ಮ ಮುಂದಿರುವ ದೊಡ್ಡ ಸವಾಲಾಗಿದೆ. ಬುದ್ಧಿ ಯಾರ ಸ್ವತ್ತೂ ಅಲ್ಲ. ವಿದ್ಯಾರ್ಥಿಗಳು ಬದ್ಧತೆ ಹಾಗೂ ಏಕಾಗ್ರತೆಯಿಂದ ಅಧ್ಯಯನಶೀಲರಾಗಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸುಧಾಕರ್ ಸಲಹೆ ಮಾಡಿದರು.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ. ಜಗದೀಶ್ ಮಾತನಾಡಿ, ಕೃಷಿ ವಿಜ್ಞಾನ ಪ್ರಪಂಚದಲ್ಲಿಯೇ ಅತೀ ಕಡಿಮೆ ಖರ್ಚಿನಲ್ಲಿ ಶಿಕ್ಷಣ ನೀಡುವ ಪದವಿಯಾಗಿದೆ. ಶೈಕ್ಷಣಿಕವಾಗಿ ಸಿಗುವ ಅವಕಾಶ ಬಳಸಿಕೊಂಡು ವಿದ್ಯಾಭ್ಯಾಸ ಪಡೆಯಬೇಕು ಎಂದು ಹೇಳಿದರು.

ಚಿತ್ರದುರ್ಗ ಜಿಲ್ಲೆ ಆರ್ಥಿಕವಾಗಿ ಹಿಂದುಳಿದಿರಬಹುದು. ಆದರೆ ಶೈಕ್ಷಣಿಕವಾಗಿ ಅಭಿವೃದ್ಧಿಯಾಗಿದೆ. ಹೊಳಲ್ಕೆರೆ ತಾಲೂಕು ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಪದವಿ ಪಡೆದಿದ್ದು, ದೇಶ-ವಿದೇಶಗಳಲ್ಲಿಯೂ ಪದವೀಧರರು ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದರು. ಚಳ್ಳಕೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನ ರಸಾಯನಶಾಸ್ತ ವಿಷಯದ ಉಪನ್ಯಾಸಕಿ ಶಾಂತಕುಮಾರಿ ಮಾತನಾಡಿ, ಕೃಷಿ ಶಿಕ್ಷಣ ಸುಗ್ಗಿ ಕಾರ್ಯಕ್ರಮ ಜಿಲ್ಲೆ ಪದವಿಪೂರ್ವ ವಿಜ್ಞಾನ ವಿದ್ಯಾರ್ಥಿಗಳಿಗೆ ಅತ್ಯವಶ್ಯಕವಾಗಿದ್ದು, ಪಿಯು ನಂತರದಲ್ಲಿ ಕೃಷಿ ಸಂಬಂಧಿತ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಸಾಕಷ್ಟು ಮಾಹಿತಿ ನೀಡಲಿದೆ ಎಂದರು. ಹರಿಯಬ್ಬೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಭೌತಶಾಸ್ತ ವಿಷಯದ ಉಪನ್ಯಾಸಕ ದತ್ತಾತ್ರೇಯ ಮಾತನಾಡಿದರು.

ಕಾರ್ಯಕ್ರಮದ ಅಂಗವಾಗಿ ತರಾಸು ಮಂದಿರದ ಆವರಣದಲ್ಲಿ ಕೃಷಿ ಯಂತ್ರೋಪಕರಣಗಳು ಹಾಗೂ ಕೃಷಿ ಬೆಳೆಗಳ ವಸ್ತುಪ್ರದರ್ಶನ ಮಳಿಗೆಗಳು, ಕೃಷಿ ಉತ್ಪನ್ನ ಮೌಲ್ಯವರ್ಧಿತ ಉತ್ಪನ್ನದ ಆಹಾರದ ತಿನಿಸುಗಳು ಪ್ರದರ್ಶಿಸಲಾಯಿತು.

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಡಾ.ಪಿ.ಕೆ.ಬಸವರಾಜ್, ಡಾ.ಬಿ.ಕೆ ಕುಮಾರಸ್ವಾಮಿ ಹಾಗೂ ಕುಲಸಚಿವ ಡಾ.ಕೆ.ಸಿ.ಶಶಿಧರ್, ತೋಟಗಾರಿಕೆ ಮಹಾವಿದ್ಯಾಲಯ ಡೀನ್ ಡಾ.ಕೆ.ಮಂಜಪ್ಪ, ಪದವಿಪೂರ್ವ ಶಿಕ್ಷಣ ಇಲಾಖೆ ಪುಟ್ಟಸ್ವಾಮಿ ಇದ್ದರು.