ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ ರದ್ದುಪಡಿಸಿ: ಶಾಂತನಗೌಡ

| Published : Aug 07 2024, 01:01 AM IST

ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ ರದ್ದುಪಡಿಸಿ: ಶಾಂತನಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಮುಡಾ ನಿವೇಶನ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನೀಡಿರುವ ಪ್ರಾಸಿಕ್ಯೂಷನ್ ರಾಜ್ಯಪಾಲರು ಕೂಡಲೇ ಹಿಂಪಡೆಯಬೇಕು. ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಮಾಡುತ್ತಿರುವ ಅನಗತ್ಯ ಆರೋಪ ಹಾಗೂ ಪಾದಯಾತ್ರೆ ಖಂಡನೀಯ ಎಂದು ಹೊನ್ನಾಳಿ ಕ್ಷೇತ್ರ ಶಾಸಕ ಡಿ.ಜಿ.ಶಾಂತನಗೌಡ ಹೇಳಿದ್ದಾರೆ.

- ಮುಡಾ ನಿವೇಶನ ನೆಪದಲ್ಲಿ ಸಿದ್ದರಾಮಯ್ಯ ವಿರುದ್ಧ ವಿಪಕ್ಷಗಳ ನಡೆ ಖಂಡಿಸಿ ಹೊನ್ನಾಳಿ ಬಂದ್‌ । ವ್ಯಾಪಾರ ವಹಿವಾಟು, ಸಂಚಾರ ಸ್ಥಗಿತ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಮುಡಾ ನಿವೇಶನ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನೀಡಿರುವ ಪ್ರಾಸಿಕ್ಯೂಷನ್ ರಾಜ್ಯಪಾಲರು ಕೂಡಲೇ ಹಿಂಪಡೆಯಬೇಕು. ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಮಾಡುತ್ತಿರುವ ಅನಗತ್ಯ ಆರೋಪ ಹಾಗೂ ಪಾದಯಾತ್ರೆ ಖಂಡನೀಯ ಎಂದು ಹೊನ್ನಾಳಿ ಕ್ಷೇತ್ರ ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಸಿದ್ದರಾಮಯ್ಯ ಅಭಿಮಾನಿ ಬಳಗ ಹಾಗೂ ಅಹಿಂದ ಮತ್ತು ಶೋಷಿತ ವರ್ಗಗಳ ಒಕ್ಕೂಟಗಳು ನೀಡಿದ್ದ ಹೊನ್ನಾಳಿ ಬಂದ್ ಹಾಗೂ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನ ಸಿದ್ದರಾಮಯ್ಯ ಅಭಿಮಾನಿ ಬಳಗ ಹಾಗೂ ಎಲ್ಲ ಶೋಷಿತ ಸಮುದಾಯಗಳ ಅಹಿಂದ ಒಕ್ಕೂಟದ ನೇತೃತ್ವದಲ್ಲಿ ನಡೆಸಿದ ಹೊನ್ನಾಳಿ ಬಂದ್ ಯಶಸ್ವಿಯಾಗಿದೆ. ಇದು ಕೇವಲ ಸ್ಯಾಂಪಲ್ ಮಾತ್ರ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಎಂದೂ ಕಂಡರಿಯದ ರೀತಿಯಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಜನತೆಯಿಂದ ತಕ್ಕ ಪಾಠ:

ಮುಡಾ ಹಗರಣ ಸಿದ್ದರಾಮಯ್ಯ ಅವರ ಕಾಲದಲ್ಲಿ ನಡೆದಿಲ್ಲ. ಇದು ಬಿಜೆಪಿ ಅಧಿಕಾರದಲ್ಲಿ ಇರುವಾಗ ನಡೆದಿದೆ. ಎಲ್ಲರಂತೆ ಸಿದ್ದಾರಾಮಯ್ಯ ಅವರ ಪತ್ನಿ ಅವರಿಗೂ ಮುಡಾ ನಿವೇಶನ ಹಂಚಿಕೆಯಾಗಿದೆ. ಇದರಲ್ಲಿ ಸಿದ್ದರಾಮಯ್ಯ ಪಾತ್ರವೇನೂ ಇಲ್ಲ. ಕಳಂಕರಹಿತ ರಾಜಕೀಯ ಜೀವನ ಪಾಲಿಸಿಕೊಂಡು ಬರುತ್ತಿರುವ ಸಿದ್ದರಾಮಯ್ಯ ವಿರುದ್ಧ ವಿರೋಧ ಪಕ್ಷಗಳು ಹಾಗೂ ಕೇಂದ್ರ ಸರ್ಕಾರ ಷಡ್ಯಂತ್ರ ನಡೆಸುತ್ತಿವೆ. ಅವರಿಗೆ ಮುಂದಿನ ದಿನಗಳಲ್ಲಿ ಈ ರಾಜ್ಯದ ಜನತೆಯೇ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಕೇಂದ್ರ ಸರ್ಕಾರ ಸಿಬಿಐ ಮುಂತಾದ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಕಾಂಗ್ರೆಸ್ ಮುಖಂಡರನ್ನು ನಾನಾ ರೀತಿಯಲ್ಲಿ ಹಗರಣಗಳಲ್ಲಿ ಸಿಲುಕಿಸುವ ಹಾಗೂ ತನಿಖೆಗೆ ಒಳಪಡಿಸಿ, ಅವರ ರಾಜಕೀಯ ಇಚ್ಛಾಶಕ್ತಿಗಳನ್ನು ಕುಂದಿಸುವ ಕೆಲಸ ಮಾಡುತ್ತಿದೆ. ದ್ವೇಷದ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ಕೇಂದ್ರದಲ್ಲಿ ಹೇಡಿ ಸರ್ಕಾರ:

ರಾಜ್ಯದಲ್ಲಿ ಬಡವರು, ದೀನ ದಲಿತರ ಪರವಾದ ಪ್ರಾಮಾಣಿಕ ಅಡಳಿತ ನೀಡುತ್ತಿರುವುದನ್ನು ಸಹಿಸದ ವಿರೋಧ ಪಕ್ಷದವರು ಇದೀಗ ಅವರ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಬಂಧನ, ಜಾರ್ಖಂಡ್ ಹೇಮಂತ್ ಸುರೇನ್ ಅವರ ವಿರುದ್ಧವೂ ಕೇಂದ್ರ ಸರ್ಕಾರ ಸುಳ್ಳು ಆರೋಪಗಳ ಮೂಲಕ ಜೈಲಿಗೆ ಕಳಿಸುವ ಹುನ್ನಾರ ಮಾಡಿದೆ. ಇದೊಂದು ಹೇಡಿ ಸರ್ಕಾರವಾಗಿದೆ ಎಂದು ಶಾಂತನಗೌಡ ಟೀಕಿಸಿದರು.

ತಾಲೂಕು ಕುರುಬ ಸಂಘ ಅಧ್ಯಕ್ಷ ನೆಲಹೊನ್ನೆ ಮೋಹನ ಮಾತನಾಡಿ, ರಾಜ್ಯದಲ್ಲಿ ಹಿಂದುಳಿದ ವರ್ಗದ ವ್ಯಕ್ತಿ ಮುಖ್ಯಮಂತ್ರಿಯಾಗಿ, ಅತ್ಯಂತ ಪ್ರಾಮಾಣಿಕವಾಗಿ ಯಶಸ್ವಿ ಆಡಳಿತ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಈ ಸಾಧನೆಯನ್ನು ಸಹಿಸದೇ ವಿಪಕ್ಷಗಳ ಷಡ್ಯಂತ್ರ ಖಂಡನೀಯ ಎಂದರು.

ಪ್ರತಿಭಟನೆ ನಂತರ ಪಟ್ಟಣದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿ ಉಪವಿಬಾಗಾಧಿಕಾರಿ ವಿ. ಅಭಿಷೇಕ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ತಹಶೀಲ್ದಾರ್ ಪಟ್ಟರಾಜಗೌಡ, ಹೆಚ್ಚುವರಿ ಎಸ್‌ಪಿ ವಿಜಯಕುಮಾರ್ ಸಂತೋಷ್, ಡಿವೈಎಸ್ಪಿ ರುದ್ರಪ್ಪ ಉಜ್ಜಿನಕೊಪ್ಪ, ಪಿ.ಐ.ಸುನೀಲ್ ಕುಮಾರ್, ತಾಲೂಕು ಕುರುಬ ಸಂಘದ ಅಧ್ಯಕ್ಷ ನೆಲಹೊನ್ನೇ ಮೋಹನ, ಕುರುಬ ಸಮಾಜದ ಉಪಾಧ್ಯಕ್ಷ ಕೆ.ಪುಟ್ಟಪ್ಪ, ಖಜಾಂಚಿ ಎಚ್.ಎ. ನರಸಿಂಹಪ್ಪ, ಅಲ್ಪಸಂಖ್ಯಾತ ಸಮುದಾಯ ಅಧ್ಯಕ್ಷ ಚೀಲೂರು ವಾಜೀದ್, ಬಂಜಾರ ಸಮಾಜದ ಅಧ್ಯಕ್ಷ ಅಂಜು ನಾಯ್ಕ, ಕುರುಬ ಸಮಾಜದ ಮಹಿಳಾ ಅಧ್ಯಕ್ಷೆ ಪಂಕಜಾ ಅರುಣ್ ಕುಮಾರ್, ಹಾಲು ಮತ ಸಮುದಾಯದ ರಾಜು ಕಣಗಣ್ಣಾರ, ಬೇಲಿಮಲ್ಲೂರು ನರಸಪ್ಪ, ದಿಡಗೂರು ಜಿ.ಎಚ್. ತಮ್ಮಣ್ಣ, ಕುಂಬಳೂರು ವಾಗೀಶ್, ಎ.ಡಿ.ಈಶ್ವರಪ್ಪ, ಉಪ್ಪಾದ ಸಮಾಜದ ಅಧ್ಯಕ್ಷ ಷಣ್ಮುಖಪ್ಪ, ಆರ್.ನಾಗಪ್ಪ, ಎಚ್.ಬಿ. ಅಣ್ಣಪ್ಪ ಸೇರಿದಂತೆ ನೂರಾರು ಅಹಿಂದ ಒಕ್ಕೂಟದ ಮುಖಂಡರು ಇದ್ದರು.

- - -

ಬಾಕ್ಸ್‌ * ವ್ಯಾಪಾರ-ವಹಿವಾಟು, ಸಂಚಾರ ಸ್ಥಗಿತ

ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ ಖಂಡಿಸಿ ಮಂಗಳವಾರ ನಡೆಸಿದ ಹೊನ್ನಾಳಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬಂದ್ ಹಿನ್ನೆಲೆ ಪಟ್ಟಣದ ಎಲ್ಲ ಅಂಗಡಿ -ಮುಂಗ್ಗಟ್ಟುಗಳು ಬಂದ್ ಆಗಿದ್ದವು. ಬಸ್‌ಗಳಿದ್ದರೂ ಪ್ರಯಾಣಿಕರು ಇಲ್ಲದೇ ಬಸ್ ನಿಲ್ದಾಣ ಭಣಗುಡುತ್ತಿತ್ತು. ಸರ್ಕಾರಿ ಕಚೇರಿಗಳು ಬ್ಯಾಂಕ್‌ಗಳಲ್ಲಿ ಮಾತ್ರ ಸಾರ್ವಜನಿಕ ಸೇವೆ ಎಂದಿನಂತೆ ಜಾರಿಯಲ್ಲಿತ್ತು. ಬಂದ್‌ಗೆ ಪಟ್ಟಣದ ವರ್ತಕರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.

- - - -6ಎಚ್.ಎಲ್.ಐ1:

ಹೊನ್ನಾಳಿಯಲ್ಲಿ ಮಂಗಳವಾರ ಸಿದ್ದರಾಮಯ್ಯ ಅಭಿಮಾನಿ ಬಳಗ, ಅಹಿಂದ ಮತ್ತು ಶೋಷಿತ ವರ್ಗಗಳ ಒಕ್ಕೂಟಗಳು ನಡೆಸಿದ ಹೊನ್ನಾಳಿ ಬಂದ್‌ ಹಾಗೂ ಪ್ರತಿಭಟನೆ ಸಭೆಯಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿದರು. ಬಳಿಕ ಉಪವಿಭಾಗಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

- - -

-6ಎಚ್.ಎಲ್.ಐ1ಎ.:

ಸದಾ ಜನ ಹಾಗೂ ವಾಹನಗಳಿಂದ ಕೂಡಿರುತ್ತಿದ್ದ ಹೊನ್ನಾಳಿ ಪಟ್ಟಣದ ರಸ್ತೆಗಳು ಜನರು, ವಾಹನ ಸಂಚಾರವಿಲ್ಲದೇ ಭಣಗುಟ್ಟಿದವು.